ಬಾಲಿವುಡ್ ಮತ್ತು ಕನ್ನಡ ಚಿತ್ರರಂಗ

ಭಾರತೀಯ ಚಿತ್ರರಂಗದ ಹಿರಿಯಣ್ಣನಾದ ಹಿಂದಿ ಚಿತ್ರರಂಗ ೭೦/೮೦ರ ದಶಕದವರೆವಿಗೂ ಒಂದು ರೀತಿಯಲ್ಲಿ ಭಾರತದ ಉಳಿದ ಭಾಷೆಗಳ ಚಿತ್ರರಂಗಕ್ಕೆ ಮಾದರಿಯಾಗಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿತ್ತು. ಆದರೆ ಅದು ಯಾವಾಗ ಹಾಲಿವುಡ್ ಹೆಸರನ್ನು ಅನುಕರಿಸಿ ಬಾಲಿವುಡ್ ಎಂದು ತನ್ನನ್ನು ಕರೆದುಕೊಂಡಿತೋ ಆಗಲೇ ಹಿಂದಿ ಚಿತ್ರರಂಗಕ್ಕೆ ಹಾಲಿವುಡ್ ಸಂಸ್ಕೃತಿ ದಾಳಿ ಇಟ್ಟು ನಮ್ಮ ಪುರಾತನ ಸಾಂಸ್ಕೃತಿಕ, ಐತಿಹಾಸಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿತು ಎನ್ನಬಹುದು.

ಸ್ವಂತ ಕಥೆ, ನವಿರಾದ ಹಾಸ್ಯ, ಕೌಟುಂಬಿಕ ಮೌಲ್ಯಗಳು, ಉತ್ತಮ ಸಾಹಿತ್ಯ, ಸೊಗಸಾದ ಸಂಗೀತದಿಂದ ಕೂಡಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುತಿದ್ದ ಬಾಲಿವುಡ್ ಚಿತ್ರಗಳಿಗೆ ಇಂದೇನಾಗಿದೆ?
ಇತ್ತೀಚೆಗೆ ಬಿಡುಗಡೆಯಾದ “ಬ್ಲಾಕ್” ಎನ್ನುವ ಆಂಗ್ಲ ಹೆಸರಿನ ಬಾಲಿವುಡ್ ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಫ಼ಿಲಮ್‌ಫ಼ೇರ್, ಸ್ಕ್ರೀನ್ ಹಾಗೂ ಇತ್ತೀಚಿನ ಐ‌ಐ‌ಎಫ಼್‌ಎ ಪ್ರಶಸ್ತಿಗಳನ್ನು ಅದು ಬಾಚಿಕೊಂಡಿತ್ತು. ನಾನು ಅದನ್ನು ನೋಡಿಲ್ಲ. ಬಾಲಿವುಡ್ ಚಿತ್ರಗಳನ್ನು ನೋಡುವುದನ್ನು ಬಿಟ್ಟು ಬಹಳ ವರ್ಷವಾಯಿತು. ಬಹುಶ: “ಹಮ್ ಆಪ್ ಕೆ ಹೈ ಕೌನ್” ನಾನು ನೋಡಿದ ಕೊನೆಯ ಹಿಂದಿ ಸಿನಿಮಾ ಇರಬಹುದು.

