ಬೆಂಗಳೂರಿನ ಎಲ್ಲಾ ಪ್ರದೇಶಗಳಿಗೂ ಹೋಗಿ ಕನ್ನಡಿಗರು ನೆಲಸಬೇಕು...
ಮಹಾತ್ಮಗಾಂಧಿ ರಸ್ತೆಯಲ್ಲಿರುವ ಗಂಗಾರಾಮ್ ಪುಸ್ತಕದ ಅಂಗಡಿಯಲ್ಲಿ ಕನ್ನಡದ ಪುಸ್ತಕಗಳು, ಪತ್ರಿಕೆಗಳು ಸಿಗುತ್ತಿಲ್ಲವೆಂದು, ಇತ್ತೀಚೆಗೆ ಕನ್ನಡದ ಅಂತರ್ಜಾಲ ಗುಂಪಿನಲ್ಲೊಬ್ಬರು ಅಳಲು ತೋಡಿಕೊಂಡಿದ್ದರು. ಗಾಂಧಿನಗರದಲ್ಲಿರುವ ಸಪ್ನ ಪುಸ್ತಕದ ಅಂಗಡಿಯಲ್ಲಿ ಮತ್ತು ನವಕರ್ನಾಟಕ ಪ್ರಕಾಶನದ ಪುಸ್ತಕ ಅಂಗಡಿಗಳಲ್ಲಿ ಕನ್ನಡದ ಪುಸ್ತಕಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಜಯನಗರದ ಪುಸ್ತಕದ ಅಂಗಡಿಗಳಾದ ಪ್ರಿಸ್ಮ್, ಬುಕ್‌ಪ್ಯಾರಡೈಸ್ ಮತ್ತು ಸಪ್ನ ಪುಸ್ತಕದ ಅಂಗಡಿಗಳಲ್ಲೂ ಕನ್ನಡ ಪುಸ್ತಕಗಳು ಸಿಗುತ್ತವೆ. ಬಸವನಗುಡಿಯ ಗಾಂಧೀಬಜಾರ್‌ನಲ್ಲಿರುವ ಅಂಕಿತ ಪುಸ್ತಕದ ಅಂಗಡಿಯಲ್ಲಂತೂ ಹೆಚ್ಚಾಗಿ ಕನ್ನಡ ಪುಸ್ತಕಗಳೇ ಮಾರಾಟವಾಗುತ್ತವೆ. ಆದರೆ ಮಹಾತ್ಮಗಾಂಧಿ ರಸ್ತೆಯ ಗಂಗಾರಮ್ಸ್‌ನಲ್ಲಾಗಲೀ, ಕೋರಮಂಗಲದ ಫ಼ೋರಮ್‌ನಲ್ಲಿರುವ ಲ್ಯಾಂಡ್‌ಮಾರ್ಕ್‌ನಲ್ಲಾಗಲೀ, ಅಥವಾ ದಂಡು ಪ್ರದೇಶದ ಪುಸ್ತಕದ ಅಂಗಡಿಗಳಲ್ಲಾಗಲೀ ಕನ್ನಡ ಪುಸ್ತಕಗಳನ್ನು ಕೊಳ್ಳಲು ಸಿಗುವುದು ಕಷ್ಟ. ಬರೀ ಪುಸ್ತಕಗಳಷ್ಟೇ ಅಲ್ಲ, ಕನ್ನಡ ಚಿತ್ರಗೀತೆಗಳ, ಭಾವಗೀತೆಗಳ ದ್ವನಿಸುರುಳಿಗಳು, ಸಿ.ಡಿಗಳೂ ಇಲ್ಲಿನ ಅಂಗಡಿಗಳಲ್ಲಿ ಸಿಗುವುದು ಕಷ್ಟ. ಯಾಕೆ ಹೀಗೆ?
ಮೊದಲಿಗೆ ಮೂಲ ಸಮಸ್ಯೆಯ ಬಗ್ಗೆ ಚಿಂತಿಸೋಣ. ಒಬ್ಬ ವ್ಯಾಪಾರಿ ತನ್ನ ಅಂಗಡಿಯಲ್ಲಿ, ಹೆಚ್ಚಾಗಿ ಮಾರಾಟವಾಗುವಂತಹ ವಸ್ತುಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿರುತ್ತಾನೆ. ಯಾವುದನ್ನು ಜನರು ಕೊಂಡುಕೊಳ್ಳುವುದಿಲ್ಲವೋ ಅಂತಹ ವಸ್ತುಗಳನ್ನು ತಂದು ವ್ಯಾಪರಿ ತನ್ನ ಅಂಗಡಿಯಲ್ಲಿ ಸುಮ್ಮನೆ ಇಟ್ಟುಕೊಳ್ಳುವುದಿಲ್ಲ. ಇದು ಸಹಜ ವ್ಯಾಪಾರಿ ಬುದ್ಧಿ! ಗಂಗಾರಾಮ್ಸ್ ಪುಸ್ತಕದಂಗಡಿ ಇರುವ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮುಂತಾದ ಪ್ರದೇಶಗಳಲ್ಲಿ ನಮಗೆ ಕನ್ನಡಿಗರು ಕಾಣಸಿಗುವುದು ಅಪರೂಪವಾಗಿದೆ. ಸಿಕ್ಕರೂ ಅವರು ಕನ್ನಡಿಗರೆಂದು ಗುರುತಿಸುವುದು ಇನ್ನೂ ಕಷ್ಟವಾಗಿರುತ್ತದೆ. ಏಕೆಂದರೆ ಅಲ್ಲಿಗೆ ಭೇಟಿ ನೀಡುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವುದೇ ಕಷ್ಟ, ಇನ್ನು ಕನ್ನಡ ಪುಸ್ತಕಗಳನ್ನು ಕೊಳ್ಳುವವರು ಇರುತ್ತಾರೆಯೇ? ಕನ್ನಡ ಪುಸ್ತಕಕ್ಕೆ ಅಲ್ಲಿ ಬೇಡಿಕೆ ಇಲ್ಲದಿದ್ದಾಗ ಪುಸ್ತಕದ ವ್ಯಾಪಾರಿ ಕನ್ನಡ ಪುಸ್ತಕವನ್ನು ತನ್ನ ಅಂಗಡಿಯಲ್ಲಿ ಯಾಕೆ ಇಟ್ಟುಕೊಳ್ಳುತ್ತಾನೆ ಹೇಳಿ?
ಈಗ ವಿಷಯಕ್ಕೆ ಬರೋಣ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಎಂದು ಹುಡುಕಿದರೆ, ನಮಗೆ ಮೊದಲು ಸಿಗುವುದು ಬೆಂಗಳೂರು ನಗರದ ದಂಡು ಪ್ರದೇಶಗಳು. ದಂಡು ಪ್ರದೇಶವೆಂದರೆ ಶಿವಾಜಿನಗರದ ಸುತ್ತ ಇರುವ ಪುಲಿಕೇಶಿನಗರ(ಫ಼್ರೇಜರ್ ಟೌನ್), ಕಾಕ್ಸ್ ಟೌನ್, ಭಾರತೀ ನಗರ, ಹಲಸೂರು, ಜಯಮಹಲ್ ಬಡಾವಣೆ ಮುಂತಾದ ಪ್ರದೇಶಗಳು. ಇದು ಹಿಂದೆ ಬ್ರಿಟಿಷ್ ಅಧಿಕಾರಿಗಳು ವಾಸವಾಗಿದ್ದ ಪ್ರದೇಶ. ಇಲ್ಲಿಗೆ ಬ್ರಿಟಿಷರು ತಮ್ಮ ಕೆಲಸಕಾರ್ಯಗಳಿಗಾಗಿ ತಮಿಳರನ್ನು ಕರೆಸಿ ಅವರಿಗೆ ಅಲ್ಲಿ ನೆಲೆ ಒದಗಿಸಿದ್ದರು ಎನ್ನುವುದು ಇತಿಹಾಸ. ಆದ್ದರಿಂದ ಇಂದಿಗೂ ದಂಡು ಪ್ರದೇಶದಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿ ಅದು ಮಿನಿ ತಮಿಳುನಾಡೇ ಆಗಿದೆ. ಬೆಂಗಳೂರು ತಮಿಳು ಸಂಘ ಕೂಡ ಅಲ್ಲೇ ಇದೆ.
