ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ(ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ(ಬಯಲಾಟ, ದೊಡ್ಡಾಟ, ಶ್ರಿಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನi ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡದ ಜಾನಪದ ಸಂಸ್ಕೃತಿ೦ii ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ.


ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿ೦ii ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.


ಪ್ರಸ್ತುತ ಇಲ್ಲಿ ಜಾನಪದ ಗೀತೆಗಳಲ್ಲಿ ಕಂಡುಬರುವ ಕನ್ನಡನಾಡಿನ ಪ್ರಕೃತಿ ಮತ್ತು ದೇವ-ದೇವಿಯರನ್ನು ತಿಳಿಯೋಣ ಬನ್ನಿ. ಮೊದಲಿಗೆ ಆದಿಪೂಜಿತ, ವಿಘ್ನನಿವಾರಕ ಗಣೇಶನನ್ನು ನಮ್ಮ ಜಾನಪದ ಗೀತೆಗಳಲ್ಲಿ ಹೀಗೆ ನೆನೆದಿದ್ದಾರೆ. ಬೆಂಗಳೂರು ತುಮಕೂರು ಗಡಿಯ ಶಿವಗಂಗೆ ಬೆಟ್ಟದ ಗಣೇಶನನ್ನು ಸ್ತುತಿಸಿ, ಹಾಸನದ ಹಾರನಹಳ್ಳಿ, ಬಾಣಾವರದ ಗಣೇಶನನ್ನೂ ಈ ಗೀತೆಯಲ್ಲಿ ನೆನೆದಿದ್ದಾರೆ.


