ಬಾಲಿವುಡ್ ಮತ್ತು ಕನ್ನಡ ಚಿತ್ರರಂಗ
ಭಾರತೀಯ ಚಿತ್ರರಂಗದ ಹಿರಿಯಣ್ಣನಾದ ಹಿಂದಿ ಚಿತ್ರರಂಗ ೭೦/೮೦ರ ದಶಕದವರೆವಿಗೂ ಒಂದು ರೀತಿಯಲ್ಲಿ ಭಾರತದ ಉಳಿದ ಭಾಷೆಗಳ ಚಿತ್ರರಂಗಕ್ಕೆ ಮಾದರಿಯಾಗಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿತ್ತು. ಆದರೆ ಅದು ಯಾವಾಗ ಹಾಲಿವುಡ್ ಹೆಸರನ್ನು ಅನುಕರಿಸಿ ಬಾಲಿವುಡ್ ಎಂದು ತನ್ನನ್ನು ಕರೆದುಕೊಂಡಿತೋ ಆಗಲೇ ಹಿಂದಿ ಚಿತ್ರರಂಗಕ್ಕೆ ಹಾಲಿವುಡ್ ಸಂಸ್ಕೃತಿ ದಾಳಿ ಇಟ್ಟು ನಮ್ಮ ಪುರಾತನ ಸಾಂಸ್ಕೃತಿಕ, ಐತಿಹಾಸಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿತು ಎನ್ನಬಹುದು. ಸ್ವಂತ ಕಥೆ, ನವಿರಾದ ಹಾಸ್ಯ, ಕೌಟುಂಬಿಕ ಮೌಲ್ಯಗಳು, ಉತ್ತಮ ಸಾಹಿತ್ಯ, ಸೊಗಸಾದ ಸಂಗೀತದಿಂದ ಕೂಡಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುತಿದ್ದ ಬಾಲಿವುಡ್ ಚಿತ್ರಗಳಿಗೆ ಇಂದೇನಾಗಿದೆ? ಇತ್ತೀಚೆಗೆ ಬಿಡುಗಡೆಯಾದ “ಬ್ಲಾಕ್” ಎನ್ನುವ ಆಂಗ್ಲ ಹೆಸರಿನ ಬಾಲಿವುಡ್ ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಫ಼ಿಲಮ್‌ಫ಼ೇರ್, ಸ್ಕ್ರೀನ್ ಹಾಗೂ ಇತ್ತೀಚಿನ ಐಐಎಫ಼್‌ಎ ಪ್ರಶಸ್ತಿಗಳನ್ನು ಅದು ಬಾಚಿಕೊಂಡಿತ್ತು. ನಾನು ಅದನ್ನು ನೋಡಿಲ್ಲ. ಬಾಲಿವುಡ್ ಚಿತ್ರಗಳನ್ನು ನೋಡುವುದನ್ನು ಬಿಟ್ಟು ಬಹಳ ವರ್ಷವಾಯಿತು. ಬಹುಶ: “ಹಮ್ ಆಪ್ ಕೆ ಹೈ ಕೌನ್” ನಾನು ನೋಡಿದ ಕೊನೆಯ ಹಿಂದಿ ಸಿನಿಮಾ ಇರಬಹುದು. ಈ ಬ್ಲ್ಯಾಕ್ ಚಿತ್ರಕ್ಕಾಗಿ ಗಣ್ಯರಿಗೆಲ್ಲ ಕೋರಮಂಗಲದ ಮಲ್ಟಿಪ್ಲೆಕ್ಸ್‌ನಲ್ಲಿ ವಿಶೇಷ ಪ್ರದರ್ಶನ ಬೇರೆ ಏರ್ಪಡಿಸಿದ್ದರು. ನಮ್ಮ ಚಿತ್ರರಂಗದ ಗಣ್ಯರು, ಕೆಲವು ಸಾಹಿತ...