ಪುಟ್ಟಣ್ಣನವರ ಚಿತ್ರಗೀತೆಗಳಲ್ಲಿ ಕರುನಾಡಿನ ಐಸಿರಿ
ಪುಟ್ಟಣ್ಣನವರು ಭಾರತ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ನಿರ್ದೇಶಕರೆಂಬುದರಲ್ಲಿ ಸಂಶಯವಿಲ್ಲ. ಅವರ ನಿರ್ದೇಶನದ ಚಿತ್ರಗಳಲ್ಲಿ ಒಳ್ಳೆಯ ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಭಾಷಣೆ, ಸಂಗೀತ ಮತ್ತು ಗೀತೆಗಳು ಹೀಗೆ ಚಿತ್ರನಿರ್ಮಾಣದ ಎಲ್ಲಾ ವಿಭಾಗಳಿಗೂ ಪ್ರಾಶಸ್ತ್ಯವಿತ್ತು. ಇವುಗಳೆಲ್ಲದಕ್ಕಿಂತ ಮಿಗಿಲಾಗಿ ಪುಟ್ಟಣ್ಣನವರು ತಮ್ಮ ಚಿತ್ರಗಳಲ್ಲಿ ಕನ್ನಡನಾಡಿನ ಪ್ರಕೃತಿಯ ಸೊಬಗನ್ನು ಅತಿಸುಂದರವಾಗಿ ಚಿತ್ರೀಕರಿಸಿದ್ದಾರೆ. ಹಾಗೇ ಕನ್ನಡನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನೂ ತಮ್ಮ ಚಿತ್ರಗಳಲ್ಲಿ ಉತ್ತಮವಾಗಿ ಅಳವಡಿಸಿಕೊಂಡಿದ್ದರು. ಈಗ ಪುಟ್ಟಣ್ಣನವರ ಚಿತ್ರಗಳ ಗೀತೆಗಳಲ್ಲಿ ಕರುನಾಡಿನ ಐಸಿರಿಯನ್ನು ಸವಿಯೋಣ ಬನ್ನಿ. ಪುಟ್ಟಣ್ಣನವರ ಮೊಟ್ಟಮೊದಲ ಚಿತ್ರವಾದ ‘ಬೆಳ್ಳಿಮೋಡ’ ಚಿತ್ರದಲ್ಲೇ ಅವರ ಪ್ರಕೃತಿಪ್ರೇಮವನ್ನು ನಾವು ನೋಡಬಹುದು. ಈ ಚಿತ್ರದಲ್ಲಿ ಕನ್ನಡದ ವರಕವಿ ದ.ರಾ.ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ ನುಣ್ಣನೆ ಎರಕವ ಹೊಯ್ದ...’ ಕವನವನ್ನು ಚಿಕ್ಕಮಗಳೂರಿನ ಮಲೆನಾಡಿನ ಸುಂದರ ಪರಿಸರದಲ್ಲಿ ಬಹಳ ಸುಂದರವಾಗಿ ಚಿತ್ರೀಕರಿಸಿದ್ದಾರೆ. ಬೇಂದ್ರೆಯವರ ಸೊಗಸಾದ ಸಾಹಿತ್ಯ, ವಿಜಯಭಾಸ್ಕರ ಅವರ ಮಧುರ ಸಂಗೀತ, ಸುಂದರ ಛಾಯಾಗ್ರಹಣದಿಂದ ಕೂಡಿದ್ದ ಈ ಗೀತೆಯಲ್ಲೇ ನಾವು ಪುಟ್ಟಣ್ಣನವರಿಗಿದ್ದ ಸದಭಿರುಚಿಯನ್ನು ಕಾಣಬಹುದು. ಡಾ.ರಾಜ್ ಮತ್ತು ಪುಟ್ಟಣ್ಣನವರ ಜೋಡಿಯ ಮೊದಲ ಚಿತ್ರ ‘ಕರುಳಿನ ಕರೆ’ ಚಿತ್ರದಲ್ಲಿ ‘ಅ ಆ ಇ ಈ... ಕನ್ನಡದ ಅಕ್ಷರ ...