ಹಿಂದುತ್ವ - ಒಂದು ಮಂಥನ
ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಒಂದು ವಿಚಾರಮಂಥನ. ಮೊದಲಿಗೆ ಈ ಹಿಂದೂ ಶಬ್ದದ ಬಗ್ಗೆ ವಿಚಾರ ಮಾಡೋಣ. ನಮ್ಮ ವೇದ, ಪುರಾಣ, ಶಾಸ್ತ್ರಗಳಲ್ಲಿ ಎಲ್ಲಿಯೂ ಈ ಹಿಂದೂ ಶಬ್ದದ ಉಲ್ಲೇಖವಿಲ್ಲ. ಹಿಂದೂ ಎನ್ನುವ ಶಬ್ದದ ಮೂಲ ಸಿಂಧು ಎಂದು ಇತಿಹಾಸಕಾರರ ಅಭಿಪ್ರಾಯ. ಮಧ್ಯಏಷಿಯಾದಿಂದ ಭಾರತದ ಮೇಲೆ ದಂಡೆತ್ತಿ ಬಂದ ಪರ್ಷಿಯನ್ನರು, ಸಿಂಧು ನದಿಯನ್ನು ಹಿಂದು ಎಂದರು ಮತ್ತು ಆಗ ಸಿಂಧು ನದಿಯಾಚೆ(ಈಗ ಪಾಕಿಸ್ತಾನದಲ್ಲಿ ಇರುವ ಸಿಂಧು ನದಿ ಪ್ರದೇಶ) ನೆಲೆಸಿದವರನ್ನು ಹಿಂದೂ ಎಂದು ಕರೆದರು. ಅಂದರೆ ಈ ಹಿಂದೂ ಪದ ನಮ್ಮದಲ್ಲ. ಸಿಂಧು ನದಿ ತೀರ ಮತ್ತು ಗಂಗಾ ನದಿ ತೀರದಲ್ಲಿ ಹರಡಿಕೊಂಡಿದ್ದ ವೈದಿಕ ಧರ್ಮವನ್ನು ಆಚರಿಸುತ್ತಿದ್ದ ಜನರನ್ನು, ವಿದೇಶಿ ಆಕ್ರಮಣಕಾರರು ಹಿಂದೂ ಎಂದು ಸಂಬೋಧಿಸಿರುವುದನ್ನು ನಾವು ಒಪ್ಪಿಕೊಂಡು, ನಮ್ಮನ್ನು ನಾವು ಹಿಂದೂಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತದೆ.
ನಾವೇನು ಹಿಂದೂ ಧರ್ಮ ಎನ್ನುತ್ತೇವೆಯೋ ಅದು ನಿಜವಾಗಿ ಹೇಳಬೇಕೆಂದರೆ ಸನಾತನ ಧರ್ಮ ಅಥವಾ ವೈದಿಕ ಧರ್ಮವೇ ಆಗಿದೆ. ಅದೇನೇ ಇರಲಿ ಇಂದು ನಾವು ಹಿಂದೂ ಪದವನ್ನು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಪ್ಪಿಕೊಂಡುಬಿಟ್ಟಿದ್ದೇವೆ. ಇದಕ್ಕೆ ಅಪವಾದವೊಂದಿದೆ. ಕನ್ನಡನಾಡಿನ ಹೆಮ್ಮೆಯ ಮಾನವತಾವಾದಿ ಮತ್ತು ಯುಗಪುರುಷರಾದ ಶ್ರೀ ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದರು. ಆದ್ದರಿಂದ ಲಿಂಗಾಯಿತ ಧರ್ಮ ಹಿಂದೂ ಧರ್ಮವಲ್ಲ ಎಂಬುದು ಒಂದು ವಾದ. ಆದರೆ ಬಸವಣ್ಣನವರ ಲಿಂಗಾಯಿತ ಧರ್ಮದ ಮೂಲವಾದ ವೀರಶೈವ ಧರ್ಮ, ವೇದ ಪ್ರಾಮಾಣ್ಯವನ್ನು ಒಪ್ಪಿಕೊಂಡಿತ್ತು ಎಂದು ವೀರಶೈವ ಪಂಚಾಚಾರ್ಯ ಪೀಠಗಳು ಮತ್ತು ಅವರ ಅನುಯಾಯಿಗಳು ಹೇಳುತ್ತಾರೆ. ಇದೊಂದು ಚರ್ಚಾಸ್ಪದ ವಿಷಯವಾದ್ದರಿಂದ ತಿಳಿದವರು ಇದರ ಬಗ್ಗೆ ಮಾಹಿತಿ ನೀಡಬೇಕು. ಒಟ್ಟಿನಲ್ಲಿ ಬಸವಣ್ಣನವರು ತೋರಿದ ಶಾಂತಿ, ಅಹಿಂಸೆ, ಮಾನವತೆಯ ಧರ್ಮ ವಿಶ್ವಕ್ಕೇ ಮಾದರಿಯಾಗಿದೆ.