ಹಾಗೇ ದಂಡು ಪ್ರದೇಶದ ಉತ್ತರಕ್ಕೆ ಇರುವ ಮಾರುತಿಸೇವಾನಗರ, ಬಾಣಸವಾಡಿ, ಓ.ಎಂ.ಬಿ.ಆರ್ ಬಡಾವಣೆ ಮತ್ತು ಪೂರ್ವಕ್ಕೆ ಇರುವ ಇಂದಿರಾನಗರ, ಜೀವನ್‌ಬೀಮಾನಗರ, ಸಿ.ವಿ.ರಾಮನ್‌ನಗರ, ವಿವೇಕ್ ನಗರ ಮುಂತಾದ ಪ್ರದೇಶಗಳ್ಳಲ್ಲೂ ಕನ್ನಡಿಗರ ಸಂಖ್ಯೆ ಕಡಿಮೆ ಇದೆ. ಇಲ್ಲಿನ ಐಟಿಐ, ಬಿ.ಇ.ಎಂ.ಎಲ್, ಹೆಚ್.ಎ.ಎಲ್, ಇಸ್ರೋ ಮುಂತಾದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸಕ್ಕಾಗಿ ಬಂದ ಪರಭಾಷಿಕರು ಈ ಪ್ರದೇಶಗಳ ಸುತ್ತಲೇ ಹೆಚ್ಚಾಗಿ ನೆಲೆಸಿರುವುದರಿಂದ, ಇಲ್ಲೆಲ್ಲಾ ಪರಭಾಷಿಕರೇ ಬಹುಸಂಖ್ಯಾತರಾಗಿದ್ದಾರೆ! ಇಲ್ಲೂ ಕನ್ನಡ ಚಿತ್ರಗೀತೆಗಳ, ಭಾವಗೀತೆಗಳ ದ್ವನಿಸುರುಳಿಗಳು, ಕನ್ನಡ ಪತ್ರಿಕೆಗಳು, ಪುಸ್ತಕಗಳು ಕೊಳ್ಳಲು ಸಿಗುವುದು ಕಡಿಮೆ. ಕನ್ನಡ ಚಲನಚಿತ್ರಗಳು ಪ್ರದರ್ಶಿತವಾಗುವ ಚಿತ್ರಮಂದಿರಗಳೂ ಅತಿಕಡಿಮೆ. ಉದಾಹರಣೆಗೆ ವಿಮಾನನಿಲ್ದಾಣ ರಸ್ತೆ ಬಳಿಯ ‘ಇನ್ನೋವೇಟೀವ್ ಮಲ್ಟಿಪ್ಲೆಕ್ಸ್’ ಚಿತ್ರಮಂದಿರದಲ್ಲಿ ಬರೀ ಪರಭಾಷೆಯ ಚಲನಚಿತ್ರಗಳೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ.
ಈಗ ಬೆಂಗಳೂರು ನಗರದ ಉತ್ತರದ ಪ್ರದೇಶಗಳ ಕಡೆಗೆ ಗಮನಹರಿಸಿದರೆ ಸಿಗುವುದು ಗಂಗಾನಗರ, ಆರ್.ಟಿ.ನಗರ, ಸಂಜಯ್‌ನಗರ, ಮತ್ತೀಕೆರೆ, ಜಾಲಹಳ್ಳಿ ಮುಂತಾದ ಬಡಾವಣೆಗಳು. ಈ ಪ್ರದೇಶಗಳಲ್ಲಿ ಬಹಳ ಹಿಂದೆಯೇ ಸಾರ್ವಜನಿಕ ಉದ್ದಿಮೆಗಳಾದ ಹೆಚ್.ಎಂ.ಟಿ, ಬಿ.ಇ.ಎಲ್ ಮತ್ತು ಭಾರತದ ವಾಯುಪಡೆ ಕೇಂದ್ರಗಳು ಸ್ಥಾಪಿತವಾಗಿವೆ. ಆದ್ದರಿಂದ ಈ ಉದ್ಯಮಗಳಲ್ಲಿ ಕೆಲಸಕ್ಕಾಗಿ ಬಂದ ಪರಭಾಷಿಕರು ಈ ಪ್ರದೇಶಗಳ ಸುತ್ತಲೇ ಹೆಚ್ಚಾಗಿ ನೆಲೆಸಿರುವುದನ್ನು ನಾವು ನೋಡಬಹುದು. ಇಲ್ಲೂ ಕನ್ನಡಿಗರು ಅಲ್ಪಸಂಖ್ಯಾತರು.
ಐಟಿ-ಬಿಟಿ ಇಂದ ಜನಪ್ರಿಯವಾಗಿರುವ ನಗರದ ದಕ್ಷಿಣ ಪೂರ್ವ ದಿಕ್ಕಿನಲ್ಲಿರುವ ಕೊರಮಂಗಲ, ಕುವೆಂಪು ನಗರ(ಬಿ.ಟಿ.ಎಂ ಬಡಾವಣೆ) ಮತ್ತು ಹೆಚ್.ಎಸ್.ಆರ್ ಬಡಾವಣೆಗಳ್ಳಲ್ಲಿ ಮಿನಿ ಭಾರತವನ್ನೇ ನೋಡಬಹುದು. ಇತ್ತೀಚೆಗಂತೂ ಇಲ್ಲೆಲ್ಲಾ ಉತ್ತರ ಭಾರತದಿಂದ ವಲಸೆ ಬಂದವರೇ ಹೆಚ್ಚಾಗಿ ಕಾಣ ಸಿಗುತ್ತಾರೆ. ಐಟಿ-ಬಿಟಿಯವರಿಗೆ ಹತ್ತಿರವಿರುವ ದಕ್ಷಿಣದ ಪ್ರಸಿದ್ಧ ಬಡಾವಣೆಗಳಾದ ಜಯನಗರ, ಜೆ.ಪಿ.ನಗರ ಪ್ರದೇಶಗಳಲ್ಲಿ ಹಿಂದೆ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಈಗ ಕನ್ನಡಿಗರ ಸಂಖ್ಯೆಯನ್ನು ಮೀರಿಸುವಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪರಭಾಷಿಕರು ಬಂದು ನೆಲೆಸುತ್ತಿರುವುದು ನಿಜಕ್ಕೂ ಆತಂಕಕಾರಿಯಗಿದೆ.
ಹೀಗೆ ಬೆಂಗಳೂರು ನಗರದ ಬಡಗಣ ಪ್ರದೇಶ, ಮೂಡಣ ಪ್ರದೇಶ ಮತ್ತು ತೆಂಕಣ ಪ್ರದೇಶಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿ, ಈ ಪ್ರದೇಶಗಳಲ್ಲಿ ಕನ್ನಡದ ಸಂಸ್ಕೃತಿಗೆ ಪೆಟ್ಟುಬಿದ್ದಿದೆ.
ಇನ್ನು ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉಳಿದಿರುವ ಪ್ರದೇಶ ನಗರದ ಪಡುವಣ ದಿಕ್ಕಿನ ಪ್ರದೇಶಗಳಾದ ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಬಡಾವಣೆ, ಬನಶಂಕರಿ, ಶ್ರೀನಗರ, ಹನುಮಂತನಗರ, ಬಸವನಗುಡಿ ಮತ್ತು ಚಾಮರಾಜಪೇಟೆ ಪ್ರದೇಶಗಳು ಮಾತ್ರ. ಈ ಪ್ರದೇಶಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ. ಆದರೆ ಇತ್ತೀಚೆಗೆ ಇಲ್ಲೂ ಕೆಲವು ಬಡವಾಣೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಉದಾಹರಣೆಗೆ ಮಲ್ಲೇಶ್ವರ, ಬನಶಂಕರಿ ಸುತ್ತಮುತ್ತ ಈಗೀಗ ಪರಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸುತ್ತಿದ್ದಾರೆ.
ಈಗ ನಮ್ಮ ಮುಂದಿರುವ ಪ್ರಶ್ನೆ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕನ್ನಡಿಗರು ಯಾಕೆ ಅಲ್ಪಸಂಖ್ಯಾತರಾಗಿದ್ದಾರೆ? ಸಾಮಾನ್ಯವಾಗಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಕನ್ನಡಿಗರು, ಒಂದೋ ತುಮಕೂರು ರಸ್ತೆಯಿಂದ ಬೆಂಗಳೂರಿಗೆ ಬರಬೇಕು, ಅಥವಾ ಮೈಸೂರು ರಸ್ತೆಯಿಂದ ನಗರಕ್ಕೆ ಬಂದು ಸೇರಬೇಕು. ಹೀಗೆ ಬರುವಾಗ ಈ ಎರಡೂ ರಸ್ತೆಗಳ ಸುತ್ತ ಹರಡಿಕೊಂಡಿರುವ, ಪಡುವಣ ದಿಕ್ಕಿನಲ್ಲಿರುವ ಪ್ರದೇಶಗಳಲ್ಲೇ ನೆಲೆಸುತ್ತಾರೆ. ಅಲ್ಲಿಂದ ಮುಂದೆ ನಗರದ ಪೂರ್ವಕ್ಕೆ, ದಕ್ಷಿಣಕ್ಕೆ, ಅಥವಾ ಉತ್ತರಕ್ಕೆ ಹೋಗಿ ನೆಲೆಸುವುದಿಲ್ಲ. ಉದಾಹರಣೆಗೆ ಕರ್ನಾಟಕದ ಉತ್ತರ ಜಿಲ್ಲೆಗಳಿಂದ ಬಂದವರು ಹೆಚ್ಚಾಗಿ ರಾಜಾಜಿನಗರ, ಬಸವೇಶ್ವರನಗರಗಳಲ್ಲಿ ನೆಲೆಸಿರುವುದನ್ನು ನಾವು ಕಾಣಬಹುದು. ಅದೇ ರೀತಿ ಮಂಡ್ಯ, ಮೈಸೂರು ಕಡೆಯಿಂದ ಬರುವವರು ವಿಜಯನಗರ, ಮಾಗಡಿ ರಸ್ತೆ ಪ್ರದೇಶಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಆದರೆ ಹೀಗೆ ಬಂದ ಕನ್ನಡಿಗರು ನಗರದ ಉಳಿದ ಪ್ರದೇಶಗಳಿಗೆ ಅತಿಕಡಿಮೆ ಸಂಖ್ಯೆಯಲ್ಲಿ ಹೋಗಿ ನೆಲೆಸುತ್ತಿದ್ದಾರೆ.
