ಆಧ್ಯಾತ್ಮಿಕ ಚಿಂತನೆ
ಆಚಾರ್ಯ ಶ್ರೇಷ್ಠರಾದ ಶ್ರೀ ಶಂಕರರ ಮತ್ತು ಶ್ರೀ ರಾಮಾನುಜರ ಜಯಂತಿ ಸಾಮಾನ್ಯವಾಗಿ ಒಂದೇ ದಿನ ಬರುತ್ತದೆ. ಈ ಮಹಾನ್ ಆಚಾರ್ಯರ ನೆನಪಿನಲ್ಲಿ ಅವರುಗಳು ತೋರಿಸಿದ ಶ್ರೇಷ್ಠ ಆಧ್ಯಾತ್ಮಿಕ ದರ್ಶನಗಳ ಬಗ್ಗೆ ತಿಳಿಯೋಣ ಬನ್ನಿ. ಇಂದಿನ ಯಾಂತ್ರೀಕೃತ ಯುಗದಲ್ಲಿ ಯುವಕರಿಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಸಮಯವಿರುವುದಿಲ್ಲ. ಅಂತಹವರಿಗೆ ನಮ್ಮ ಆಧ್ಯಾತ್ಮಿಕ ಚಿಂತೆನೆಗಳನ್ನು ಪರಿಚಯಿಸುವ ಸಲುವಾಗಿ ಈ ಬರಹ. ಓದುಗರು ಇದನ್ನು ಓದಿ ಆಧ್ಯಾತ್ಮಿಕ ಚಿಂತನೆಗಳಿಗೆ ತಮ್ಮ ಮನಸ್ಸನ್ನು ತೆರೆದುಕೊಳ್ಳಲೀ ಎಂಬುದೇ ಈ ಲೇಖನದ ಆಶಯ. ಅಧ್ಯಾತ್ಮ ಎಂದರೆ ನಮ್ಮೊಳಗಿರುವ ಆತ್ಮನಿಗೆ ಸಂಬಂಧಿಸಿದ ವಿಚಾರ. ಆಧ್ಯಾತ್ಮಿಕ ಜ್ಞಾನ( Spiritual Science) ಎಂದರೆ ತತ್ವಜ್ಞಾನ(Philosophy)ವೆಂದೂ ಅರ್ಥವಿದೆ. ಆತ್ಮತತ್ವ ಅಥವಾ ಬ್ರಹ್ಮತತ್ವಕ್ಕೆ ಸಂಬಂಧಿಸಿದ ಜ್ಞಾನ ಎಂದೂ ತಿಳಿದುಕೊಳ್ಳಬಹುದು. ಭಾರತೀಯ ಆಧ್ಯಾತ್ಮಿಕ ಚಿಂತನೆ ವಿಶ್ವದಲ್ಲೇ ಅತ್ಯುನ್ನತ ಸ್ಥಾನವನ್ನು, ಹಿರಿಮೆಯನ್ನು ಪಡೆದಿದೆ. ಭಾರತೀಯ ಆಧ್ಯಾತ್ಮಿಕ ಚಿಂತನೆ ಎಂದರೆ ಬಹುಪಾಲು ಅದು ವೇದಾಂತದ ಚಿಂತನೆಯೇ ಆಗಿದೆ. ವೇದಾಂತ(ಉಪನಿಷತ್ತು), ಬಾದರಾಯಣರ ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಆಧಾರ ಅಥವಾ ಪ್ರಮಾಣದ ಮೇಲೇ ಭಾರತೀಯ ಆಧ್ಯಾತ್ಮಿಕ ಚಿಂತನೆ ನೆಲೆಗೊಂಡಿದೆ ಎಂದರೆ ತಪ್ಪಾಗಲಾರದು. ಈ ಆಧ್ಯಾತ್ಮಿಕ ಚಿಂತನೆ ಭಾರತದಲ್ಲಿ ಪುರಾತನಕಾಲದಿಂದಲೂ ನಡೆದ