ಶ್ರೀಮದ್ರಾಮಾಯಣದ ಪ್ರತ್ಯಕ್ಷ ಸಾಕ್ಷಿಯಾದ ಶ್ರೀರಾಮಸೇತುವೆ ಉಳಿಯುವುದೇ?
ಶ್ರೀಮದ್ರಾಮಾಯಣದ ಸೀತಾನ್ವೇಷಣೆಯ ಸನ್ನಿವೇಶ. ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತಿರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನೇ ತನ್ನ ಬಾಲದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಹಿಂತಿರುಗಿ ಶ್ರೀರಾಮನಿಗೆ ಸೀತೆಯನ್ನು ಕಂಡು ಹಿಡಿದ ಪ್ರಿಯವಾರ್ತೆಯನ್ನು ತಿಳಿಸಿದನು. ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ಸುಗ್ರೀವಾದಿ ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ದನುಶ್ಕೋಟಿಯ ಸಮುದ್ರತೀರಕ್ಕೆ ಬಂದನು. ಎದುರಿಗೆ ವಿಶಾಲವಾದ ಮಹಾಸಾಗರ. ರಾಮನಿಗೆ ಸೀತೆಯನ್ನು ರಾವಣನ ಸೆರೆಯಿಂದ ಬಿಡಿಸಲು ಈ ಮಹಾಸಮುದ್ರವನ್ನು ವಾನರ ಸೈನ್ಯದೊಂದಿಗೆ ಹೇಗೆ ದಾಟಬೇಕೆಂಬ ಚಿಂತೆ ಶುರುವಾಯಿತು. ಆ ಮಹಾಸಮುದ್ರವನ್ನು ದಾಟಲು ಸಹಾಯಮಾಡುವಂತೆ ರಾಮಚಂದ್ರ ಸಮುದ್ರರಾಜನನ್ನೇ ಪ್ರಾರ್ಥಿಸಿದನು. ಮೂರುದಿನ ಪ್ರಾರ್ಥಿಸಿದರೂ ಸಮುದ್ರರಾಜನು ಪ್ರತ್ಯಕ್ಷವಾಗದಿದ್ದಾಗ ಶ್ರೀರಾಮನು ಅತ್ಯಂತ ಕೋಪಾವೇಶದಿಂದ ಸಮುದ್ರವನ್ನೇ ತನ್ನ ಬಾಣಗಳಿಂದ ಇಂಗಿಸುವುದಾಗಿ ಬಿಲ್ಲನೆತ್ತಿದನು. ಆಗ ಭಯದಿಂದ ಸಮುದ್ರರಾಜನು ರಾಮನ ಮುಂದೆ ಪ್ರತ್ಯಕ್ಷನಾಗಿ ಸಮುದ್ರವನ್ನು ದಾಟಲು ಸಾಧ್ಯವಾಗುವಂತೆ...