ಒಂದೆಡೆ ಪರಭಾಷಿಕರ ಅನಿಯಂತ್ರಿತ ವಲಸೆ ಮತ್ತು ಕರ್ನಾಟಕದ ಬೇರೆ ಜಿಲ್ಲೆಗಳಿಂದ ನಗರಕ್ಕೆ ಬರುವ ಕನ್ನಡಿಗರು ನಗರದ ಪಡುವಣ ಪ್ರದೇಶಗಳಲ್ಲಿ ಮಾತ್ರ ನೆಲೆಸುತ್ತಿರುವುದರಿಂದ, ಬೆಂಗಳೂರಿನ ಉಳಿದ ಪ್ರದೇಶಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿರುವುದಕ್ಕೆ ಮುಖ್ಯ ಕಾರಣವಾಗಿದೆ. ಇದೇ ಕಾರಣದಿಂದ ಕನ್ನಡ ಪತ್ರಿಕೆಗಳಿಗೆ, ಪುಸ್ತಕಗಳಿಗೆ, ಚಲನಚಿತ್ರಗಳಿಗೆ ಮತ್ತು ಅವುಗಳ ದ್ವನಿಸುರುಳಿಗಳಿಗೆ ಹಾಗೂ ಇತರೆ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಗಳೂರಿನ ಕನ್ನಡಿಗ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಪ್ರೋತ್ಸಾಹ ಸಿಕ್ಕುತ್ತಿಲ್ಲ.
ಕನ್ನಡಿಗರು ಬೆಂಗಳೂರಿನ ಎಲ್ಲಾ ಪ್ರದೇಶಗಳಿಗೂ ಹರಡಿ ನೆಲಸಬೇಕಾಗಿರುವುದೇ ಈ ಸಮಸ್ಯೆಗೆ ಸೂಕ್ತ ಪರಿಹಾರವಾಗಿದೆ. ಕನ್ನಡಿಗರು ಬೆಂಗಳೂರು ನಗರದ ಎಲ್ಲಾಕಡೆ ಹರಡಿ ನೆಲೆಸುವುದಷ್ಟೇ ಅಲ್ಲದೆ, ಅಲ್ಲಿನ ಪರಭಾಷಿಕರಿಗೆ ಕನ್ನಡ ಕಲಿಯುವಂಥ ಅನಿವಾರ್ಯತೆ ಸೃಷ್ಟಿಸಿ, ಕನ್ನಡದ ಸಂಸ್ಕೃತಿಯನ್ನು ಪಸರಿಸುವುದೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪಾತ್ರವೂ ಇದೆ. ನಗರದಲ್ಲಿ ತಲೆಎತ್ತಿರುವ ಪರಭಾಷಾ ನೆಲಗಳ್ಳರನ್ನು ಮಟ್ಟಹಾಕಿ, ಬೆಂಗಳೂರಿನಲ್ಲಿ ಕನ್ನಡಿಗರಿಗೆ ನ್ಯಾಯವಾಗಿ ಸಿಗಬೇಕಾದ ನಿವೇಶನ ದೊರೆಯುವಂತೆ ಮಾಡಬೇಕಿದೆ.
Comments
Post a Comment