ಈ ಬ್ಲ್ಯಾಕ್ ಚಿತ್ರಕ್ಕಾಗಿ ಗಣ್ಯರಿಗೆಲ್ಲ ಕೋರಮಂಗಲದ ಮಲ್ಟಿಪ್ಲೆಕ್ಸ್‌ನಲ್ಲಿ ವಿಶೇಷ ಪ್ರದರ್ಶನ ಬೇರೆ ಏರ್ಪಡಿಸಿದ್ದರು. ನಮ್ಮ ಚಿತ್ರರಂಗದ ಗಣ್ಯರು, ಕೆಲವು ಸಾಹಿತಿಗಳು, ರಾಜಕಾರಣಿಗಳು ಅದನ್ನು ನೋಡಿ “ವಾಹ್ ಇಂಥ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಂದಿಲ್ಲ” ಎಂದೆಲ್ಲ ಮಾತುಗಳನ್ನು ಹೇಳಿದ್ದರು. ಇವರೆಲ್ಲ ಹೇಳಿದ ಮಾತುಗಳನ್ನು ಕೇಳಿ ಬಹುಶ: ನಿಜವಾಗಿಯೂ ಬಾಲಿವುಡ್‌ನವರು ಒಂದು ಒಳ್ಳೆಯ ಚಿತ್ರ ನಿರ್ಮಿಸಿರಬೇಕು ಎಂದುಕೊಂಡಿದ್ದೆ. ಆದರೆ ಈ ಚಿತ್ರ ೬೦ರ ದಶಕದ ಹಾಲಿವುಡ್ ಚಿತ್ರವೊಂದರ ರೀಮೇಕ್ ಎಂಬುದು ಮೊನ್ನೆ ಮೊನ್ನೆ ಎಲ್ಲೋ ಓದಿ ನಿಜಕ್ಕೂ ಬೇಸರವಾಯಿತು. ಇದೇ ರೀತಿ ಇತ್ತೀಚೆಗೆ ಬಂದ ಬಹಳಷ್ಟು ಹಿಂದಿ ಚಿತ್ರಗಳು ಹಾಲಿವುಡ್ ಚಿತ್ರಗಳ ಪಕ್ಕಾ ರೀಮೇಕ್ ಆಗಿವೆ ಅಥವಾ ಅವುಗಳಿಂದ ಪ್ರೇರಣೆ(ರೀಮೇಕ್ ಪದದ ಮತ್ತೊಂದು ರೂಪ ಅಷ್ಟೇ) ಪಡೆದಿವೆ ಎಂದು ಸ್ನೇಹಿತರೊಬ್ಬರು ಹೇಳಿದರು. ಉದಾ: ಹಮ್‌ತುಮ್, ಮರ್ಡರ್ ಇತ್ಯಾದಿ ಇನ್ನೂ ಅನೇಕ ಚಿತ್ರಗಳು. ಇಂಗ್ಲೀಷ್‌ನ ಚಿತ್ರಗಳನ್ನು ನೋಡಿರದ ಹಿಂದಿ ಚಿತ್ರಪ್ರೇಮಿಗಳಿಗೆ ಹಿಂದಿಯ ಚಿತ್ರಗಳು ಒರಿಜಿನಲ್ ಆಗಿ ಕಾಣುತ್ತವೆ. ಹಿಂದಿ ಚಿತ್ರಗಳಲ್ಲೂ ಸ್ವಂತಿಕೆಯಿಲ್ಲ ಎಂದು ಹೇಳಿದರೂ ನಂಬುವುದಿಲ್ಲ. ನಮ್ಮ ಕನ್ನಡಿಗರು ಹಿಂದಿ ಚಿತ್ರಗಳನ್ನು, ಅದರ ನಟ ನಟಿಯರನ್ನು ಹಾಡಿಹೊಗಳುತ್ತ ಅತಿಕಡಿಮೆ ಮಾರುಕಟ್ಟೆಯ ಕನ್ನಡ ಚಿತ್ರಗಳನ್ನು ವ್ಯಾಪಕ ಮಾರುಕಟ್ಟೆಯಿರುವ ಹಿಂದಿಯ ಚಿತ್ರಗಳಿಗೆ ಹೋಲಿಸಿ, ಅವು ಚೆನ್ನಾಗಿದ್ದರೂ ಪ್ರೋತ್ಸಾಹಿಸದಿರುವುದು ದು:ಖದ ಸಂಗತಿ. ಆದರೆ ಈ ಸುದ್ಧಿಯನ್ನು ಓದಿ ಕನ್ನಡ ಚಿತ್ರಗಳಲ್ಲಿ ಮಾತ್ರ ರೀಮೇಕ್ ಪಿಡುಗಿದೆ ಎಂದು ಕೊಂಡಿದ್ದ ನನಗೆ ಕನ್ನಡ ಚಿತ್ರರಂಗವೇ ವಾಸಿ ಅನ್ನಿಸಿತು.

ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ದಕ್ಷಿಣ ಭಾರತೀಯ ಚಿತ್ರಗಳನ್ನು ಅದರಲ್ಲೂ ಕನ್ನಡ ಚಿತ್ರರಂಗವನ್ನು ಕೀಳಾಗಿ ನೋಡುತ್ತಾರೆ. ಚಿತ್ರಗಳನಷ್ಟೇ ಅಲ್ಲ ಹಿಂದಿ ಭಾಷೆಯೊಂದೇ ರಾಷ್ಟ್ರ ಭಾಷೆ ಎಂಬ ತಪ್ಪು ತಿಳುವಳಿಕೆಯಿಂದ ಭಾರತದ ಇತರ ಸ್ಥಳೀಯ ಭಾಷೆಗಳನ್ನು ಕೀಳಾಗಿ ಕಾಣುವ ಉದಾಹರಣೆಗಳನ್ನು ನೋಡಿದ್ದೇವೆ. ಇತ್ತೀಚಿನ ಐ‌ಐ‌ಎಫ಼್‌ಎ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಭಾಷೆಯ ಚಿತ್ರಗಳಿಗೆ ಸ್ಥಾನವೇ ಇರಲಿಲ್ಲ. ದಕ್ಷಿಣ ಭಾರತದ ಬೇರೆ ಭಾಷೆಗಳ ಕೆಲವು ಚಿತ್ರಗಳು ಇದ್ದರೂ ಇಡೀ ಸಮಾರಂಭ
ಬಾಲಿವುಡ್ ಚಿತ್ರಗಳಿಗೆ, ಕಲಾವಿದರಿಗೆ, ನಿರ್ದೇಶಕರಿಗೆ ಮನ್ನಣೆ ನೀಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಐ‌ಐ‌ಎಫ಼್‌ಎ ವೇದಿಕೆ ಮೇಲೆ ಕೇರಳದ ಖ್ಯಾತ ನಟರಾದ ಮಮ್ಮೂಟಿಯವರು ಬಾಲಿವುಡ್‌ನವರಿಗೂ, ಸಮಾರಂಭವನ್ನು ಆಯೋಜಿಸಿದವರಿಗೂ ಸ್ವಲ್ಪ ಖಾರವಾಗಿಯೇ ಮನದಟ್ಟು ಮಾಡಿಸಿದ್ದಾರೆ.

ಅದೆಲ್ಲ ಸರಿ ಹಾಲಿವುಡ್ ಚಿತ್ರಗಳ ರೀಮೇಕಾದರೂ ಮಾಡಲಿ ಅಥವ ಪ್ರೇರಣೆಯಿಂದಲಾದರೂ ಮಾಡಲಿ ಆದರೆ ಹಾಲಿವುಡ್ ಸಂಸ್ಕೃತಿಯನ್ನೂ ಭಾರತೀಯರ ಮೇಲೆ ಏಕೆ ಹೇರುತ್ತಿದ್ದಾರೆ. ಪಾಶ್ಚಾತ್ಯರಂತೆ ಅತಿ ಕಡಿಮೆ ಉಡುಗೆ ತೊಡುಗೆಗಳು, ಚುಂಬನ ದೃಶ್ಯಗಳು, ಸಿಕ್ಕಸಿಕ್ಕವರನ್ನು ಗುಂಡಿಕ್ಕಿ ಕೊಲ್ಲುವ, ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳು ಜಾಸ್ತಿಯಾಗಿವೆ. ಜೊತೆಗೆ ಅಶ್ಲೀಲ ಐಟಂ ಸಾಂಗ್ ಹೆಸರಿನ ಹೊಸ ಪಿಡುಗು ಬೇರೆ. ಈ ಬಾಲಿವುಡ್ ಚಿತ್ರಗಳ ಸುದ್ಧಿಗಳನ್ನೇ, ಚಿತ್ರಗಳನ್ನೇ ಆಂಗ್ಲ ಪತ್ರಿಕೆಗಳವರೂ, ವಿದ್ಯುನ್ಮಾನ ಮಾಧ್ಯಮಗಳವರೂ ಪ್ರೋತ್ಸಾಹಿಸುತ್ತಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ಬೆಂಗಳೂರು ಟೈಮ್ಸ್ ಹೆಸರಿನಲ್ಲಿ ಪ್ರಕಟವಾಗುವ ಪ್ರಸಿದ್ಧ ಆಂಗ್ಲ ಪತ್ರಿಕೆಯ ಪುರವಣಿ ತುಂಬ ಬರೀ ಬಾಲಿವುಡ್ ಸುದ್ಧಿಗಳೇ. ಕನ್ನಡ ಚಿತ್ರಗಳ ಬಗ್ಗೆ, ಕಲಾವಿದರ ಬಗ್ಗೆ ಬರೆಯಲು ಅವರಿಗೆ ಇಷ್ಟವಿಲ್ಲ. ಇದರ ಜೊತೆಗೆ ಶ್ರೀಮಂತರ ಗುಂಡು ಪಾರ್ಟಿಗಳ, ಫ಼್ಯಾಷನ್ ಶೊಗಳ ಸುದ್ಧಿಗಳು. ಅದಕ್ಕೆ ಬೆಂಗಳೂರು ಟೈಮ್ಸ್ ಎನ್ನುವ ಬದಲು ಬಾಲಿವುಡ ಟೈಮ್ಸ್ ಎನ್ನುವುದೇ ಸೂಕ್ತವಾದೀತು. ಮರ್ಯಾದಸ್ತ ಕುಟುಂಬದವರು ಓದಲು ಸಾಧ್ಯವಿಲ್ಲದಿರುವಂತೆ ಈ ಪತ್ರಿಕೆಗಳಲ್ಲಿ ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿವೆ. ಬಾಲಿವುಡ್‌ನ ಕಲಾವಿದರ, ಮಾಡೆಲ್‌ಗಳ ಅರೆಬೆತ್ತಲೆ ಚಿತ್ರಗಳನ್ನು ಪ್ರಕಟಿಸುವ ಇಂತಹ ಪತ್ರಿಕೆಗಳಿಗೂ ಸೆನ್ಸಾರ್ ಮಾಡಬೇಕು ಎಂದು ದೆಹಲಿಯಲ್ಲಿ ಯಾರೋ ಪುಣ್ಯಾತ್ಮರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದೇನಾಯಿತು ಎಂಬುದು ತಿಳಿಯಲಿಲ್ಲ. ಇಂತಹ ಪತ್ರಿಕೆಗಳಿಗೂ ‘ಎ’ ಸರ್ಟಿಫ಼ಿಕೇಟ್, ‘ಯು’ ಸರ್ಟಿಫ಼ಿಕೇಟ್ ಕೊಟ್ಟರೆ ಒಳ್ಳೆಯದಲ್ಲವೇ?

“ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ” ಎನ್ನುವ ಗಾದೆ ಮಾತಿನಂತೆ ಬಾಲಿವುಡ್ ಚಿತ್ರಗಳು ಪಾಶ್ಚಾತ್ಯ ಸಂಸ್ಕೃತಿಯನ್ನು, ಅಶ್ಲೀಲತೆಯನ್ನು, ಹಿಂಸೆಯನ್ನು ವೈಭವೀಕರಿಸಿ ಹಣ ಮಾಡುತ್ತಿರುವುದನ್ನು ನೋಡಿದ ನಮ್ಮ ದಕ್ಷಿಣ ಭಾರತದ ಚಿತ್ರರಂಗವೂ ಕೂಡ ಬಾಲಿವುಡ್ ದಾರಿಯನ್ನೇ ಹಿಡಿದಿದೆ ಎಂಬುದು ಸುಳ್ಳಲ್ಲ.