ಮೊದಲು ನೆನೆದೇವು ಸ್ವಾಮಿ ಲಿಂಗನ ಸೊಬಗಿನ ಶಿವಗಂಗೆ ಬೆನವನ

ಸೊಬಗಿನ ಶಿವಗಂಗೆ ಬೆನವನೆ ಗೌರಿಯ ಮುದ್ದು ಕುಮಾರ ಕೊಡು ಮತಿಯ ||

ಶಿವಗಂಗೆ ಬೆನವನ ಸುತ್ತಿ ಕಾಳಿಂಗನ ದಂಡೆ ವಿನಾಯ್ಕ ಬೆನವಣ್ಣ

ದಂಡೆ ವಿನಾಯ್ಕ ಬೆನವಣ್ಣ ಸ್ವಾಮಿಯೇ ಲೇಸಾದ ಪದವ ಕಲಿಸಯ್ಯ ||

ಹಾರನಹಳ್ಳಿ೦ii ಓರೆಲಿ ಇರುವೋನೆ ನಾರಿಯ ಮಗನೆ ಬೆನವಣ್ಣ

ನಾರಿಯ ಮಗನೆ ಬೆನವಣ್ ಬೆಳ್ಳಿದೇವ ಮೇಲಾದ ಪದನ ಬರಕೊಡು ||

ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣ

ಬಾಲೆಯ ಮಗನೆ ಬೆಣವಣ್ ಬೆಳ್ಳಿದೇವ ಮೇಲಾದ ಪದವ ಕಲಿಸಯ್ಯ ||

ಎಳ್ಳು ಹೊಲದಾಗಿರೋ ಡೊಳ್ಹೊಟ್ಟೆ ಬೆನವಣ್ಣ ಎಳ್ಳೇಲೆ ತುಪ್ಪ ತಿಳಿದುಪ್ಪ

ಎಳ್ಳೇಲೆ ತುಪ್ಪ ತಿಳಿದುಪ್ಪ ಸಲಿಸುವೆ ಡೊಳ್ಹೊಟ್ಟೆ ಬೆನವ ಕೊಡು ಮತಿಯ ||

ಹೆಬ್ಬಾಕಲ್ಲಲ್ಲಿರುವ ಕಬ್ಬಲ್ಲ ಬೆನವಗೆ ಕಬ್ಬಿನ ಜಲ್ಲೆ ನೆಲಗಡಲೆ

ಕಬ್ಬಿನ ಜಲ್ಲೆ ನೆಲಗಡಲೆ ಸಲ್ಲಿಸುವೆ ಚಿತ್ತೈಸಿ ಪದವ ಬರಕೊಡು ||


ಗಣೇಶನ ನಂತರ ಚಾಮರಾಜನಗರ ಜೆಲ್ಲೆಯ ಕೊಳ್ಳೇಗಾಲದ ಮಲೆಮಾದೇಶ್ವರನ ಸರದಿ. ಮಲೆಮಾದೇಶ್ವರನಿಗೆ ಇರುವಷ್ಟು ಜನಪದ ಗೀತೆಗಳು ಕರ್ನಾಟಕದ ಬೇರಾವ ದೈವಕ್ಕೂ ಇಲ್ಲವೆನ್ನಿಸುತ್ತೆ. ಮಲೆಮಾದೇಶ್ವರ ಎಂದ ತಕ್ಷಣ ನಮಗೆಲ್ಲ ಕಂಸಾಳೆ ಪದ ನೆನಪಿಗೆ ಬರುತ್ತೆ. ಕೊಳ್ಳೇಗಾಲ ಸುತ್ತಮುತ್ತ ಮಲೆಮಾದೇಶ್ವರನನ್ನು ಕೊಂಡಾಡುವ ಕಂಸಾಳೆ ಪದಗಳು ಜನಪ್ರಿಯ. ಕಂಸಾಳೆಯ ವೈಶಿಷ್ಟ್ಯವೆಂದರೆ ಗೀತೆಯ ಜೊತೆಗೆ ಲಯಬದ್ದವಾಗಿ ಕುಣಿಯುವ ಜಾನಪದ ನೃತ್ಯ ನೋಡುಗರ ಮನಸೆಳೆಯುತ್ತದೆ. ಜನುಮದ ಜೋಡಿ ಚಿತ್ರದಲ್ಲಿ ಶಿವಣ್ಣ ಅಭಿನಯಿಸಿರುವ ಅತ್ಯಂತ ಜನಪ್ರಿಯ ಕೋಲುಮಂಡೆ ಜಂಗಮದೇವ.. ಕ್ವಾರುಣ್ಯ ನೀಡವ್ವೋ ಕೋಡುಗಲ್ಲ ಮಾದೇವ್ನಿಗೆ... ಕಂಸಾಳೆ ನೃತ್ಯವನ್ನು ನೆನಪಿಸಿಕೊಳ್ಳಿ.


ಮಲೆಮಾದೇಶ್ವರನ ಮೇಲಿನ ಒಂದು ಜನಪ್ರಿಯ ಜಾನಪದ ಗೀತೆ ಹೀಗಿದೆ...


ಚೆಲ್ಲಿದರು ಮಲ್ಲಿಗೆಯಾ ಬಾಣಾಸುರ್ ಏರಿಮ್ಯಾಲೆ|

ಅಂದದ ಚೆಂದದ ಮಾಯಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ||

ಏಳು ಮಲೆಯಲ್ಲಿ ಏನಯ್ಯ ಕೆಂದೂಳು |

ನವಿಲಾಡಿ ನವ್ಲ ಮರೆಯಾಡಿ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ||

ನವಿಲಾಡಿ ನವ್ವುಲ ಮರೆಯಾಡಿ ಮಾದೇವ್ಗೆ

ಔತ್ಣಮಾಡಿ ಗಿರಿಗೆ ಹೊರಟಾರು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ||

ಮಲ್ಲೆ ಹೂವಿನಮಂಚ ಮರುಗದ ಮೇಲ್‌ಹೊದುಪು

ತಾವರೆ ಹೂವ ತಾಲಿದಿಂಬು ಚೆಲ್ಲಿದರು ಮಲ್ಲಿಗೆಯಾ||

ತಾವರೆ ಹೂವಿನ ತಲೆದಿಂಬು ಮಾದೇವ್ಗೆ

ಅಲ್ಲೊಂದು ಗಳಿಗೆ ಸುಖನಿದ್ದೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ||

ಚೆಲ್ಲಿದರು ಮಲ್ಲಿಗೆಯಾ ಬಾಣಾಸುರ್ ಏರಿಮ್ಯಾಲೆ|

ಅಂದದ ಚೆಂದದ ಮಾಯಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ||


ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಾದೇಶ್ವರ ಬೆಟ್ಟದ ಪಕ್ಕದಲ್ಲೇ ಇರುವ ಯಳಂದೂರಿನ ಬಿಳಿಗಿರಿ ಬೆಟ್ಟಸಾಲಿನ ಬಿಳಿಗಿರಿ ರಂಗನನ್ನೂ ಜಾನಪದ ಗೀತೆಗಳಲ್ಲಿ ಹಾಡಿಹೊಗಳಿದ್ದಾರೆ. ಈ ಬಿಳಿಗಿರಿ ರಂಗ ಬಿಳಿಗಿರಿ ಬೆಟ್ಟದ ಕಾಡುಗಳಲ್ಲಿ ವಾಸಿಸುವ ಸೋಲಿಗರ ಆರಾಧ್ಯದೈವ ಕೂಡ. ಈ ಗೀತೆ ಬಿಳಿಗಿರಿ ರಂಗನನ್ನು ಕುರಿತದ್ದೊ ಇಲ್ಲ ಶ್ರೀರಂಗಪಟ್ಟಣದ ರಂಗನನ್ನು ಕುರಿತದ್ದೋ ತಿಳಿದಿಲ್ಲ. ಆದರೆ ಈ ಜನಪದಗೀತೆಯಂತೂ ಅತಿಮಧುರವಾಗಿದೆ.



ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾದೆನುತ

ಬಲ್ಲಿದ ರಂಗನ್ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ ||

ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ

ಅಂದವುಳ್ಳ ರಂಗನ್ ಮೇಲೆ ಚೆಲ್ಲಿದರೋಕುಳಿಯೋ ||

ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ

ಲೋಲನಾದ ರಂಗನ್ ಮ್ಯಾಲೆ ಹಾಲಿನೋಕುಳಿಯೊ ||

ತುಪ್ಪದೋಕುಳ್ಲಿಯೋ ಒಳ್ಳೆ ಒಪ್ಪದೋಕುಳಿಯೋ

ಒಪ್ಪವುಳ್ಳ ರಂಗನ್ ಮ್ಯಾಲೆ ತುಪ್ಪದೋಕುಳಿಯೋ ||


ಇನ್ನು ನಮ್ಮ ಬೆಣ್ಣೆಕೃಷ್ಣನ ಬಾಲಲೀಲೆಗಳನ್ನು ಹಾಡಿಹೊಗಳಿರುವ ಈ ಜಾನಪದ ಗೀತೆ ಬಲುಸೊಗಸಾಗಿದೆ.


ಬಾಗಿ ಬಾಗಿ ಬಂಗಾರ ತೂಗಿ ಬೆಳ್ಳಿ ಮೂಡಿ ಬೆಳಗಾದವಮ್ಮ

ಗೋಕುಲದೊಳಗೆ ಸಂಭ್ರಮವೇನಿರೆ ನಂದನ ಕಂದ ಗೋವಿಂದ


ನಂದನ ಕಂದ ಗೋವಿಂದ ಕೃಷ್ಣನ ಚಂದದಿ ತೊಟ್ಟಿಲೊಳಗಿಟ್ಟು

ಚಂದದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ ಆನಂದದಿ ತೂಗುತ ಪಾಡಿದಳೆ


ಬಾಗಿ ಬಾಗಿ ಬಂಗಾರ ತೂಗಿ ಬೆಳ್ಳಿ ಮೂಡಿ ಬೆಳಗಾದವi

ಪೂತನಿಯಕೊಂದೋನೆ ಶಕಟನ ಮುರಿದೋನೆ ಕಾಳಿಂಗ ಮಡುವ ಕಲಕಿದನೆ


ಕಾಳಿಂಗನ ಮಡುವ ಕಲಕಿದ ಶ್ರೀಕೃಷ್ಣ ರಕ್ಕಸರೆಲ್ಲರ ಮಡುವಿದನೆ

ಬಾಗಿ ಬಾಗಿ ಬಂಗಾರ ತೂಗಿ ಬೆಳ್ಳಿ ಮೂಡಿ ಬೆಳಗಾದವಮ್ಮ


ಗೋವ್ಗಳ ಕಾಯ್ದೋನೆ ಬೆಣ್ಣೆಯ ಮೆದ್ದೋನೆ ಬೆಟ್ಟಲ್ಲಿ ಬೆಟ್ಟವನೆತ್ತಿದನೆ

ಬೆಟ್ಟಲ್ಲಿ ಬೆಟ್ಟವನೆತ್ತಿದ ಶ್ರೀಕೃಷ್ಣ ಗೋಪ್ಯಾರ ಸೀರೆಯ ಕದ್ದೊಯ್ದನೆ


ಬಾಗಿ ಬಾಗಿ ಬಂಗಾರ ತೂಗಿ ಬೆಳ್ಳಿ ಮೂಡಿ ಬೆಳಗಾದವi

ಗೋಕುಲದೊಳಗೆ ಸಂಭ್ರಮವೇನಿರೆ ನಂದನ ಕಂದ ಗೋವಿಂದ


ಶ್ರೀಕೃಷ್ಣನ ತಂಗಿ ನಮ್ಮ ಪರಶಿವನ ಮಡದಿ ಮೈಸೂರಿನ ಚಾಮುಂಡೇಶ್ವರಿಯ ಮೇಲಿನ ಈ ಜನಪದ ಗೀತೆ ಎಷ್ಟು ಸೊಗಸಾಗಿದೆ ಅಲ್ಲವೇ? ಶ್ರೀಚಾಮುಂಡಿ ದೇವಿಯ ಅಂದವನ್ನು ಅವಳು ಮುಡಿದಿರುವ ಮೊಗ್ಗಿನ ಮಾಲೆ೦ii ಚೆಂದವನ್ನು ಜನಪದರ ಬಾಯಲ್ಲಿ ಕೇಳುವುದೇ ಚೆಂದ.


ನೋಡವಳಂದವ ಮೊಗ್ಗಿನ ಮಾಲೆ ಚೆಂದವ

ಬೆಟ್ಟಬಿಟ್ಟಿಳಿಯುತ ಬಿಟ್ಟಾಲೆ ಮಂಡೆಯ ಉಟ್ಟೀರೋ ಲಂಗ ಹುಲಿ ಚರ್ಮ

ಉಟ್ಟೀರೋ ಲಂಗ ಹುಲಿ ಚರ್ಮ ಚಾಮುಂಡಿ ಬೆಟ್ಟ ಬಿಟ್ಟಿಳಿಯೋ ಸಡಗರ

ನೋಡವಳಂದವ ಮೊಗ್ಗಿನ ಮಾಲೆ ಚೆಂದವ


ತಾಯಿ ಚಾಮುಂಡಿಯ ಬಾಣಾಸೂರುಗ ಮ್ಯಾಲೆ ಜಾಗರವಾಡವ್ನೆ ಎಳೆನಾಗ

ಜಾಗರವಾಡವ್ನೆ ಎಳೆನಾಗ ಹೆಡೆಸರ್ಪ ತಾಯಿ ಚಾಮುಂಡಿಗೆ ಬಿಸಿಲೆಂದು

ನೋಡವಳಂದವ ಮೊಗ್ಗಿನ ಮಾಲೆ ಚೆಂದವ


ತಾಳೆಹೂವ್ ತಂದಿವ್ನಿ ತಾಳ್‌ತಾಯೇ ಚಾಮುಂಡಿ ಮೇಗಾಳ ತೋಟದ ಮರುಗವ

ಮೇಗಾಳ ತೋಟದ ಮರುಗವ ತಂದಿವ್ನಿ ಒಪ್ಪಿಸಿಕೊಳ್ಳೇ ಹರಕೇಯ

ನೋಡವಳಂದವ ಮೊಗ್ಗಿನ ಮಾಲೆ ಚೆಂದವ


ನಮ್ಮ ಕುಂಬಾರಣ್ಣ ನಾರಿಯರು ಹೋರುವ ಐರಾಣಿ(ಮಡಕೆ)ಯನ್ನು ಮಾಡುವ ಪರಿಯನ್ನು ವರ್ಣಿಸುವ ಈ ಜನಪದ ಗೀತೆಯಲ್ಲಿ ಕನ್ನಡನಾಡಿನ ಕ್ರಾಂತಿಪುರುಷ ಕಲ್ಯಾಣದ ಶರಣ ಬಸವೇಶ್ವರರನ್ನು ನೆನೆಸಿಕೊಂಡಿದ್ದಾರೆ.


ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ

ಹಾರ್ಯಾಡಿ ಮಣ್ಣ ತುಳಿದಾನ |

ಹಾರಿಹಾರ್ಯಾಡಿ ಮಣ್ಣ ತುಳಿದು ತಾ ಮಾಡ್ಯಾನ

ನಾರ್ಯಾರು ಹೋರುವಂತ ಐರಾಣಿ ||

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಬಾನುಂಡನ

ಗಟ್ಟೀಸಿ ಮಣ್ಣ ತುಳಿದಾನ |

ಗಟ್ಟೀಸಿ ಮಣ್ಣ ತುಳಿದು ತಾ ಮಾಡ್ಯಾನ

ಮಿತ್ರೇರು ಹೋರುವಂತ ಐರಾಣಿ ||

ಅಕ್ಕಿಹಿಟ್ಟು ನಾನ್ ತಕ್ಕೊಂಡು ಬಂದೀವ್ನಿ

ಗಿಂಡೀಲಿ ತಂದೀವ್ನಿ ತಿಳಿದುಪ್ಪ |

ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ

ತಂದಿಡು ನಮ್ಮ ಐರಾಣಿ ||

ಕುಂಬಾರಣ್ಣನ ಮಡದಿ ಕಡಗಾದ ಕೈ ಇಕ್ಕಿ

ಕೊಡದ ಮ್ಯಾಲೇನ ಬರೆದಾಳ |

ಕೊಡದ ಮ್ಯಾಲೇನ ಬರೆದಾಳ

ಕಲ್ಯಾಣದ ಶರಣ ಬಸವಣ್ಣನ ನಿಲಿಸ್ಯಾಳ ||


ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರನ ಮೇಲಿನ ಈ ಜನಪದ ಗೀತೆಯಲ್ಲಿ ನಂಜುಂಡಶಿವನನ್ನು ಚೆಂದವಾಗಿ ಸ್ತುತಿಸಿದ್ದಾರೆ


ತಿಂಗಾತಿಂಗಳಿಗೆ ಚೆಂದ ನಂಜನಗೂಡು ಗಂಧ ತುಂಬಾದೆ ಗುಡಿಗೆಲ್ಲ

ಗಂಧ ತುಂಬಾದೆ ಗುಡಿಗೆ ನಂಜುಂಡ ಅಪ್ಪ ನಂಜುಂಡ ನೆಲೆಗೊಂಡ ||

ಎಪ್ಪತ್ತು ಗಾವುದಕೆ ನೆಪ್ಪು ನಂಜನಗೂಡು ಹಿಪ್ಪೆಯ ತೋಪು ಹೊಳೆಸಾಲು

ಹಿಪ್ಪೆಯ ತೋಪು ಹೊಳೆಸಾಲೊಳ್ಳೇದೆಂದು ಅಪ್ಪ ನಂಜುಂಡ ನೆಲೆಗೊಂಡ ||

ಎಡದಾಲಯ್ಯನ ತೇರು ಬಲಾದಲಮ್ಮನ ತೇರು ರಾಟೇಳಿ ತೇರು ಕೈತೇರು

ರಾಟೇಳಿ ತೇರು ಕೈತೇರು ಗೊಂಬೆ ತೇರು ಹರಿಯೋದು ನಂಜಯ್ನ ಎಡಬಲಕೆ ||

ತಿಂಗಾತಿಂಗಳಿಗೆ ಚೆಂದ ನಂಜನಗೂಡು ಗಂಧ ತುಂಬಾದೆ ಗುಡಿಗೆಲ್ಲ

ಗಂಧ ತುಂಬಾದೆ ಗುಡಿಗೆ ನಂಜುಂಡ ಅಪ್ಪ ನಂಜುಂಡ ನೆಲೆಗೊಂಡ ||

ಎದ್ದೇಳೋ ನಂಜುಂಡ ಏಟೋಂದು ಸುಖನಿದ್ದೆ ಆನೆ ಬಂದಾವೆ ಅರಮನೆಗೆ

ಆನೆ ಬಂದಾವೆ ಅರಮನೆಗೆ ನಂಜುಂಡ ನಿನ್ ಭಕ್ತರು ಬಂದವ್ರೆ ದರುಶನಕೆ ||

ತಿಂಗಾತಿಂಗಳಿಗೆ ಚೆಂದ ನಂಜನಗೂಡು ಗಂಧ ತುಂಬಾದೆ ಗುಡಿಗೆಲ್ಲ

ಗಂಧ ತುಂಬಾದೆ ಗುಡಿಗೆ ನಂಜುಂಡ ಅಪ್ಪ ನಂಜುಂಡ ನೆಲೆಗೊಂಡ ||


ಮಳೆ ಈ ಇಳೆಗೆ ಪ್ರಕೃತಿಯ ಅಮೂಲ್ಯ ಕೊಡುಗೆ. ಅದನ್ನು ಹಳ್ಳಿಗರ ಬಾಯಲ್ಲಿ ಕೇಳುವುದೇ ಚೆಂದ. ಮದಗದ ಕೆರೆಗೆ(ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಎಂದು ಓದಿದ ನೆನಪು) ಮಳೆ ಬಂದಾಗ ಗಂಗಮ್ಮನೋಡನೆ ಹಳ್ಳಿಯವರು ನಡೆಸಿದ ಸಂಭಾಷಣೆಯ ಕಲ್ಪನೆ ಎಷ್ಟು ಚೆಂದ ನೋಡಿ ಈ ಜಾನಪದ ಗೀತೆಯಲ್ಲಿ.

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಅಂಗೈನಷ್ಟು ಮೋಡನಾಗಿ ಭೂಮಿತೂಕದ ಗಾಳಿ ಬೀಸಿ

ಗುಡಗಿ ಗೂಡಾಗಿ ಚೆಲ್ಲಿದಳು ಗಂಗಮ್ಮ ತಾಯಿ ||

ಏರಿಮ್ಯಾಗಳ ಬಲ್ಲಾಳರಾಯ ಕೆರೆ೦ii ಬಳಗರ ಬೆಸ್ತರ ಹುಡುಗ

ಓಡಿ ಓಡಿ ಸುದ್ದಿಯ ಕೊಡಿರಯ್ಯೋ ನಾನಿಲುವಳಲ್ಲ ||

ಆರು ಸಾವಿರ ಒಡ್ಡರ ಕರೆಸಿ ಮೂರು ಸಾವಿರ ಗುದ್ದಲಿ ತರಿಸಿ

ಸೋಲು ಸೋಲಿಗೆ ಮಣ್ಣಾನ ಹಾಕಿಸಯ್ಯೋ ನಾನಿಲುವಳಲ್ಲ ||

ಆರು ಸಾವಿರ ಕುರಿಗಳ ತರ್ಸಿ ಮೂರು ಸಾವಿರ ಕುಡುಗೋಲು ತರಿಸಿ

ಕ ಕಲ್ಲಿಗೆ ರೈತವ ಬಿಡಿಸಯ್ಯೋ ನಾನಿಲುವಳಲ್ಲ ||

ಒಂದು ಬಂಡೀಲಿ ವಿಳೇದಡ್ಕೆ ಒಂದು ಬಂಡೀಲಿ ಚಿಗಳಿತಮಟ

ಮೂಲೆ ಮೂಲೆಗೆ ಗಂಗಮ್ನ ಮಾಡಿಸಯ್ಯೋ ನಾನಿಲುವಳಲ್ಲ ||

ಮಾಯದಂತ ಮಳೆ ಬಂತಣ್ಣ ಮದಗದ ಕೆರೆಗೆ


ತುಮಕೂರು ಜೆಲ್ಲೆಯ ಕುಣಿಗಲ್ ಕೆರೆಯ ಐಭೋಗವನ್ನು ವರ್ಣಿಸಿರುವ ಈ ಜನಪದ ಗೀತೆ ಅತ್ಯಂತ ಜನಪ್ರಿಯವಾಗಿದೆ. ನಿಜಕ್ಕೂ ಈ ಕುಣಿಗಲ್ ಕೆರೆ ವಿಶಾಲವಾಗಿ ರಮಣೀಯವಾಗಿದೆ. ಬೆಂಗಳೂರು - ಹಾಸನ - ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ಪಟ್ಟಣ ಸಮೀಪಿಸುತ್ತಿರುವಾಗ ಬಲಕ್ಕೆ ಈ ವಿಶಾಲವಾದ ಕೆರೆ ಕಾಣಿಸುತ್ತದೆ. ಈ ದಾರಿಯಲ್ಲಿ ಪ್ರಯಾಣಮಾಡುವಾಗ ನೋಡಲು ಮರೆಯದಿರಿ. ಕುಣಿಗಲ್ ಪಟ್ಟಣದಿಂದ ತುಮಕೂರು ರಸ್ತೆಯಲ್ಲಿ ಹೋಗುವಾಗ ಈ ಕೆರೆಯ ಏರಿ ಹಾಗೂ ಕೋಡಿ ಕಾಣಸಿಗುತ್ತದೆ.


