ಸಂಸ್ಕೃತ ಭಾಷೆ ನಿಜಕ್ಕೂ ಸತ್ತ ಭಾಷೆಯೇ?
ಸಂಸ್ಕೃತ ಭಾಷೆ ಬಗ್ಗೆ ಮಾತನಾಡಲು ಹೊರಟರೆ ನಮಗೆ ಬರುವ ಮೊದಲ ಪ್ರತಿಕ್ರಿಯೆ, ಅದು ಸತ್ತ ಭಾಷೆ ಎಂದು! ಸಂಸ್ಕೃತ ಎಂದ ಕೂಡಲೇ ಇನ್ನೂ ಕೆಲವರಿಗೆ ನಾವು ಪುರೋಹಿತಶಾಹಿಗಳಾಗಿ ಬಿಡುತ್ತೇವೆ! ಮತ್ತೆ ಕೆಲವರು ಸಂಸ್ಕೃತ ದೇವ ಭಾಷೆ ಎಂದು ಗೌರವಿಸಿ, ದೇಶದ ಇತರ ಜನಪದ ಭಾಷೆಗಳ ಬಗ್ಗೆ ತಾತ್ಸಾರ ತೋರುವುದನ್ನೂ ಕಾಣುತ್ತೇವೆ! ನಮ್ಮ ದೇಶದ ಪ್ರಾಚೀನ ಭಾಷೆಯ ಬಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ಇರಲಿ ಈಗ ನಾವು ಸಂಸ್ಕೃತ ನಿಜಕ್ಕೂ ಸತ್ತ ಭಾಷೆಯೇ ಎಂಬುದನ್ನು ವಿಚಾರ ಮಾಡೋಣ. ಕನ್ನಡದ ಪ್ರಖ್ಯಾತ ಭಾಷಾವಿದ್ವಾಂಸರಾದ ಶ್ರೀ. ಜಿ.ಎಸ್. ವೆಂಕಟಸುಬ್ಬಯ್ಯನವರು ಪ್ರತಿ ಭಾನುವಾರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ‘ಇಗೋ ಕನ್ನಡ’ ಅಂಕಣದಲ್ಲಿ ವಿದ್ವತ್ಪೂರ್ಣವಾಗಿ ಕನ್ನಡ ಪದಗಳ ವ್ಯುತ್ಪತ್ತಿ ಸಹಿತ ಅರ್ಥವಿವರಣೆಯನ್ನೂ ನೀಡುತ್ತಿರುವುದು, ಕನ್ನಡ ಪದಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಬಹಳ ಉಪಯೋಗವಾಗಿದೆ. ಇದನ್ನು ಓದಿದವರಿಗೆ ತಿಳಿಯುವ ಒಂದು ಸಾಮಾನ್ಯ ವಿಷಯವೆಂದರೆ, ಬಹಳಷ್ಟು ಕನ್ನಡ ಪದಗಳ ಮೂಲ ಸಂಸ್ಕೃತವಾಗಿರುವುದು! ಇದು ಕನ್ನಡಕ್ಕಷ್ಟೇ ಸೀಮಿತವಲ್ಲ. ತಮಿಳರು ಪ್ರಾಚೀನ ಹಾಗೂ ಸ್ವತಂತ್ರ ಭಾಷೆ ಎಂದು ಒಣಜಂಭದಿಂದ ಹೇಳಿಕೊಳ್ಳುವ ತಮಿಳು ಭಾಷೆಯೂ ಸೇರಿ ಎಲ್ಲಾ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ಪ್ರಭಾವ ಹೊಂದಿ, ಸಂಸ್ಕೃತದಿಂದ ಅನೇಕ ಶಬ್ದಗಳನ್ನು ಎರವಲು ಪಡೆದಿರುವುದು ಎಲ್ಲಾ ಭಾಷಾತಜ್ಞರಿಗೂ ತಿಳಿದಿರುವ ವಿಚಾರವೇ. ಎಲ್ಲರ ನಾಲಿಗೆಯ ಮೇಲೆ ದಿ...