ನಾನು ಕನ್ನಡ ಚಿತ್ರ ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತಿಲ್ಲ. ಆದರೆ ತಮಿಳು, ತೆಲುಗು ಚಿತ್ರಗಳಲ್ಲಿ ಈ ರೀತಿಯ ಅನೇಕ ಚಿತ್ರಗಳು ಬಂದಿವೆ, ಬರುತ್ತಿವೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಉದಾಹರಣೆಗೆ ತಮಿಳಿನಲ್ಲಿ ‘ಬಾಯ್ಸ್’ ಎನ್ನುವ ಕೆಟ್ಟ ಅಶ್ಲೀಲ ಚಿತ್ರದ ಬಗ್ಗೆ ಓದಿದ್ದೆ. ತೆಲುಗಿನಲ್ಲಂತೂ ಹಿಂದಿ ಚಿತ್ರರಂಗದ ಪ್ರಭಾವ ಎದ್ದು ಕಾಣುತ್ತದೆ. ಅನೇಕ ಬಾಲಿವುಡ್ ನಟಿಯರು ತೆಲುಗು ಚಿತ್ರಗಳಲ್ಲಿ ನಟಿಸುತ್ತ, ಕನ್ನಡಕ್ಕೂ ಬಂದು ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರೀಮೇಕ್ ಪಿಡುಗು ಹೆಚ್ಚಿದ್ದರೂ ಕೆಲವು ಸ್ವಂತಿಕೆಯುಳ್ಳ ನಿರ್ದೇಶಕರಿದ್ದಾರೆ ಎನ್ನುವುದು ಸಮಾದಾನದ ಸಂಗತಿ. ನಾಗತಿಹಳ್ಳಿ ಚಂದ್ರಶೇಖರ್, ನಾಗಾಭರಣ, ಕವಿತಾ ಲಂಕೇಶ್, ಎಸ್.ನಾರಯಣ್, ಜೋಗಿ ಖ್ಯಾತಿ೦ii ಪ್ರೇಮ್, ನೆನಪಿರಲಿ ಖ್ಯಾತಿಯ ರತ್ನಜ, ಮತ್ತು ಇನ್ನೂ ಅನೇಕರಿದ್ದಾರೆ.

ನಾಗಾಭರಣ ನಿರ್ದೇಶನದ ಶಿವರಾಮಕಾರಂತರ ಕಾದಂಬರಿ ಆಧಾರಿತ “ಚಿಗುರಿದ ಕನಸು” ಎಂಬ ಅತ್ಯುತ್ತi ಚಿತ್ರವನ್ನು ಹಿಂದಿಯಲ್ಲಿ “ಸ್ವದೇಶ್” ಎಂದು ರೀಮೇಕ ಮಾಡಿದರು. ಸ್ವತ: ನಾಗಾಭರಣರೆ ಈ ಬಗ್ಗೆ ಹಿಂದಿ
ಚಿತ್ರದ ನಿರ್ದೇಶಕರಿಗೆ ಇದರ ಬಗ್ಗೆ ಆಕ್ಷೇಪಿಸದರೂ ಉಪಯೋಗವಾಗಲಿಲ್ಲ. ನಮ್ಮ ಕನ್ನಡಿಗರು ಕನ್ನಡದ ಸ್ವಂತ ಚಿತ್ರವನ್ನು ಪ್ರೋತ್ಸಾಹಿಸಿದೆ ಕನ್ನಡದ್ದೇ ರೀಮೆಕಾದ ಹಿಂದಿಯ “ಸ್ವದೇಶ್” ಚಿತ್ರವನ್ನು ನೋಡಿ ಹಾಡಿ ಹೊಗಳಿದರು! ಈ ರೀತಿ ನಮ್ಮ ಉತ್ತಮ ಚಿತ್ರಗಳನ್ನು ನಾವೇ ಪ್ರೋತ್ಸಾಹಿಸದೆ ರೀಮೇಕ್ ಚಿತ್ರಗಳಿಗೆ ಮಣೆ ಹಾಕುತ್ತಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ರೀಮೇಕ ಪಿಡುಗು ಇನ್ನೂ ಹೆಚ್ಚಾಗುತ್ತಿದೆ.