ಈಗ ವೈದಿಕ ಧರ್ಮದ ಬಗ್ಗೆ ಗಮನಹರಿಸೋಣ. ವೈದಿಕ ಧರ್ಮ ಸನಾತನ(ಆದಿ-ಅಂತ್ಯ ಇಲ್ಲದ್ದು) ಎಂಬ ನಂಬಿಕೆಯಿದ್ದರೂ, ಇದರ ಇತಿಹಾಸ ಐದು ಸಾವಿರ ವರ್ಷ ಅಥವಾ ಅದಕ್ಕಿಂತಲೂ ಪ್ರಾಚೀನ ಎಂದು ಇತಿಹಾಸಕಾರರ ಅಭಿಪ್ರಾಯ. ವೈದಿಕ ಧರ್ಮವನ್ನು ಭಾರತಕ್ಕೆ ತಂದವರು ಮಧ್ಯಏಷ್ಯಾದಿಂದ ವಲಸೆ ಬಂದ ಆರ್ಯರು ಎಂಬುದು ಪಾಶ್ಚಾತ್ಯ ಇತಿಹಾಸಕಾರರ ವಾದ. ಆದರೆ ಈ ವಾದದಲ್ಲಿ ಹುರುಳಿಲ್ಲ ಎನ್ನುವುದನ್ನು ಸಂಶೋಧನೆಗಳು ದೃಡಪಡಿಸಿವೆ, ಎಂದು ಇತ್ತೀಚೆಗೆ ಕೆಲವು ಇತಿಹಾಸಕಾರರು ಹೇಳುತ್ತಾರೆ. ಭಾರತದ ಮೇಲೆ ಆರ್ಯರ ಆಕ್ರಮಣದ ವಾದ ಒಂದು ಮಿಥ್ಯಾವಾದ ಎಂದು ನಿರೂಪಿಸಿದ್ದಾರೆ. ಇದು ಭಾರತೀಯರನ್ನು ಆರ್ಯರು/ದ್ರಾವಿಡರು ಎಂದು ಒಡೆದು ಆಳುವ ಬ್ರಿಟಿಷರ ಒಂದು ಕುತಂತ್ರವಾಗಿತ್ತು ಎಂದು ಅವರು ಪ್ರತಿಪಾದಿಸುತ್ತಾರೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ.
(http://www.hindunet.org/hindu_history/ancient/aryan/aryan_frawley.html)
ಇನ್ನು ಬೌದ್ಧ ಮತ್ತು ಜೈನ ಧರ್ಮದ ಪ್ರಭಾವದಿಂದ ವೈದಿಕ ಧರ್ಮವನ್ನು ರಕ್ಷಿಸಿದ್ದು, ವೈದಿಕ ಧರ್ಮದ ಉದ್ಧಾರಕರೆನಿಸಿದ ಆಚಾರ್ಯತ್ರಯರಾದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮದ್ವಾಚಾರ್ಯರು. ಇವರುಗಳು ಪ್ರಸ್ಥಾನತ್ರಯಗಳೆಂದು ಪ್ರಸಿದ್ಧವಾಗಿರುವ ಬಾದರಾಯಣರ ಬ್ರಹಸೂತ್ರಗಳು, ಉಪನಿಷತ್ತುಗಳು ಮತ್ತು ಶ್ರೀ ಕೃಷ್ಣನ ಭಗವದ್ಗೀತೆಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ತಮ್ಮ ಸಿದ್ಧಾಂತಗಳನ್ನು ಪ್ರಚುರಪಡಿಸಿರುತ್ತಾರೆ. ಇದು ಅಧ್ಯಾತ್ಮದಲ್ಲಿ ಆಸಕ್ತಿಯಿರುವವರಿಗೆಲ್ಲಾ ವೇದ್ಯವಾದ ವಿಚಾರ. ಈ ಸಿದ್ಧಾಂತಗಳನ್ನೆಲ್ಲಾ ಚರ್ಚಿಸುವಷ್ಟು ಪಂಡಿತನೂ ನಾನಲ್ಲ ಮತ್ತು ಅಂಕಣ ಬರಹದಲ್ಲಿ ಅಧ್ಯಾತ್ಮಿಕ ಸಿದ್ಧಾಂತಗಳನ್ನು ಬರೆದಿಡುವುದು ಸಾಧ್ಯವೂ ಇಲ್ಲ. ಆದ್ದರಿಂದ ಸ್ಥೂಲವಾಗಿ ಇವುಗಳನ್ನು ಚಿಂತಿಸೋಣ. ಈ ನಮ್ಮ ಆಚಾರ್ಯರು ಹಾಕಿಕೊಟ್ಟಿರುವ ಸಿದ್ಧಾಂತಗಳಲ್ಲಿ ಕೆಲವು ವಿಚಾರಭೇದಗಳಿದ್ದರೂ ಮೂಲತ: ಇವರೆಲ್ಲರ ಆಶಯ ಒಂದೇ ಆಗಿತ್ತು. ಅತ್ಯಂತ ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದ ನಾವು ಹೇಗೆ ಇಹಲೋಕದಲ್ಲಿ ಸಾರ್ಥಕ ಜೀವನ ನಡೆಸಿ, ಪರಲೋಕದಲ್ಲಿ ಶಾಶ್ವತ ಸುಖವನ್ನು ಹೊಂದಬೇಕೆಂಬುದನ್ನು ಇವರು ಬೋಧಿಸಿರುತ್ತಾರೆ. ಇದನ್ನೇ ಶ್ರೀ ಪುರಂದರದಾಸರು ಸರಳವಾಗಿ ಹೇಳಿದ್ದು “ಮಾನವ ಜನ್ಮ ದೊಡ್ಡದು, ಅದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ!” ಎಂದು.
ಇನ್ನು ಮುಖ್ಯ ವಿಷಯಕ್ಕೆ ಬರೋಣ. ನಮ್ಮ ಆಚಾರ್ಯರು ಹಾಕಿಕೊಟ್ಟ ವೈದಿಕ ಧರ್ಮದ ಮಾರ್ಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಹಿಂದುತ್ವ ಎಂದು ನನ್ನ ನಂಬಿಕೆ. ನಮ್ಮ ದೇಶದಲ್ಲಿ ಸಾಕಷ್ಟು ಹಿಂದೂ ಸಂಘಟನೆಗಳಿವೆ. ಹಿಂದುತ್ವದ ಬಗ್ಗೆ ಭಾಷಣ ಬಿಗಿಯುವವರು ಬಹಳ ಜನ ಸಿಕ್ಕುತ್ತಾರೆ. ಆದರೆ ನಾವೆಷ್ಟು ಹಿಂದುತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ? ಹಿಂದೂ ಧರ್ಮದ ಮೂಲಾಧಾರವಾದ ವೇದಗಳು, ಉಪನಿಷತ್ತುಗಳೂ ಮತ್ತು ಭಗವದ್ಗೀತೆಗಳಲ್ಲಿನ ಆದರ್ಶಗಳನ್ನು ಎಷ್ಟು ಜನ ಹಿಂದುತ್ವವಾದಿಗಳು ಪಾಲಿಸುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಅನ್ಯಧರ್ಮೀಯರನ್ನು ದ್ವೇಷಿಸುವುದು ಹಿಂದುತ್ವವಲ್ಲ ಎನ್ನುವುದನ್ನು ನಾವು ಅರಿಯಬೇಕು. ಬಹಳಷ್ಟು ಮುಸಲ್ಮಾನರು ತಮ್ಮ ಧರ್ಮದಂತೆ ತಪ್ಪದೇ ನಮಾಜ್ ಮಾಡುತ್ತಾರೆ ಹಾಗೇ ಕ್ರೈಸ್ತರು ಚರ್ಚುಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ನಿತ್ಯಕರ್ಮಗಳಾದ ಸಂಧ್ಯಾವಂದನೆ, ದೇವರಪೂಜೆಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡುವ ಹಿಂದೂಗಳು ಬಹಳ ಕಡಿಮೆಯಾಗಿದ್ದಾರೆ. ಹಿಂದೂಗಳು ವೈದಿಕ ಧರ್ಮವನ್ನು ಓದಿ, ಸರಿಯಾಗಿ ಅರಿತುಕೊಂಡು ಅದರಂತೆ ತಮ್ಮ ಕರ್ತವ್ಯಗಳನ್ನು ಪಾಲಿಸುವುದೇ ನಿಜವಾದ ಹಿಂದುತ್ವ. ಈ ಸತ್ಯವನ್ನು ಮನಗಂಡರೆ ಆಗ ನಾವು ನಿಜವಾದ ಹಿಂದೂಗಳಾಗುತ್ತೇವೆ.
ಇನ್ನು ಕೆಲವರು ಜಾತ್ಯತೀತವಾದಿಗಳೆಂದು ಹೇಳಿಕೊಂಡು ನಮ್ಮ ಧರ್ಮ, ಸಂಸ್ಕೃತಿಗಳನ್ನು ಕಡೆಗಣಿಸುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಬಲಿಯಾಗಿ ನಮ್ಮಲ್ಲಿರುವ ಒಳ್ಳೆಯದನ್ನೂ ತಿರಸ್ಕರಿಸುತ್ತಿದ್ದಾರೆ. ಇದರಿಂದ ಹಿಂದೂಗಳಲ್ಲಿ ತಮ್ಮ ಧರ್ಮದ ಮೇಲೆ ಪ್ರೀತಿ, ಅಭಿಮಾನ ಇಲ್ಲವಾಗುತ್ತಿದೆ. ಮುಸಲ್ಮಾನರಿಗೆ ಮತ್ತು ಕ್ರೈಸ್ತರಿಗೆ ತಮ್ಮ ಧರ್ಮದ ಮೇಲಿರುವ ಅಭಿಮಾನವನ್ನು ನೋಡಿಯಾದರೂ ನಾವು ಹಿಂದೂಗಳು ಕಲಿಯಬೇಕಿದೆ. ಇದಕ್ಕೆ ಇತ್ತೀಚಿನ ಒಂದು ಘಟನೆಯೇ ಸಾಕ್ಷಿ.
ತಮ್ಮ ಧಾರ್ಮಿಕ ಗುರುಗಳಾದ ಪ್ರವಾದಿ ಮೊಹಮ್ಮದ್ ಅವರನ್ನು ಡ್ಯಾನಿಷ್ ಪತ್ರಿಕೆಯೊಂದರಲ್ಲಿ ವ್ಯಂಗ್ಯ ಚಿತ್ರ ಬರೆದು ಅವಮಾನಿಸಿದ್ದಾರೆಂದು ಮುಸ್ಲಿಮ್ ಬಾಂಧವರು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಬೀದಿಗಿಳಿದು ಉಗ್ರಪ್ರತಿಭಟನೆ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹವಾದ ವಿಚಾರ. ಆದರೆ ನಮ್ಮ ಹಿಂದೂ ಧರ್ಮೀಯರಲ್ಲಿ ಏಕೇ ತಮ್ಮ ಧರ್ಮದ ಮೇಲೆ ಸ್ವಾಭಿಮಾನವಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ಕೆಲವು ವರ್ಷಗಳ ಹಿಂದೆ ಪ್ರಾನ್ಸ್ ದೇಶದ ಚಪ್ಪಲಿ ಕಂಪನಿಯೊಂದು ಹಿಂದೂಗಳ ಆರಾಧ್ಯ ದೈವವಾದ
ಶ್ರೀ ರಾಮ ದೇವರ ಚಿತ್ರವನ್ನು ಮಹಿಳೆಯರ ಚಪ್ಪಲಿಗಳ ಮೇಲೆ ಮುದ್ರಿಸಿ ಮಾರಾಟಕ್ಕೆ ಬಿಟ್ಟ ಅಕ್ಷಮ್ಯ ಘಟನೆ, ಭಾರತದಲ್ಲಿನ ಹಿಂದೂಗಳನ್ನು ಕೆರಳಿಸದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ನಮ್ಮ ದೇಶದ ಧಾರ್ಮಿಕ ಹಾಗು ಸಾಂಸ್ಕೃತಿಕ ಭಾವನೆಗಳ ಮೇಲೆ ಅತ್ಯಂತ ಕೀಳಾಗಿ ದಾಳಿ ಮಾಡಿರುವ ಪಾಶ್ಚಾತ್ಯರ ಈ ದುರ್ನಡತೆಯನ್ನು ಭಾರತದ ಹಿಂದೂಗಳು ಪ್ರತಿಭಟಿಸದಿರುವುದು ಅತ್ಯಂತ ಖಂಡನೀಯ. ಇದೇ ರೀತಿ ಅವರ ದೇವರ ಅಥವಾ ದೇವಮಾನವರ ಅವಹೇಳನ ಮಾಡಿದ್ದರೆ ಪಾಶ್ಚಾತ್ಯರು ಸುಮ್ಮನಿರುತ್ತಿದ್ದರೇ?
ಆದರೆ ಯೂರೋಪ್ ಮತ್ತು ಅಮೇರಿಕ ದೇಶದಲ್ಲಿನ ಹಿಂದೂಗಳೆಲ್ಲಾ, ಪಾಶ್ಚಾತ್ಯರ ಈ ಅಕ್ಷಮ್ಯ ನಡವಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿ ಪ್ರತಿಭಟಿಸಿದ ಮೇಲೆ, ಆ ಸಂಸ್ಥೆಯು ಅಂತಹ ಪಾದರಕ್ಷೆಗಳನ್ನು ಮಾರಾಟದಿಂದ ಹಿಂದಕ್ಕೆ ಪಡೆಯಿತು. ವಿದೇಶದಲ್ಲಿನ ಭಾರತೀಯರಿಗೆ ತಮ್ಮ ಧರ್ಮ, ಸಂಸ್ಕೃತಿ ಮೇಲಿನ ಅಭಿಮಾನ ನೋಡಿ ನಿಜಕ್ಕೂ ಸಂತೋಷವಾಗುತ್ತದೆ. ಆದರೆ ನಮ್ಮ ದೇಶದಲ್ಲಿನ ಹಿಂದೂ ಧರ್ಮೀಯರೆನಿಸಿಕೊಂಡವರು, ಈ ವಿಷಯ ಭಾರತದ ಪತ್ರಿಕೆಗಳಲ್ಲಿ ಸುದ್ಧಿಯಾದರೂ ಏಕೆ ಸುಮ್ಮನಿದ್ದರು ಎಂದು ಅರ್ಥವಾಗುತ್ತಿಲ್ಲ. ನಾವು ನಂಬಿರುವ, ಪೂಜಿಸುವ ದೈವಕ್ಕೆ ಅವಮಾನವೆಸಗುವ ಪ್ರಸಂಗಗಳನ್ನು ಸಹಿಸಿಕೊಳ್ಳುವ ನಪುಂಸಕತ್ವ, ಜಾತ್ಯತೀತ ನಿಲುವು ಅಲ್ಲ ಎಂಬುದನ್ನು ಹಿಂದೂಗಳು ಮತ್ತು ಹುಸಿ ಜಾತ್ಯತೀತವಾದಿಗಳು ಅರಿತುಕೊಳ್ಳಬೇಕಿದೆ.
ಇನ್ನೂ ತಾಜಾ ಉದಾಹರಣೆಯೆಂದರೆ ಅಮೆರಿಕಾದ ವಿಸ್ಕಿ ಸಂಸ್ಥೆಯೊಂದು ತನ್ನ ಜಾಹೀರಾತಿನಲ್ಲಿ ಹುಲಿಯ ಮೇಲೆ ಕುಳಿತಿರುವ ದುರ್ಗಾದೇವಿಯು ತನ್ನ ಎಲ್ಲಾ ಕೈಗಳಲ್ಲಿ ವಿಸ್ಕಿ ಬಾಟಲಿಗಳನ್ನು ಹಿಡಿದಿರುವಂತೆ ಚಿತ್ರಿಸಿ ಪ್ರಚಾರ ನಡೆಸಿರುವುದು ಈಗಷ್ಟೇ ಬೆಳಕಿಗೆ ಬಂದಿದೆ. ಇದರ ಬಗ್ಗೆ ಈಗಾಗಲೇ ವಿದೇಶಗಳಲ್ಲಿ ಇರುವ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಈ ಬಾರಿಯಾದರೂ ಭಾರತದೆಲ್ಲಡೆ ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲು ತನ್ನ ಭಕ್ತರಿಗೆ ಮನಸ್ಸು ನೀಡುವಂತೆ ಶ್ರೀ ದುರ್ಗಾದೇವಿಯಲ್ಲಿ ಪ್ರಾರ್ಥಿಸುತ್ತೇನೆ.
ಕೊನೆಯದಾಗಿ ಹಿಂದೂ ಧರ್ಮವೆನ್ನುವುದು ಸನಾತನ ಜೀವನ ವಿಧಾನ. ನಮ್ಮಲ್ಲಿರುವ ಜಾತಿಭೇದಗಳನ್ನು ಮರೆತು ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸಿ, ಇತರ ಧರ್ಮೀಯರನ್ನೂ ಗೌರವಿಸಿ ನಮ್ಮ ಸ್ವಧರ್ಮವನ್ನು ಪಾಲಿಸುವುದೇ ನಿಜವಾದ ಹಿಂದುತ್ವ. ಇದನ್ನು ಅರಿತರೆ ನಾವು ಹಿಂದೂಗಳಾಗಿ ಹುಟ್ಟಿದ್ದು ಸಾರ್ಥಕವೆನಿಸುತ್ತದೆ.
Comments
Post a Comment