ಕರ್ನಾಟಕದಲ್ಲಿ ಪ್ರವಾಸೋದ್ಯಮ

ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವನ್ನು ಇಂದು ಒಂದು ಮುಖ್ಯ ಉದ್ಯಮವಾಗಿ ಗುರುತಿಸಲ್ಪಟ್ಟಿದೆ. ಅಂತರಾಷ್ಟ್ರೀಯ ಪ್ರವಾಸೋದ್ಯಮ ವಿಶ್ವದಲ್ಲೇ ಅತಿಹೆಚ್ಚು ವಿದೇಶಿ ವಿನಿಮಯಗಳಿಸುವ ಉದ್ಯಮವಾಗಿದೆ. ಇದರ ಜೊತೆಗೆ ಬಹಳಷ್ಟು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವು ಹೆಚ್ಚು ಉದ್ಯೋಗ ಸೃಷ್ಟಿಸುವ ಒಂದು ಉದ್ಯಮವಾಗಿ ಬೆಳೆದಿದೆ. ಪ್ರವಾಸೊದ್ಯಮವು ಒಂದು ಪ್ರದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ
ಪಡಿಸುವಲ್ಲಿ ಹಾಗು ಅಲ್ಲಿನ ಜನರ ಜೀವನ ಸ್ಥಿತಿ ಉತ್ತಮಗೊಳಿಸುವಲ್ಲಿ ನೆರವಾಗುತ್ತದೆ. ಪ್ರವಾಸೋದ್ಯಮದಿಂದ ಸ್ಥಳೀಯ ಜನರಿಗೆ ಕೆಲಸ ಸಿಗುವುದರಿಂದ ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಕಡಿಮೆಯಾಗುತ್ತದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಶೀಲ ದೇಶಗಳು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಬಡತನದ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ (WTO) ತಿಳಿಸುತ್ತದೆ.

ಭಾರತದಲ್ಲಿ ಕೆಲವೇ ಕೆಲವು ರಾಜ್ಯಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿವೆ. ಆದರಲ್ಲಿ ಮುಖ್ಯವಾಗಿ ಗೋವಾ, ಕೇರಳ, ಹಿಮಾಚಲ ಪ್ರದೇಶ, ರಾಜಾಸ್ತಾನ ಮತ್ತು ತಮಿಳುನಾಡು ರಾಜ್ಯಗಳನ್ನು ಹೆಸರಿಸಬಹುದು. ಈ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಹಾಗು ಜಾಗತಿಕ ಪ್ರವಾಸಿಗರಿಗೆ ಮಾಹಿತಿ ನೀಡುವಲ್ಲಿ ರಾಜ್ಯ ಸರ್ಕಾರಗಳು ಗಮನಹರಿಸಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಸೆಳೆಯುತ್ತಿವೆ. ಕರ್ನಾಟಕ ರಾಜ್ಯದಲ್ಲೂ ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕರ ಉತ್ತೇಜನ ನೀಡುತ್ತಿದ್ದರೂ ನಮ್ಮ ರಾಜ್ಯವು ಪ್ರವಾಸೋದ್ಯಮದಲ್ಲಿ ಬಹಳ ಹಿಂದಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ನಿತ್ಯಹರಿದ್ವರ್ಣದ ಕಾಡುಗಳಿಂದ ಕೂಡಿರುವ ಪಶ್ಚಿಮ ಘಟ್ಟಗಳ ಗಿರಿಶ್ರೇಣಿಗಳು, ಸುಂದರ ಕರಾವಳಿ ತೀರಗಳು, ಅನೇಕ ವಿಧವಾದ ಪ್ರಾಣಿ/ಪಕ್ಷಿ ಸಂಕುಲಗಳ ಬೀಡಾದ ವನ್ಯಧಾಮಗಳು, ರುದ್ರ ರಮಣೀಯ ಜಲಪಾತಗಳು, ಸುಂದರ ವಾಸ್ತುಶಿಲ್ಪಗಳಿಂದ ಕೂಡಿದ ದೇವಾಲಯಗಳು, ಐತಿಹಾಸಿಕ ಕೋಟೆಕೊತ್ತಲಗಳು ನಮ್ಮ ರಾಜ್ಯದಲ್ಲಿವೆ. ಇಷ್ಟೊಂದು ವೈವಿಧ್ಯತೆ ಇರುವ ಪ್ರವಾಸಿ ತಾಣಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಇಷ್ಟೆಲ್ಲಾ ಅವಕಾಶಗಳಿದ್ದರೂ ದೇಶದ ಹಾಗೂ ವಿದೇಶದ ಪ್ರವಾಸಿಗರನ್ನು ಸೆಳೆಯುವಲ್ಲಿ ನಮ್ಮ ರಾಜ್ಯ ಹಿಂದಿದೆ. ಪ್ರವಾಸಿ ತಾಣಗಳನ್ನು ತಲುಪಲು ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದು ಮತ್ತು ಪ್ರವಾಸಿಗಳು ತಂಗಲು ಸರಿಯಾದ ಊಟ ಹಾಗೂ ವಸತಿ ಸೌಕರ್ಯವಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣಗಳು. ಉದಾಹರಣೆಗೆ ನಮ್ಮ ರಾಜ್ಯದ ಸುಂದರ ಪ್ರವಾಸೀ ತಾಣವಾಗಬೇಕಾದ ಶಿವನಸಮುದ್ರದ ಗಗನಚುಕ್ಕಿ- ಭರಚುಕ್ಕಿ ಜಲಪಾತಗಳ ಪ್ರದೇಶದಲ್ಲಿ ಪ್ರವಾಸಿಗರಿಗೆ ಸರಿಯಾದ ಹೋಟೆಲ್ ವ್ಯವಸ್ಥೆ ಇಲ್ಲ. ಪ್ರವಾಸಿಗರು ಜಲಪಾತವನ್ನು ನೋಡಲೂ ಸರಿಯಾದ ವ್ಯವಸ್ಥೆ ಮಾಡಿಲ್ಲ. ಇಲ್ಲಿ ರೋಪ್ ವೇ ಅಥವಾ ತೂಗು ಸೇತುವೆ ಮಾಡಿದರೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಬಹುದು. ಬಿಸಿಲು, ಮಳೆ ಇತ್ಯಾದಿಯಿಂದ ಪ್ರವಾಸಿಗರಿಗೆ ರಕ್ಷಣೆ ನೀಡಲು ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ.

ಇತ್ತೀಚೆಗೆ ಸುದ್ದಿಯಲ್ಲಿರುವ ಹೊಗೇನಕಲ್ ಜಲಪಾತವನ್ನು ತಲುಪಲು ಕರ್ನಾಟಕದ ಕಡೆಯಿಂದ ಸರಿಯಾದ ರಸ್ತೆ ಇಲ್ಲ. ಹೊಗೇನಕಲ್ ಜಲಪಾತದ ಕರ್ನಾಟಕದ ಭಾಗದಲ್ಲಿ ಪ್ರವಾಸಿಗರಿಗೆ ಶೌಚಾಲಯವಾಗಲಿ, ಊಟ ವಸತಿಯಾಗಲಿ ಇಲ್ಲ. ಆದರೆ ಅದೇ ಹೊಗೇನಕಲ ಜಲಪಾತದ ತಮಿಳುನಾಡು ಭಾಗದಲ್ಲಿ ತಮಿಳುನಾಡು ಸರ್ಕಾರ ಪ್ರವಾಸಿಗರಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಇದರಿಂದ ಕರ್ನಾಟಕದ ಪ್ರವಾಸಿಗರೂ ಹೊಗೇನಕಲ್ ಜಲಪತವನ್ನು ನೋಡಲು ತಮಿಳುನಾಡಿನ ಕಡೆಗೆ ಹೋಗುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯ, ಅಲ್ಲಿನ ಸ್ಥಳೀಯ ಕನ್ನಡಿಗರಿಗೆ ಸಿಗಬೇಕದ ಕೆಲಸ, ವ್ಯಾಪಾರ ತಮಿಳುನಾಡಿನ ಪಾಲಾಗಿದೆ. ಈಗಲಾದರೂ ನಮ್ಮ ಸರ್ಕಾರ ಎಚ್ಚೆತ್ತು ಹೊಗೇನಕಲ್ ಜಲಪಾತದ ಕರ್ನಾಟಕದ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ, ಹೊಗೇನಕಲ್ ಜಲಪಾತವು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಜೊತೆಗೆ ಹೊಗೇನಕಲ್ ಜಲಪಾತಕ್ಕೆ ಕರ್ನಾಟಕದಿಂದ ಹೋಗುವ ದಾರಿ ಮಲೆಮಹದೇಶ್ವರ ಬೆಟ್ಟದ ಸುಂದರ ಕಾಡಿನ ಮದ್ಯೆ ಸಾಗುತ್ತದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮಲೆಮಹದೇಶ್ವರ ಬೆಟ್ಟ ಹಾಗೂ ಹೊಗೇನಕಲ್ ಜಲಪಾತಕ್ಕೆ ಪ್ಯಾಕೇಜ ಪ್ರವಾಸ ಏರ್ಪಡಿಸಿದರೆ ಹೊಗೇನಕಲ್‌ನ ಕರ್ನಾಟಕದ ಪ್ರದೇಶಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದು.

ಕರ್ನಾಟಕದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮತ್ತೊಂದು ಪ್ರವಾಸಿ ಸ್ಥಳ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ ಮತ್ತು ಕುದುರೆಮುಖ ಗಿರಿಧಾಮಗಳು. ಗಿರಿಧಾಮವೆಂದರೆ ತಂಪಾದ ಹಿತಕರವಾದ ಹವೆ, ಪ್ರಕೃತಿಯ ಸುಂದರ ನೋಟಗಳು ಮತ್ತು ಮುಖ್ಯವಾಗಿ ದೋಣಿವಿಹಾರಕ್ಕೆ ಸೌಲಭ್ಯವಿರಬೇಕು. ಕೆಮ್ಮಣ್ಣುಗುಂಡಿ ಕರ್ನಾಟಕದ ಸುಂದರ ಗಿರಿಧಾಮ. ಇಲ್ಲಿ ತಂಪಾದ ಹವೆ, ನಿಸರ್ಗ ರಮಣೀಯ ದೃಶ್ಯಗಳು ಇವೆ. ಆದರೆ ಇಲ್ಲಿಗೆ ತಲುಪಲು ರಸ್ತೆ ಸರಿಯಿಲ್ಲ. ಜೊತೆಗೆ ಇಲ್ಲಿ ಊಟ ವಸತಿ ಸೌಕರ್ಯವೂ ಸರಿಯಿಲ್ಲ. ಆದ್ದರಿಂದ ಈ ಸುಂದರ ಗಿರಿಧಾಮಕ್ಕೆ ಹೆಚ್ಚು ಜನ ಪ್ರವಾಸಿಗರು ಬರುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯು ಇಲ್ಲೊಂದು ಕೃತಕ ಕೆರೆಯನ್ನು ನಿರ್ಮಿಸಿ ದೋಣಿ ವಿಹಾರಕ್ಕೆ ಅನುಕೂಲ ಕಲ್ಪಿಸಿದರೆ ಗಿರಿಧಾಮದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಊಟಿ ಹಾಗೂ ಕೊಡೈಕೆನಾಲ್‌ನಲ್ಲಿರುವ ಕೆರೆಗಳು ಬ್ರಿಟೀಷರು ಕೃತಕವಾಗಿ ಅಭಿವೃದ್ಧಿಪಡಿಸಿದ ಕೆರೆಗಳು. ಈಗ ಅಲ್ಲಿನ ದೋಣಿ ವಿಹಾರ, ಗಿರಿಧಾಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಮ್ಮಣ್ಣುಗುಂಡಿ ಹತ್ತಿರದ ದತ್ತಪೀಠ(ಬಾಬಾಬುಡನ್‌ಗಿರಿ) ಮತ್ತು ಮುಳ್ಳಯ್ಯನಗಿರಿ (ಕರ್ನಾಟಕದ ಅತ್ಯುನ್ನತ ಶಿಖರ) ಗಳಲ್ಲಿ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಹೋಟೆಲ್‌ಗಳು, ವ್ಯೂ ಪಾಯಿಂಟ್‌ಗಳನ್ನು ಸ್ಥಾಪಿಸಿ ಅತ್ಯುತ್ತಮವಾದ ಗಿರಿಧಾಮಗಳಾಗಿ ಅಭಿವೃದ್ದಿ ಪಡಿಸಬಹುದು. ನೆರೆ ರಾಜ್ಯದ ಊಟಿ, ಕೊಡೈಕೆನಾಲ್, ಮುನ್ನಾರ್ ಮುಂತಾದ ಸ್ಥಳಗಳಿಗೆ ಮಧುಚಂದ್ರಕ್ಕೆ ಹೋಗುತ್ತಿರುವ ರಾಜ್ಯದ ಬಹಳಷ್ಟು ಜನ ನವವಿವಾಹಿತರನ್ನು ಮತ್ತು ನೆರೆರಾಜ್ಯದ ಪ್ರವಾಸಿಗರನ್ನು ಕೆಮ್ಮಣ್ಣುಗುಂಡಿ, ಬಾಬಾಬುಡನ್‌ಗಿರಿ ಮತ್ತು ಮುಳ್ಳಯ್ಯನಗಿರಿ ಗಿರಿಧಾಮಗಳಿಗೆ ಆಕರ್ಷಿಸಬಹುದು. ಕುದುರೆಮುಖದಲ್ಲಿರುವ ಲಕ್ಯಾ ಜಲಾಶಯವನ್ನು ಸುಂದರ ದೋಣಿ ವಿಹಾರ ಕೇಂದ್ರವಾಗಿ ಅಭಿವೃದ್ಧಿ ಪಡಿಸಿದರೆ ಉತ್ತಮವಾದ ಪ್ರವಾಸಿ ತಾಣವಾಗುತ್ತದೆ.

ಕರ್ನಾಟಕದ ಕರಾವಳಿ ತೀರಗಳು ಮನಮೋಹಕವಾಗಿವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ತೀರದಲ್ಲಿ ಪ್ರವಾಸೋದ್ಯಮವನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸಬೇಕಾಗಿದೆ. ಉಡುಪಿ ಜಿಲ್ಲೆಯ ಮರವಂತೆ ದೇಶದಲ್ಲೇ ವಿಶಿಷ್ಟವಾಗಿದೆ. ಇಲ್ಲಿ ಒಂದು ಕಡೆ ಉಪ್ಪುನೀರಿನ ಸಮುದ್ರವಿದ್ದರೆ ಮತ್ತೊಂದು ಬದಿಯಲ್ಲಿ ಸಿಹಿನೀರಿನ ಸೌಪರ್ಣಿಕಾ ನದಿ ಹರಿಯುತ್ತದೆ. ಇವೆರಡರ ನಡುವೆ ಮಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಸಾಗುತ್ತದೆ. ಈ ದೃಶ್ಯವನ್ನು ಕಣ್ಣಾರೆ ನೋಡುವುದೇ ಚೆಂದ. ಜೊತೆಗೆ ಹಿನ್ನಿರಿನಲ್ಲಿರುವ ಪಡುಕೋಣೆ ದ್ವೀಪವು ತೆಂಗಿನ ಮರಗಳ ಹಿನ್ನೆಲೆಯಲ್ಲಿ ಮೋಹಕವಾಗಿ ಕಂಡುಬರುತ್ತದೆ. ಇಲ್ಲಿಂದ ಕಾಣುವ ಸೂರ್ಯಾಸ್ತಮಾನವೂ ಅನನ್ಯವಾದ ದೃಶ್ಯ. ಇಂತಹ ಸ್ಥಳದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದರೆ ಇನ್ನೂ ಸೊಗಸಾಗಿರುತ್ತದೆ. ಇನ್ನು ಕಾರವಾರದ ಸುಂದರ ಕಡಲ ತೀರ ನೊಬೆಲ್ ಪುರಸ್ಕೃತ ರಾಷ್ಟ್ರಕವಿ ಶ್ರೀ. ರವೀಂದ್ರನಾಥ್ ಟಾಗೂರರ ಮನಸ್ಸನ್ನು ಸೂರೆಗೊಂಡಿತ್ತು. ಗೋವೆಗೆ ಸನಿಹದಲ್ಲಿರುವ ಈ ಸುಂದರ ತೀರಗಳನ್ನು ಅಭಿವೃದ್ಧಿಪಡಿಸಿದರೆ ಗೋವೆಗೆ ಬರುವ ದೇಶ-ವಿದೇಶಗಳ ಪ್ರವಾಸಿಗರನ್ನು ಇಲ್ಲಿಗೆ ಆಕರ್ಷಿಸಬಹುದು. ಮಂಗಳೂರಿನ ಬಳಿಯ ಸೋಮೇಶ್ವರ, ಪಣಂಬೂರು, ಉಳ್ಳಾಲದ ತೀರಗಳು ಪ್ರವಾಸೋದ್ಯಮಕ್ಕೆ ಉತ್ತಮವಾದ ಸ್ಥಳಗಳಾಗಿವೆ.

ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದರಷ್ಟೇ ಸಾಲದು. ಆಧುನಿಕ ತಂತ್ರಜ್ಞಾನವನ್ನು ಬಳಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರಿಗೆ ರಾಜ್ಯದ ಪ್ರವಾಸಿ ತಾಣಗಳ ಮಾಹಿತಿಯನ್ನು ಒದಗಿಸುವ ಹಾಗೂ ಪ್ರಚಾರ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಉದಾಹರಣೆಗೆ ಆಂತರ್ಜಾಲದಲ್ಲಿ ಕರ್ನಾಟಕದ ಪ್ರಖ್ಯಾತ ಪ್ರವಾಸಿತಾಣಗಳ ಬಗ್ಗೆ ಚಿತ್ರ ಸಮೇತ ಮಾಹಿತಿ ಒದಗಿಸುವುದು, ಪ್ರವಾಸಿ ತಾಣಗಳ ವೀಡಿಯೋ ಚಿತ್ರಣ ಮಾಡಿ ಬಹುಮಾದ್ಯಮ ತಂತ್ರಜ್ಞಾನದಿಂದ ಪ್ರಚುರಗೊಳಿಸಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವುದು ಸರ್ಕಾರದ ಕರ್ತವ್ಯ. ಈ ರೀತಿಯಲ್ಲಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯ ಜನರಿಗೆ ಹೆಚ್ಚು ಉದ್ಯೋಗಾವಕಾಶ ಹಾಗೂ ವ್ಯಾಪಾರದ ಅವಕಾಶ ಒದಗಿ ಬಂದು ನಮ್ಮ ಜನರ ಜೀವನಮಟ್ಟ ಉತ್ತಮವಾಗುತ್ತದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಹೆಚ್ಚು ಆದಾಯ ಬರುತ್ತದೆ ಮತ್ತು ಕರ್ನಾಟಕದ ಪ್ರವಾಸೀ ತಾಣಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿ ಕರ್ನಾಟಕದ ಕೀರ್ತಿಯೂ ಹೆಚ್ಚುತ್ತದೆ ಎನ್ನುವದರಲ್ಲಿ ಸಂಶಯವಿಲ್ಲ.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು