ಅಕ್ಕರೆಯ ದಾವಣಗೆರೆಯ ಬಗ್ಗೆ ಒಂದಿಷ್ಟು ಗರಿಗರಿ ಮಾತು
ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಬಾಯಲ್ಲಿ ನೀರೂರಿಸುವ ಗರಿಗರಿಯಾದ ಬೆಣ್ಣೆ ದೋಸೆ, ಮಸಾಲೆ ಮಂಡಕ್ಕಿ ಮತ್ತು ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ. ಇದಷ್ಟೇ ಅಲ್ಲ ದಾವಣಗೆರೆ ಮಧ್ಯಕರ್ನಾಟಕದ ಒಂದು ಪ್ರಮುಖ ಶೈಕ್ಷಣಿಕ ಹಾಗೂ ವಾಣಿಜ್ಯ ನಗರಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಿಗುವ ದಾವಣಗೆರೆ, ಬೆಂಗಳೂರಿನಿಂದ ಸುಮರು ೨೬೦ ಕಿ.ಮಿ ದೂರವಿದೆ. ಮೊದಲಿಗೆ ಇದು ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. ದಿವಂಗತ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ದಾವಣಗೆರೆಗೆ ಜಿಲ್ಲಾ ಕೇಂದ್ರವಾಗುವ ಸೌಭಾಗ್ಯ ಒದಗಿಬಂತು. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು, ಹರಿಹರ, ದಾವಣಗೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ಮತ್ತು ಬಳ್ಳಾರಿಯ ಹರಪ್ಪನಹಳ್ಳಿ ತಾಲ್ಲೂಕುಗಳನ್ನೊಳಗೊಂಡಂತೆ ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬಂತು. ದೇವನಗರಿಯ ಅಪಭ್ರಂಶವೇ ದಾವಣಗೆರೆ ಎಂದು ಸ್ಥಳೀಯ ಇತಿಹಾಸದಿಂದ ತಿಳಿಯುತ್ತದೆ. ಇದು ಉತ್ತರ ಕರ್ನಾಟಕದವರಿಗೆ ದಾವಣಗೇರಿಯಾಗಿದೆ. ದಾವಣಗೆರೆಯು ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳ ಎರಡು ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಶೈಲಿಗಳು ಮೇಳೈಸಿ ದಾವಣೆಗೆರೆಗೆ ಒಂದು ವಿಶಿಷ್ಟ ಸ್ಥಾನ ನೀಡಿವೆ. ಇಲ್ಲಿ ಉಡುಪಿ ಹೋಟೆಲ್ಲುಗಳ ಜೊತೆ ವೀರಶೈವ ಖಾನಾವಳಿಗನ್ನೂ ಕಾಣಬಹುದು. ದಕ್ಷಿಣದ ರಾಗಿಮುದ...