ಆದ್ದರಿಂದ ಕನ್ನಡದ ಒಳ್ಳೆಯ ಚಿತ್ರಗಳನ್ನು ಅತಿಯಾಗಿ ವಿಮರ್ಶೆ ಮಾಡಲು ಹೋಗದೆ, ಅವನ್ನು ಪ್ರೋತ್ಸಾಹಿಸಿದರೆ ಕನ್ನಡ ಚಿತ್ರರಂಗ ಉಳಿಯುತ್ತೆ. ಇಲ್ಲದಿದ್ದರೆ ಬಾಲಿವುಡ್ ಭೂತದಿಂದ ತನ್ನ ನೆಲೆ ಕಳೆದು ಕೊಂಡಿರುವ ಮರಾಠಿ, ಬಂಗಾಳಿ ಚಿತ್ರರಂಗದ ಹಾಗೆ ಕನ್ನಡ ಚಿತ್ರರಂಗವೂ ಅವನತಿಯ ದಾರಿ ಹಿಡಿಯಬಹುದು. ಇಂದಿನ ಮಲ್ಟಿಪ್ಲೆಕ್ಸ್ ಯುಗದಲ್ಲಿ ಇದು ನಿಜವಾಗುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ.
ಕೋರಮಂಗಲದ ಪಿವಿ‌ಆರ್‌ನಲ್ಲಾಗಲಿ, ಗರುಡ ಮಾಲ್‌ನ ಐನಾಕ್ಸ್ ಆಗಲಿ, ಏರ್ಪೊಟ್ ರಸ್ತೆಯ ಇನ್ನೋವೇಟಿವ್ ಆಗಲಿ ಎಲ್ಲೆಡೆ ಬಾಲಿವುಡ್ ಚಿತ್ರಗಳದೇ ಕಾರುಬಾರು. ಜೊತೆಗೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳೂ ಸೇರಿ ಕನ್ನಡ ಚಿತ್ರಗಳಿಗೆ ಅಲ್ಲಿ ಜಾಗವೇ ಇಲ್ಲದಂತಾಗಿದೆ. ಪಿವಿ‌ಆರ್‌ನಲ್ಲಿ ಶಾಸ್ತ್ರಕ್ಕೆ ಕನ್ನಡ ಚಿತ್ರಗಳ ಒಂದೆರಡು ಪ್ರದರ್ಶನವಿದ್ದರೆ ಬೇರೆ ಭಾಷೆಯ ಚಿತ್ರಗಳ ಮೂರು/ನಾಲ್ಕು ಪ್ರದರ್ಶನಗಳಿರುತ್ತವೆ. ಇದು ಮಲ್ಟಿಪ್ಲೆಕ್ಸ್‌ಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಚಿತ್ರರಂಗದವರು ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳೇ ಬೇಕೆಂದು ತಮ್ಮ ತಮ್ಮಲ್ಲೇ ಕಿತ್ತಾಡುತ್ತಿರುವಾಗ ಬೆಂಗಳೂರಿನ ಬೇರೆ ಪ್ರದೇಶಗಳ ಚಿತ್ರಮಂದಿರಗಳಲ್ಲಿ ಹಿಂದಿ ಮತ್ತು ಇತರ ಭಾಷೆಗಳ ಚಿತ್ರಗಳು ರಾಜಾರೋಷವಾಗಿ ಪ್ರದರ್ಶನಗೊಳ್ಳುತ್ತಿವೆ. ದಂಡು ಪ್ರದೇಶದ ಚಿತ್ರಮಂದಿರಗಳು, ಶೇಷಾದ್ರಿಪುರದ ನಟರಾಜ್ ಚಿತ್ರಮಂದಿರ ತಮಿಳಿಗೆ ಮೀಸಲಾಗಿವೆ.
