ಜಯನಗರ - ಬೆಂಗಳೂರು ದಕ್ಷಿಣದ ಪ್ರತಿಷ್ಠಿತ ಬಡಾವಣೆ
ಮಾಗಡಿ ಕೆಂಪೇಗೌಡರು ಹಿಂದೆ ನಾಲ್ಕುದಿಕ್ಕಿನಲ್ಲಿ ಕಟ್ಟಿಸಿದ್ದ ನಾಲ್ಕುಗೋಪುರಗಳನ್ನೂ ದಾಟಿ ಬೆಂಗಳೂರು ನಗರ ಇಂದು ಬೃಹತ್ತಾಗಿ ಬೆಳೆದಿದೆ. ಹೀಗೆ ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಿನ ದಕ್ಷಿಣದ ದಿಕ್ಕಿನ ಲಾಲ್‌ಭಾಗ್ ಉದ್ಯಾನವನದಲ್ಲಿರುವ ಗೋಪುರದ ಆಚೆ ಬೆಂಗಳೂರಿನ ಆಧುನಿಕ ಹಾಗೂ ಪ್ರತಿಷ್ಠಿತ ಬಡಾವಣೆಯಾದ ಜಯನಗರ ವ್ಯಾಪಿಸಿದೆ. ೧೯೪೮ರ ಆಗಸ್ಟನಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ನೆನಪಿನಲ್ಲಿ ಜಯನಗರ ಬಡಾವಣೆ ಸ್ಥಾಪಿತವಾಯಿತು. ಈ ಬಡಾವಣೆಯನ್ನು ಆಗಿನ ಭಾರತದ ಗೊವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿಯವರು ಉದ್ಘಾಟಿಸಿದರು ಎಂಬುದು ಇತಿಹಾಸ. ಈ ಜಯನಗರ ಬಡಾವಣೆ ಏಷಿಯಾದಲ್ಲೇ ಅತ್ಯಂತ ದೊಡ್ಡದಾದ ಬಡಾವಣೆ ಎಂದು ಹೇಳುತ್ತಾರೆ. ಆದರೆ ಇದು ಇನ್ನೂ ಪ್ರಸ್ತುತವಾಗಿದೆಯೇ ತಿಳಿಯದು. ಆದರೂ ಜಯನಗರ ಬಡಾವಣೆಯ ವ್ಯಾಪ್ತಿ ನೋಡಿದರೆ ಇದು ಅತಿ ವಿಸ್ತಾರವಾದ ಪ್ರದೇಶ ಎಂಬುದರಿವಾಗುತ್ತದೆ. ಈ ಬಡಾವಣೆ ಕನಕನಪಾಳ್ಯ(೨ನೇ ವಿಭಾಗ), ಸಿದ್ಧಾಪುರ(೧ನೇ ವಿಭಾಗ), ಯೆಡಿಯೂರು(೬ನೇ ವಿಭಾಗ), ಪುಟ್ಟಯನಪಾಳ್ಯ(೯ನೇ ವಿಭಾಗ), ಬೈರಸಂದ್ರ(೧ನೇ ವಿಭಾಗ ಪೂರ್ವ), ಮಾರೇನಹಳ್ಳಿ(೫ನೇ ವಿಭಾಗ) ಮುಂತಾದ ಅನೇಕ ಹಳ್ಳಿಗಳನ್ನು ತನ್ನೋಡನೆ ವಿಲೀನಗೊಳಿಸಿಕೊಂಡಿದೆ. ಜಯನಗರ ಬಡಾವಣೆಯಲ್ಲಿ ಮುಖ್ಯವಾಗಿ ಒಟ್ಟು ಹತ್ತು ವಿಭಾಗಗಳಿವೆ(ಬ್ಲಾಕ್‌ಗಳು). ಈಗ ಒಂದೊಂದು ವಿಭಾಗದ ಪರಿಚಯವನ್ನು ಮಾಡಿಕೊಳ್ಳೋಣ. ಜಯನಗರ ಒಂದನೇ ವಿಭಾಗ ಲಾಲ್‌ಭಾಗ್‌ನ ಪೂರ್ವಕ...