ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು - ಒಂದು ವಿಶ್ಲೇಷಣೆ
ಕನ್ನಡಿಗರು ಅದರಲ್ಲೂ ಬೆಂಗಳೂರು, ಮೈಸೂರು ಕಡೆಯವರು ಬಲು ಸೋಮಾರಿಗಳು. ಮನೆ ಕಟ್ಟುವ ಕೂಲಿ ಕೆಲಸ, ಕಾರ್ಪೆಂಟರ್, ಪ್ಲಂಬಿಂಗ್, ತರಕಾರಿ ಮಾರುವ ಕೆಲಸ, ಮನೆಗೆಲಸ ಮತ್ತು ನಗರಪಾಲಿಕೆಯ ಪೌರಕಾಮಿಕರ ಕೆಲಸ ಮುಂತಾದ ಯಾವುದೇ ಶ್ರಮದ ಕೆಲಸಗಳಿಗೆ ಅವರು ಮುಂದೆ ಬರುವುದಿಲ್ಲ ಎಂದು ಕನ್ನಡಿಗರೇ ಗೊಣಗುವುದನ್ನು ನಾವು ಬಹಳ ಸಲ ಕೇಳಿದ್ದೇವೆ. ತಮಿಳರು, ತೆಲುಗರು, ಮಲಯಾಳಿಗಳು, ಮತ್ತು ಈಗೀಗ ಉತ್ತರಭಾರತೀಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ಇಂತಹ ಕೆಲಸಗಳಿಗೆ ಕನ್ನಡಿಗರನ್ನು ಹುಡುಕಿದರೂ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಯಾಕೆ ಹೀಗೆ? ನಮ್ಮ ಕನ್ನಡಿಗರು ಈ ಕೆಲಸಗಳಿಗೆ ಒಗ್ಗುವುದಿಲ್ಲವೇ? ನಿಜವಾಗಿಯೂ ಸೋಮಾರಿಗಳೇ? ಇದರ ಬಗ್ಗೆ ನಾನು ಬಹಳಷ್ಟು ವಿಚಾರಮಾಡಿದ್ದೇನೆ. ಬಹಳ ಜನರು ಗಮನಹರಿಸದ ಬಹುಮುಖ್ಯ ಸಂಗತಿ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ಈ ಲೇಖನ ಬರೆಯಲು ಶುರುಮಾಡಿದೆ. (ಚಿತ್ರ ೧.) ವಿವಿಧ ರಾಜ್ಯಗಳ ಜನಗಣತಿಯ ಅಂಕಿಅಂಶಗಳು ಮೇಲ್ಕಂಡ ಚಿತ್ರ ೧ ರಲ್ಲಿನ ಭಾರತದ ವಿವಿಧ ರಾಜ್ಯಗಳ ನಕ್ಷೆಗಳನ್ನು ಮತ್ತು ಮೇಲಿನ ಜನಗಣತಿಯ ಅಂಕಿಅಂಶಗಳನ್ನು ಗಮನಿಸಿದರೆ ಕೆಲವು ಸತ್ಯ ಸಂಗತಿಗಳು ನಮಗೆ ಗೋಚರಿಸುತ್ತವೆ. ವಿಸ್ತಾರದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಚಿಕ್ಕದಾಗಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಜನದಟ್ಟನೆ ನಮ್ಮ ರಾಜ್ಯಕ್...