ಲಾಲ್‌ಭಾಗ್ ರಸ್ತೆಯ ಉತ್ತಮ ನಿರ್ವಹಣೆ ಇರುವ ಊರ್ವಶಿ ಚಿತ್ರಮಂದಿರದಲ್ಲಿ, ಕಂಠೀರವ ಕ್ರೀಡಾಂಗಣದ ಎದುರಿರುವ ಪಲ್ಲವಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಯಾಕೇ ಒತ್ತಾಯಿಸುತ್ತಿಲ್ಲ. ಈ ಚಿತ್ರಮಂದಿರಗಳು ಹಿಂದಿ ಹಾಗೂ ತೆಲುಗು ಚಿತ್ರಗಳಿಗೆ ಮೀಸಲಿಟ್ಟಿದ್ದಾರೆ. ಊರ್ವಶಿ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರರಂಗದ ಪ್ರಭಾವಿ ಕುಟುಂಬದವರು ಎಂದು ಕೇಳಿದ್ದೇನೆ ಆದರೂ
ಅಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶವಿಲ್ಲ !

ಇನ್ನು ಮಹಾತ್ಮ ಗಾಂಧಿ ರಸ್ತೆಯ ಬೆಂಗಳೂರು ಮಹಾನಗರ ಪಾಲಿಕೆಯ ಸಿಂಫ಼ೋನಿ ಚಿತ್ರಮಂದಿರಕ್ಕೆ
ದಿ. ಶಂಕರನಾಗ್ ಹೆಸರನ್ನೇನೋ ಇಟ್ಟಿದ್ದಾರಷ್ಟೇ. ಆದರೆ ಅಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶವಿಲ್ಲ.
ಅಲ್ಲಿ ಕನ್ನಡ ಚಿತ್ರ ಪ್ರದರ್ಶಿಸಿದರೆ ಯಾರು ನೋಡುವುದಿ ಎನ್ನುವವರು ಅಲ್ಲಿ ಸ್ವಲ್ಪ ಸಮಯ ಕನ್ನಡ ಚಿತ್ರ ಪ್ರದರ್ಶಿಸಿ ನೋಡಲಿ. ಕನ್ನಡಿಗರು ಬರುತ್ತಾರೆಯೋ ಇಲ್ಲವೋ ತಿಳಿಯುತ್ತದೆ. ಅದು ಬಿಟ್ಟು ಕುಂಟು ನೆಪ
ಹೇಳಿ ಕನ್ನಡ ಚಿತ್ರಗಳನ್ನು ಕೆಂಪೇಗೌಡ ರಸ್ತೆಯಿಂದ ಹೊರಗೆ ಬಾರದಂತೆ ಪಿತೂರಿ ನಡೆಸಿದ್ದಾರೆ. ಕನ್ನಡ ಚಿತ್ರರಂಗದವರೂ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಿಗೆ ತಮ್ಮ ತಮ್ಮಲ್ಲೇ ಹೊಡೆದಾಡದೆ ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳಿಗಾಗಿ ಹೊಡೆದಾಡಿದರೆ ಕನ್ನಡ ಚಿತ್ರರಂಗದ ಮಾರುಕಟ್ಟೆಯೂ ಬೆಳೆಯುತ್ತದೆ. ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಿದಂತೆಯೂ ಆಗುತ್ತದೆ. ಇದನ್ನು ಚಿತ್ರರಂಗದವರು ಯಾಕೆ ಗಮನಿಸುತ್ತಿಲ್ಲ ಎಂಬುದೇ ಆಶ್ಚರ್ಯವಾಗಿದೆ.

ಇದು ಬೆಂಗಳೂರಿನ ಕಥೆಯಾದರೆ ಇನ್ನು ರಾಜ್ಯದ ಬೇರೆ ಪ್ರದೇಶಗಳ ಸ್ಥಿತಿ ಕೇಳುವುದೇ ಬೇಡ.
ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ತುಮಕೂರು, ಮಂಡ್ಯ, ಹಾಸನ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ಅಷ್ಟಕಷ್ಟೇ. ಬೆಂಗಳೂರಿನ ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಸುತ್ತಾಡಿ ನೋಡಿ. ಎಲ್ಲಿ ಹೋದರೂ ಅಲ್ಲಿ ನಿಮಗೆ ತೆಲುಗು ಚಿತ್ರಗಳ ಪೋಸ್ಟರಗಳೇ ಕಣ್ಣಿಗೆ ಬೀಳುತ್ತವೆ. ಬಳ್ಳಾರಿ, ರಾಯಚೂರು, ಹೊಸಪೇಟೆಯಲ್ಲೂ ಇದೇ ಪರಿಸ್ಥಿತಿ.
ಇಷ್ಟೆ ಅಲ್ಲ ಹಿಂದಿ, ತೆಲುಗು, ತಮಿಳು ಚಿತ್ರಗಳು ಕನ್ನಡ ನಾಡಿನ ಮಧ್ಯದಲ್ಲಿರುವ
ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನಗಳಲ್ಲೂ ವ್ಯಾಪಿಸಿವೆಯೆಂದರೆ ಕನ್ನಡ ಚಿತ್ರಗಳ ಮಾರುಕಟ್ಟೆ ಎಷ್ಟು ಕಡಿಮೆಯಗಿದೆ ನೋಡಿ. ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳಾದ ಬೆಳಗಾವಿ, ಬಿಜಾಪುರ, ಕಲ್ಬುರ್ಗಿ, ಬೀದರ್‌ಗಳಲ್ಲೂ ಕನ್ನಡ ಚಿತ್ರ ನೋಡುವವರಿಲ್ಲ. ಇಲ್ಲೆಲ್ಲ ಹಿಂದಿ ಚಿತ್ರಗಳದ್ದೇ ಕಾರುಬಾರು.
ನಮ್ಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಕನ್ನಡ ಚಿತ್ರಗಳಿಗೆ ನೆಲೆಯಿಲ್ಲ. ಇಲ್ಲೂ ಬಾಲಿವುಡ್ ಪ್ರಭಾವ ಅತಿಯಾಗಿದೆ.

ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮೊದಲು ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸಬೇಕಾಗಿದೆ. ಈ ಪ್ರದೇಶಗಳ ಜನರೂ ಒಳ್ಳೆಯ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹಿಸಬೇಕು. ಬಾಲಿವುಡ್‌ನಿಂದಾಗಿ ಕನ್ನಡ ಚಿತ್ರರಂಗ ಹಾಳಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕನ್ನಡ ಚಿತ್ರರಂಗದವರಿಗೆ ಹೇಗಿದೆಯೋ ಹಾಗೇ ಎಲ್ಲಾ ಕನ್ನಡಿಗರಿಗೂ ಇದೇ. ಇದನ್ನು ಅರಿತು ಬಾಲಿವುಡ್‌ನಿಂದ ಕನ್ನಡ ಚಿತ್ರರಂಗವನ್ನು ಉಳಿಸಬೇಕಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಇನ್ನಾದರೂ ಎಚ್ಚೆತ್ತು ಕೊಳ್ಳುವುದೇ ? ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರು ‘ರೇಡಿಯೋ ಮಿರ್ಚಿ ಕೇಳಿ, ಸಕ್ಕತ್ ಹಾಟ್ ಆಗಿದೆ’ ಎಂದು ಹೇಳುವುದನ್ನು ಬಿಟ್ಟು ಕನ್ನಡ ಚಿತ್ರರಂಗದ ಉದ್ಧಾರದ ಬಗ್ಗೆ ಚಿಂತಿಸುತ್ತಾರೆಯೇ ? ಕನ್ನಡಿಗರೂ ಬಾಲಿವುಡ್ ಪ್ರೇಮವನ್ನು ಬಿಟ್ಟು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆಯೇ ? ಕಾಲವೇ ಹೇಳಬಾಕಾಗಿದೆ.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು