ಕರ್ನಾಟಕ ಸಂಗೀತ - ಸಂಗೀತ ಲೋಕಕ್ಕೆ ಕನ್ನಡನಾಡಿನ ಹೆಮ್ಮೆಯ ಕೊಡುಗೆ

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಶೈಲಿಯ ಸಂಗೀತ ಪ್ರಕಾರ ಅತ್ಯಂತ ಜನಪ್ರಿಯವಾಗಿರುವುದು ನಿಮಗೆಲ್ಲ ತಿಳಿದಿದೆ. ಪುರಾತನವಾದ ದಾಕ್ಷಿಣಾತ್ಯ ಸಂಗೀತ ಶೈಲಿಗೆ ಶ್ರೀ ಪುರಂದರದಾಸರು ಒಂದು ಮಹತ್ವಪೂರ್ಣವಾದ ಮಜಲನ್ನು ದೊರಕಿಸಿಕೊಟ್ಟರು. ಕಬ್ಬಿಣ್ಣದ ಕಡಲೆಯಂತಿದ್ದ ಈ ಸಂಗೀತವನ್ನು ಅಭ್ಯಸಿಸಲು ಸಾಮಾನ್ಯ ಜನರು ಬಹಳ ಕಷ್ಟಪಡುತ್ತಿದ್ದುದನ್ನು ಕಂಡ ಶ್ರೀ ಪುರಂದರದಾಸರು, ಈ ಸಂಗೀತವನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವಂತೆ ಸಂಗೀತ ಲೋಕಕ್ಕೆ ವಿದ್ವತ್ಪೂರ್ಣ ಕೊಡುಗೆ ನೀಡಿದರು.


ಪುರಂದರದಾಸರು ದಕ್ಷಿಣಾದಿ ಸಂಗೀತವನ್ನು ಕಲಿಯಲು ಒಂದು ವ್ಯವಸ್ಥಿತ ಪದ್ಧತಿಯನ್ನು ಅಳವಡಿಸಿದರು. ಖರಹರಪ್ರಿಯ ರಾಗದಿಂದ ಸಂಗೀತವನ್ನು ಅಭ್ಯಾಸಮಾಡಲು ಆರಂಭಿಸುತ್ತಿದ್ದ ಹಿಂದಿನ ಕ್ರಮವನ್ನು ಬದಲಾಯಿಸಿ ಸುಲಭ ಕಲಿಕೆಗೆ ಅನುವಾಗುವಂತೆ ಮಾಯಾಮಾಳವ ಗೌಳರಾಗದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳನ್ನು ರಚಿಸಿದರು. ಮಲಹರಿರಾಗದಲ್ಲಿ ಲಂಬೋದರ ಲಕುಮಿಕರ.., ಕುಂದಗೌರ.., ಕೆರೆ೦ii ನೀರನು ಕೆರೆಗೆ ಚೆಲ್ಲಿ.., ಮತ್ತುಪದುಮನಾಭ ಪರಮಪುರುಷ.. ಎಂಬ ನಾಲ್ಕು ಪ್ರಸಿದ್ಧ ಪಿಳ್ಳಾರಿಗೀತೆಗಳನ್ನು ರಚಿಸಿದರು. ಪದಪದ್ಯಗಳು, ಉಗಾಭೋಗಗಳು, ಸುಳಾದಿಗಳು, ಕೃತಿಗಳು, ದೇವರನಾಮಗಳು, ಕೀರ್ತನೆಗಳೆಂಬ ವಿವಿಧ ಪ್ರಕಾರದ ಸಾಹಿತ್ಯವನ್ನು ಸಂಗೀತದ ಲಕ್ಷಣಗಳೊಂದಿಗೆ ಸಮೀಕರಿಸಿ ಸಂಸ್ಕೃತ ಭಾಷೆಯ ವೇದಪುರಾಣಗಳಲ್ಲಿನ ಧರ್ಮಶಾಸ್ತ್ರಗಳನ್ನು, ನೀತಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ತಲುಪಿಸಿದ ಕೀರ್ತಿ ಪುರಂದರದಾಸರದು.