ಮೂಡಲ್ ಕುಣಿಗಲ್ ಕೆರೆ ನೋಡೋರಿಗ್ ಒಂದೈಭೋಗ

ಮೂಡಿ ಬರ್ತಾನೆ ಚಂದಿರಾಮ | ತಾನಂದನೋ |

ಅಂತಂತ್ರಿ ನೋಡೋರ್‌ಗೆ ಎಂಥ ಕುಣಿಗಲ್ ಕೆರೆ

ಸಂತೆ ಹಾದೀಲಿ ಕಲ್ಲುಕಟ್ಟೆ | ತಾನಂದನೋ |

ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ

ಬಾವ ತಂದಾನೋ ಬಣ್ಣದ್ ಸೀರೆ | ತಾನಂದನೋ |

ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ

ಅಂದ ನೋಡಲು ಶಿವ ಬಂದ್ರು | ತಾನಂದನೋ |

ಅಂದನೆ ನೋಡಲು ಶಿವ ಬಂದ್ರು ಶಿವಮೊಗ್ಗಿ ಕಬ್ಬಕ್ಕಿ ಬಾಯ ಬಿಡುತಾವೆ

ಕಬ್ಬಕ್ಕಿನೆ ಬಾಯ ಬಿಡುತಾವೆ ಇಬ್ಬೀಡ ಗಬ್ಬದ ಹೊಂಬಾಳೆ ನಡುಗವೆ ||

ಹಾಕೋಕ್ ಒಂದ್‌ಹರಿಗೋಲು ನೂಕೋಕ್ ಒಂದ್‌ಊರುಗೋಲು

ಬೊಬ್ಬೆ ಹೊಡೆದಾವ ಬಾಳೆಮೀನು | ತಾನಂದನೋ |

ಬೊಬ್ಬೆನ ಹೊಡೆದಾವೆ ಬಾಳೆಮೀನು ಕೆರೆಯಾಗೆ ಗುಬ್ಬಿ ಸಾರಂಗ ನಗುತಾವೆ

ತಾನಂದನೋ ಗುಬ್ಬಿ ಸಾರಂಗ ನಗುತಾವೆ | ತಾನಂದನೋ |


ಹೀಗೆ ನಮ್ಮ ಜಾನಪದ ಗೀತೆಗಳಲ್ಲಿ ಕನ್ನಡ ನಾಡಿನ ದೇವದೇವಿಯರನ್ನು, ಪ್ರಕೃತಿಯನ್ನು ಹಾಡಿಹೊಗಳಿರುವುದನ್ನು ಕಾಣಬಹುದು. ಈ ರೀತಿಯ ಇನ್ನೂ ನೂರಾರು ಜನಪದಗೀತೆಗಳಿವೆ. ಅಣ್ಣ/ತಂಗಿ, ತಾಯಿ/ಮಗಳ ತವರಿನ ಸಂಬಂಧದ ಗೀತೆಗಳಂತೂ ಮನಮಿಡಿಯುವಂತಿವೆ. ವೇಮಗಲ್ ನಾರಾಯಣಸ್ವಾಮಿಯವರ ಗೆಜ್ಜೆ ಮಾತಾಡುತಾವೋ, ವಿವಿಧ ಗಾಯಕ/ಗಾಯಕಿಯರು ಹಾಡಿರುವ ಮಾಯದಂತ ಮಳೆಹಾಗೂ ಬಿ.ಕೆ.ಸುಮಿತ್ರ ಅವರು ಹಾಡಿರುವ ಜನಪದಗೀತೆಗಳ ದ್ವನಿಸುರುಳಿ ಹಾಗೂ ಇನ್ನೂ ಅನೇಕ ದ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ನಮ್ಮ ಜನಪದ ಸಾಹಿತ್ಯದ ಸೊಬಗನ್ನು ನಾವೂ ಕೇಳಿ ಆನಂದಿಸಿ ನಮ್ಮ ಮಕ್ಕಳಿಗೂ ಕೇಳಿಸಿ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

“ಭಕ್ತ ಕುಂಬಾರ”ದ ಹುಣಸೂರರು