ಪುರಾತನ ದಾಕ್ಷಿಣಾತ್ಯ ಸಂಗೀತ ಶೈಲಿಗೆ ಶ್ರೀ ಪುರಂದರದಾಸರು ಹಾಕಿಕೊಟ್ಟ ಅಭ್ಯಾಸಕ್ರಮ ಇಂದಿಗೂ ಚಾಲ್ತಿಯಲ್ಲಿದೆ. ಅವರ ಲಂಬೋದರ ಲಕುಮಿಕರ, ಕೆರೆಯ ನೀರನು ಕೆರೆಗೆ ಚೆಲ್ಲಿಕೃತಿಗಳೇ ಇಂದಿಗೂ ಕರ್ನಾಟಕ ಸಂಗೀತ ಕಲಿಕೆಯ ಪ್ರವೇಶದ್ವಾರ. ಪುರಂದರದಾಸರು ಮಾಡಿದ ವಿದ್ವತ್ಪೂರ್ಣ ಕೊಡುಗೆಯಿಂದಲೇ ಈ ಸಂಗೀತ ಶೈಲಿಗೆ ಕರ್ನಾಟಕ ಸಂಗೀತವೆಂಬ ಹೆಸರಾಗಿ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದೇ ಖ್ಯಾತರಾಗಿದ್ದಾರೆ. ವಿಜಯನಗರದರಸರ ಆಡಳಿತದ ಕಾಲದಲ್ಲಿ, ಶ್ರೀ ವ್ಯಾಸರಾಯರ ಆಶಯದಂತೆ ದಾಸಕೂಟದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಕರ್ನಾಟಕ ಸಂಗೀತಕ್ಕೆ ಬದ್ರ ಬುನಾದಿ ಹಾಕಿಕೊಟ್ಟು ಭಕ್ತಿಪಂಥವನ್ನು ಬೆಳೆಸಿದರು.


ತಂಜಾವೂರಿನ ದೊರೆ ತುಳಜಾಜಿ ಮಹಾರಾಜನು ರಚಿಸಿರುವ ಸಂಗೀತ ಸಾರಾಮೃತ ಗ್ರಂಥದಲ್ಲಿ ವಿವರಿಸಿರುವ ರಾಗಗಳ ಲಕ್ಷಣಕ್ಕೆ ಪುರಂದರದಾಸರ ಸುಳಾದಿಗಳ ವಿವಿಧ ಪ್ರಯೋಗಗಳೇ ಆಧಾರವೆಂದು ಉಲ್ಲೇಖಿಸಿದ್ದಾನೆ ಎಂದು ಪುರಂದರದಾಸರ ಬಗ್ಗೆ ಹೆಚ್ಚು ಅದ್ಯಯನ ಮಾಡಿರುವ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ತಮ್ಮ ಪುರಂದರ ಸಂಪುಟದಲ್ಲಿ ಹೇಳಿದ್ದಾರೆ. ಕರ್ನಾಟಕ ಸಂಗೀತ ಸಂಸ್ಕೃತಿ ಎನ್ನುವ ನಿಧಿಯನ್ನು ನಮಗೆ ಅನುಗ್ರಹಿಸಿದ ಪುರಂದರದಾಸರು, ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ಮಹರ್ಶಿಗಳು ಹೇಗೋ ಕರ್ನಾಟಕ ಸಂಗೀತಕ್ಕೆ ಪುರಂದರದಾಸರು ಹಾಗೆ. ಇಂತಹ ಯುಗಪುರುಷರನ್ನು ಲಕ್ಷ ಲಕ್ಷ ವರ್ಷಗಳಿಗೊಮ್ಮೆ ಪಡೆಯುವುದು ಕಾಲದ ಭಾಗ್ಯ, ರಾಷ್ಟ್ರದ ಭಾಗ್ಯಎಂದು ಮದ್ರಾಸಿನ ಸಂಗೀತ ಸಂಸ್ಥೆಯೊಂದು ಪುರಂದರ ಪ್ರಶಸ್ತಿ ನೀಡುತ್ತಿರುವುದು ಕರ್ನಾಟಕದ ಹೆಮ್ಮೆ ಎಂದು ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಪುರಂದರರ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಪುರಂದರದಾಸರ ನಂತರ ಬಂದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಸಿದ್ಧರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು ಪುರಂದರ ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಿ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೇರಿಸಿದರು.


ಆದರೆ ಕರ್ನಾಟಕ ಸಂಗೀತವನ್ನು ಬ್ರಿಟಿಶರು ಕರ್ನಾಟಿಕ್ ಮ್ಯೂಸಿಕ್ ಎಂದು ತಿರುಚಿದರು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನೇಕ ಸಾಧಕರನ್ನು ಹೊಂದಿದ್ದ ತಮಿಳುನಾಡು ಮತ್ತು ಆಂದ್ರದ ಕೆಲವು ಸಂಗೀತ ವಿದ್ವಾಂಸರೂ ಕರ್ನಾಟಿಕ್ ಮ್ಯೂಸಿಕ್‌ನಲ್ಲಿರುವ ಕರ್ನಾಟಕದ ಹೆಸರನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದೆ ಕರ್ನಾಟಿಕ್ ಮ್ಯೂಸಿಕ್ ಎಂದೇ ಈಗಲೂ ಬಳಸುತ್ತಿದ್ದಾರೆ. ಜೊತೆಗೆ ಕರ್ನಾಟಕ ಸಂಗೀತಕ್ಕೂ ಅದರಲ್ಲಿರುವ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಕಟ್ಟುಕಥೆ ಕಟ್ಟಿದ್ದಾರೆ. ಕರ್ಣಾನಂದಕರವಾದ ಸಂಗೀತವಾದ್ದರಿಂದ ಈ ಶೈಲಿಗೆ ಕರ್ನಾಟಕ ಸಂಗೀತವೆಂಬ ಹೆಸರಾಯಿತು, ಕರ್ನಾಟಕಕ್ಕೂ ಕರ್ನಾಟಿಕ್‌ಗೂ ಏನೂ ಸಂಬಂಧವಿಲ್ಲ ಎಂಬುದು ಅವರು ಕೊಡುವ ವಿವರಣೆ. ಇದನ್ನೇ ಕನ್ನಡನಾಡಿನ ಕೆಲ ಸಂಗೀತ ವಿದ್ವಾಂಸರು, ಸಂಗೀತಾಭಿಮಾನಿಗಳು ಅನುಮೋದಿಸುವುದನ್ನು ನಾವು ಕಾಣಬಹುದು. ಭರತನಾಟ್ಯವನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದವರು ತಮಿಳುನಾಡಿನಲ್ಲಿ ಹೆಚ್ಚಿದ್ದಾರೆಂಬ ಮಾತ್ರಕ್ಕೆ ಭರತಮುನಿಯ ನಾಟ್ಯಶಾಸ್ತ್ರವಾದ ಭರತನಾಟ್ಯವು ತಮಿಳುನಾಡಿನಲ್ಲೇ ಹುಟ್ಟಿತೆಂದು ಪ್ರಚಾರ(ಅಪಪ್ರಾಚಾರ) ಮಾಡುತ್ತಾರೆ. ಆದರೆ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಸುಲಭವಾದ ಅಭ್ಯಾಸಕ್ರಮವನ್ನು ಒದಗಿಸಿ ಅದನ್ನು ಸಾಮಾನ್ಯ ಜನರೂ ಸುಲಭವಾಗಿ ಕಲಿಯಲು ಸಾಧ್ಯವಾಗುವಂತೆ ಮಹತ್ತರವಾದ ಕೊಡುಗೆ ನೀಡಿದ ಕನ್ನಡನಾಡಿನ ಪುರಂದರದಾಸರ ಕೊಡುಗೆಯನ್ನು ನಾವು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುದಿರುವುದು ಹಿತ್ತಲ ಗಿಡ ಮದ್ದಲ್ಲಎಂಬ ಗಾದೆಯನ್ನು ನೆನಪಿಸುತ್ತದೆ.


ಇದಷ್ಟೇ ಅಲ್ಲದೆ ಕರ್ನಾಟಕ ಸಂಗೀತ ಕಚೇರಿಗಳಲ್ಲೂ ಕನ್ನಡ ದಾಸರ ಕೃತಿಗಳಿಗೆ ಸರಿಯಾದ ಗೌರವ ಕೊಡದಿರುವುದು ನೋವಿನ ಸಂಗತಿ. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು ಮತ್ತು ಇತರರ ಕೃತಿಗಳಿಗೆ ಸಂಗೀತ ಕಚೇರಿಗಳಲ್ಲಿ ಸಿಗುವ ಪ್ರಾಮುಖ್ಯತೆ ಕನ್ನಡದಲ್ಲಿ ಕೃತಿ ರಚಿಸಿದ ಪುರಂದರದಾಸರು ಮತ್ತು ಇತರ ದಾಸರ ಕೃತಿಗಳಿಗೆ ಸಿಗುತ್ತಿಲ್ಲ. ನಿಜ ತ್ಯಾಗರಾಜರು ಮತ್ತು ಇತರರ ಕೃತಿಗಳು ಶ್ರೇಷ್ಠವಾಗಿವೆ. ಅದನ್ನು ಯಾರೂ ಇಲ್ಲವೆನ್ನುತಿಲ್ಲ. ಆದರೆ ಅವರಿಗಿಂತ ಮುಂಚೆ ಅಷ್ಟೇ ಶ್ರೇಷ್ಠವಾದ ಕೃತಿಗಳನ್ನು ರಚಿಸಿರುವ ಪುರಂದರದಾಸರು, ಕನಕದಾಸರು ಮತ್ತು ಇತರ ದಾಸರ ಕೃತಿಗಳನ್ನು ದೇವರನಾಮವೆಂದು ಹೇಳಿ ಕಚೇರಿಯ ಕೊನೆಯಲ್ಲಿ ಸ್ವರಾಲಾಪನೆ ಇಲ್ಲದೆ ಹಾಡುವುದು ಒಂದುರೀತಿಯಲ್ಲಿ ಅವರ ಕೃತಿಗಳಿಗೆ ಮಾಡುತ್ತಿರುವ ಅಪಚಾರವೆನ್ನದೆ ವಿಧಿಯಿಲ್ಲ. ಇಷ್ಟೇ ಅಲ್ಲದೆ ಕರ್ನಾಟಕದ ಸಂಗೀತ ವಿದ್ವಾಂಸರಿಗೆ ಸರಿಯಾದ ಮನ್ನಣೆ, ಪ್ರಚಾರ ಸಿಗುತ್ತಿಲ್ಲ. ನಮ್ಮ ಸಂಗೀತ ವಿದ್ವಾಂಸರಿಗೆ ಬೆಂಗಳೂರಿನ ರಾಮನವಮಿ ಸಂಗೀತ ಕಚೇರಿಗಳಲ್ಲಿ ಕೊಡುತ್ತಿದ್ದ ಮಲತಾಯಿಧೋರಣೆಯನ್ನು ಪ್ರತಿಭಟಿಸುವುದರೊಂದಿಗೆ ಏಕೀಕರಣದ ನಂತರದ ಕನ್ನಡ ಹೋರಾಟ ಪ್ರಾರಂಭವಾಗಿದ್ದು ವಿಶೇಷ. ಈ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದವರು ಕನ್ನಡಿಗರ ಹೆಮ್ಮೆಯ ಕನ್ನಡದ ಕಟ್ಟಾಳು ಅನಕೃರವರು. ೬೦ರ ದಶಕದಲ್ಲಿ ಶುರುವಾದ ಈ ಹೋರಾಟ ನಂತರ ವ್ಯಾಪಕವಾಗಿ ಬೆಳೆಯಿತು.


ಇಂದು ನಾವು ಯಾವುದಾದರೂ ದ್ವನಿಸುರುಳಿ ಅಂಗಡಿಗಳಿಗೆ ಹೋಗಿ ಕರ್ನಾಟಕ ಸಂಗೀತ ದ್ವನಿಸುರುಳಿಯನ್ನು ಕೊಳ್ಳಲು ಹುಡುಕಿದಾಗ ಸಿಗುವುದು ಹೆಚ್ಚಾಗಿ ಪರರಾಜ್ಯದ ಸಂಗೀತ ವಿದ್ವಾಂಸರ ದ್ವನಿಸುರುಳಿಗಳು. ಕನ್ನಡನಾಡಿನ ಸಂಗೀತ ವಿದ್ವಾಂಸರ ದ್ವನಿಸುರುಳಿಗಳು ಸಿಗುವುದು ಅಪರೂಪ. ಏಕೆ ಹೀಗೆ? ಕರ್ನಾಟಕ ಸಂಗೀತ ಪ್ರಕಾರವನ್ನು ಕೊಟ್ಟ ನಮ್ಮ ನಾಡಿನಲ್ಲಿ ಸಂಗೀತ ವಿದ್ವಾಂಸರ ಕೊರತೆಯೇ? ಇಲ್ಲ ನಮ್ಮ ಸಂಗೀತ ವಿದ್ವಾಂಸರು ಸಂಗೀತ ಮಾರುಕಟ್ಟೆಯನ್ನು ಉಪಯೋಗಿಕೊಳ್ಳುವಲ್ಲಿ ಹಿಂದೆ ಬಿದಿದ್ದಾರೆಯೇ? ಕನ್ನಡನಾಡಿನಲ್ಲಿ ಸಂಗೀತ ವಿದ್ವಾಂಸರ ಕೊರತೆಯಿಲ್ಲ. ಆರ್.ಕೆ. ಶ್ರೀಕಂಠನ್ ಮತ್ತು ಅವರ ಕುಟುಂಬ, ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಅವರ ಕುಟುಂಬ, ಕದ್ರಿ ಗೊಪಾಲ್‌ನಾಥ್, ಎಂ.ಎಸ್.ಶೀಲಾ, ವಿದ್ಯಾಭೂಷಣರು, ಬೆಂಗಳೂರು ಸೋದರಿಯರು ಹೀಗೆ ಇನ್ನೂ ಅನೇಕರಿದ್ದಾರೆ. ಆದರೆ ಬಹಳ ಜನ ಪ್ರಚಾರವಿಲ್ಲದೆ ಎಲೆಮರೆಯ ಕಾಯಿಯಾಗಿದ್ದಾರೆ. ಕನ್ನಡ ವಿದ್ವಾಂಸರು ಹಾಡಿದ ಕರ್ನಾಟಕ ಸಂಗೀತ ದ್ವನಿಸುರುಳಿಗಳು ಕರ್ನಾಟಕದಲ್ಲೂ, ಬೇರೆ ರಾಜ್ಯಗಳಲ್ಲೂ ಸಿಗುವಂತಾಗಬೇಕು. ಇದಕ್ಕೆ ನಮ್ಮ ಸಂಗೀತ ವಿದ್ವಾಂಸರು ಯೋಜನೆ ಹಾಕಿಕೊಳ್ಳಬೇಕು. ಇಂದಿನ ಕಾಲದಲ್ಲಿ ಯಾವುದಕ್ಕೂ ಪ್ರಚಾರ ಮುಖ್ಯವಾಗಿರುವುದರಿಂದ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜೊತೆಗೆ ನಮ್ಮ ಸಂಗೀತ ವಿದ್ವಾಂಸರು ಹಾಡಿದ, ನಮ್ಮ ಕೃತಿರಚನಕಾರರ ಕೃತಿಗಳನ್ನು ಕೇಳಬೇಕೆಂಬ ಸ್ವಾಭಿಮಾನ ಸಂಗೀತಾಸಕ್ತರಲ್ಲಿ ಮೂಡಬೇಕು. ಬೇರೆಯವರ ಪ್ರತಿಭೆಯನ್ನು ಹೊಗಳುವುದು ತಪ್ಪಲ್ಲ ಆದರೆ ನಮ್ಮಲ್ಲಿರುವ ಪ್ರತಿಭೆಗಳನ್ನು ಗೌರವಿಸುವುದನ್ನು ನಾವು ಕಲಿತುಕೊಂಡರೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು. ಇಲ್ಲದಿದ್ದರೆ ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಂಬುದು ಹೆಸರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಕೆಲವು ಪ್ರಭಾವಶಾಲಿ ರಾಜಾಕಾರಣಿಯೊಬ್ಬರು ಕರ್ನಾಟಕ ಸಂಗೀತವನ್ನು ತಮಿಳು ಸಂಗೀತ ಎಂದು ಕರೆಯಬೇಕೆಂದು ಕರೆನೀಡಿರುವುದು ಪತ್ರೆಕೆಗಳಲ್ಲಿ ವರದಿಯಾಗಿತ್ತು!


ಕರ್ನಾಟಕ ಸಂಗೀತಕ್ಕೆ ಪುರಂದರದಾಸರಾದಿಯಾಗಿ ಅನೇಕ ಹರಿದಾಸರು ಕೊಟ್ಟಕೊಡುಗೆಯನ್ನು ಹೆಮ್ಮೆಯಿಂದ ಸ್ಮರಿಸೋಣ. ಹಾಗೆ ಅವರ ಕೃತಿಗಳಿಗೆ ಸಂಗೀತ ಕಚೇರಿಗಳಲ್ಲಿ ಪ್ರಮುಖ್ಯತೆಯನ್ನು ದೊರಕಿಸಲು ನಮ್ಮ ಕನ್ನಡ ಸಂಗೀತ ವಿದ್ವಾಂಸರನ್ನೂ ಪ್ರೋತ್ಸಾಹಿಸೋಣ. ಕರ್ನಾಟಕ ಸಂಗೀತವನ್ನು ನಿಜಕ್ಕೂ ಕರ್ನಾಟಕದ ಸಂಗೀತವನ್ನಾಗಿ ಮಾಡೋಣ.


ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ

ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ||

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು