ಜಯನಗರ - ಬೆಂಗಳೂರು ದಕ್ಷಿಣದ ಪ್ರತಿಷ್ಠಿತ ಬಡಾವಣೆ

ಮಾಗಡಿ ಕೆಂಪೇಗೌಡರು ಹಿಂದೆ ನಾಲ್ಕುದಿಕ್ಕಿನಲ್ಲಿ ಕಟ್ಟಿಸಿದ್ದ ನಾಲ್ಕುಗೋಪುರಗಳನ್ನೂ ದಾಟಿ ಬೆಂಗಳೂರು ನಗರ ಇಂದು ಬೃಹತ್ತಾಗಿ ಬೆಳೆದಿದೆ. ಹೀಗೆ ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಿನ ದಕ್ಷಿಣದ ದಿಕ್ಕಿನ ಲಾಲ್‌ಭಾಗ್ ಉದ್ಯಾನವನದಲ್ಲಿರುವ ಗೋಪುರದ ಆಚೆ ಬೆಂಗಳೂರಿನ ಆಧುನಿಕ ಹಾಗೂ ಪ್ರತಿಷ್ಠಿತ ಬಡಾವಣೆಯಾದ ಜಯನಗರ ವ್ಯಾಪಿಸಿದೆ. ೧೯೪೮ರ ಆಗಸ್ಟನಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ನೆನಪಿನಲ್ಲಿ ಜಯನಗರ ಬಡಾವಣೆ ಸ್ಥಾಪಿತವಾಯಿತು. ಈ ಬಡಾವಣೆಯನ್ನು ಆಗಿನ ಭಾರತದ ಗೊವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿಯವರು ಉದ್ಘಾಟಿಸಿದರು ಎಂಬುದು ಇತಿಹಾಸ. ಈ ಜಯನಗರ ಬಡಾವಣೆ ಏಷಿಯಾದಲ್ಲೇ ಅತ್ಯಂತ ದೊಡ್ಡದಾದ ಬಡಾವಣೆ ಎಂದು ಹೇಳುತ್ತಾರೆ. ಆದರೆ ಇದು ಇನ್ನೂ ಪ್ರಸ್ತುತವಾಗಿದೆಯೇ ತಿಳಿಯದು. ಆದರೂ ಜಯನಗರ ಬಡಾವಣೆಯ ವ್ಯಾಪ್ತಿ ನೋಡಿದರೆ ಇದು ಅತಿ ವಿಸ್ತಾರವಾದ ಪ್ರದೇಶ ಎಂಬುದರಿವಾಗುತ್ತದೆ. ಈ ಬಡಾವಣೆ ಕನಕನಪಾಳ್ಯ(೨ನೇ ವಿಭಾಗ), ಸಿದ್ಧಾಪುರ(೧ನೇ ವಿಭಾಗ), ಯೆಡಿಯೂರು(೬ನೇ ವಿಭಾಗ), ಪುಟ್ಟಯನಪಾಳ್ಯ(೯ನೇ ವಿಭಾಗ), ಬೈರಸಂದ್ರ(೧ನೇ ವಿಭಾಗ ಪೂರ್ವ), ಮಾರೇನಹಳ್ಳಿ(೫ನೇ ವಿಭಾಗ) ಮುಂತಾದ ಅನೇಕ ಹಳ್ಳಿಗಳನ್ನು ತನ್ನೋಡನೆ ವಿಲೀನಗೊಳಿಸಿಕೊಂಡಿದೆ.

ಜಯನಗರ ಬಡಾವಣೆಯಲ್ಲಿ ಮುಖ್ಯವಾಗಿ ಒಟ್ಟು ಹತ್ತು ವಿಭಾಗಗಳಿವೆ(ಬ್ಲಾಕ್‌ಗಳು). ಈಗ ಒಂದೊಂದು ವಿಭಾಗದ ಪರಿಚಯವನ್ನು ಮಾಡಿಕೊಳ್ಳೋಣ. ಜಯನಗರ ಒಂದನೇ ವಿಭಾಗ ಲಾಲ್‌ಭಾಗ್‌ನ ಪೂರ್ವಕ್ಕೆ ಸಿದ್ಧಾಪುರ ಎನ್ನುವ ಹಳ್ಳಿಯನ್ನು ವ್ಯಾಪಿಸಿಕೊಂಡಿದೆ. ಇದು ಪ್ರಸಿದ್ಧ ಅಶೋಕ ಸ್ಥಂಭದ ಪೂರ್ವಕ್ಕೆ ಚಾಚಿಕೊಂಡಿದೆ. ಜಯನಗರ ೧ನೇ ವಿಭಾಗದಲ್ಲಿ ರಾಣಿಸರಳಾದೇವಿ ಪ್ರೌಡಶಾಲೆ, ಮಯ್ಯ ನರ್ಸಿಂಗ್ ಹೋಮ್, ಗಿರಿಯಾಸ್ ಶೋರೂಮ್ ಇವೆ. ಇನ್ನೂ ಸ್ವಲ್ಪ ದಕ್ಷಿಣ ಪೂರ್ವಕ್ಕೆ ಬೈರಸಂದ್ರ, ಎಲ್.ಐ.ಸಿ. ಕಾಲೋನಿಯನ್ನು ಹೊಂದಿಕೊಂಡಿರುವ ಪ್ರದೇಶ ಜಯನಗರ ೧ನೇ ಪೂರ್ವ ವಿಭಾಗ. ಇಲ್ಲಿ ಜಯನಗರದ ಸಾರ್ವಜನಿಕ ಕ್ರೀಡಾಂಗಣವಾದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಮತ್ತು ಜಯನಗರ ಈಜುಕೊಳವಿದೆ.

ಇನ್ನು ಲಾಲ್‌ಭಾಗಿನ ದಕ್ಷಿಣಕ್ಕೆ ಕನಕನಪಾಳ್ಯವನ್ನು ವ್ಯಾಪಿಸಿಕೊಂಡಿರುವ ಪ್ರದೇಶ ಜಯನಗರ ೨ನೇ ವಿಭಾಗ. ಈ ಕನಕನ ಪಾಳ್ಯವೇ ಇತ್ತೀಚೆಗೆ ನಿಧನರಾದ ಪ್ರಸಿದ್ಧ ಖಳನಟರಾದ ವಜ್ರಮುನಿಯವರು ಹುಟ್ಟಿ ಬೆಳೆದ ಸ್ಥಳ. ಅವರೇ ಮುಖ್ಯಸ್ಥರಾಗಿದ್ದ ಜಯನಗರ ಸಹಕಾರಿ ಹೌಸಿಂಗ್ ಸೊಸೈಟಿ ಇರುವುದು ಇಲ್ಲೇ.
ಜಯನಗರದ ೨ನೇ ವಿಭಾಗದಲ್ಲಿ ಶ್ರೀರಾಮದೇವಸ್ಥಾನ, ಕುಚಲಾಂಬ ಕಲ್ಯಾಣ ಮಂಟಪ ಮತ್ತು ದಯಾನಂದ ಸಾಗರ್ ಕುಟುಂಬದ ಮೂರು ಪ್ರಸಿದ್ಧ ಕಲ್ಯಾಣಮಂಟಪಗಳಿವೆ. ಇಲ್ಲಿ ಈಗ ಮಹಾನಗರಪಾಲಿಕೆಯ ಒಂದು ಹೊಸ ವಾಣಿಜ್ಯ ಸಂಕೀರ್ಣವನ್ನು ಸ್ಥಾಪಿಸಲಾಗಿದೆ.

ಜಯನಗರ ೩ನೇ ವಿಭಾಗವು ಜಯನಗರದ ಪ್ರಮುಖ ವಾಣಿಜ್ಯ ಸಂಕೀರ್ಣವಿರುವ ೪ನೇ ವಿಭಾಗದ ಸನಿಹದಲ್ಲೇ ಇರುವುದರಿಂದ, ಇಲ್ಲಿ ವಸತಿ ಪ್ರದೇಶದ ಜೊತೆಗೆ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹೆಚ್ಚಾಗಿವೆ. ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜು, ವಿಜಯ ಪ್ರೌಡಶಾಲೆ ಇಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು. ಇಡೀ ಜಯನಗರದಲ್ಲಿ ಈಗ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಏಕೈಕ ಚಿತ್ರಮಂದಿರ ‘ನಂದ’ ಇರುವುದು ಇಲ್ಲಿಯೇ. ಎಲ್ಲಾ ವರ್ಗದವರ ನಾಲಿಗೆ ರುಚಿಯನ್ನು ತಣಿಸುವ ಅನೇಕ ಉಪಹಾರ ಮಂದಿರಗಳು ಇಲ್ಲಿವೆ. ಉಡುಪಿ ಹೋಟೆಲ್‌ಗಳಾದ ಉಪಾಹಾರ ದರ್ಶಿನಿ, ಉತ್ಸವ್, ಗಣೇಶ್ ದರ್ಶನ್ ದೋಸೆ ಕ್ಯಾಂಪ್, ಆಂದ್ರ ಶೈಲಿಯ ನಂದಿನಿ, ಅಯ್ಯಂಗಾರ್ ಶೈಲಿಯ ಕದಂಬ, ಪಿಡ್ಜಾ ಹಟ್, ಚೈನಿಸ್ ಕ್ಯಾಂಟನ್ ಬಾರ್ ಮತ್ತು ರೆಸ್ಟೊರೆಂಟ್ ಈ ವಿಭಾಗದಲ್ಲಿರುವ ಪ್ರಮುಖ ಆಹಾರ ತಾಣಗಳು.
‘ಪೈ ವೈಸ್‌ರಾಯ್’ ಮತ್ತು ‘ದಿ ಪ್ರೆಸಿಡೆಂಟ್’ ಎಂಬ ಸ್ಟಾರ್ ಹೋಟೆಲ್‌ಗಳು ಇತ್ತೀಚೆಗೆ ಇಲ್ಲಿ ಶುರುವಾಗಿವೆ. ಭೀಮಾಸ್ ಆಭರಣ ಅಂಗಡಿಯೂ ಸೇರಿ ಅನೇಕ ಆಭರಣ ಮಳಿಗೆಗಳು ಇಲ್ಲಿವೆ. ಮಹಿಳಾ ಕಾಲೇಜು ಇರುವುದರಿಂದ ಅದರ ಸುತ್ತಮುತ್ತ ಅನೇಕ ಆದುನಿಕ ಉಡುಗೆ-ತೊಡುಗೆಗಳ ಮಳಿಗೆಗಳು ತಲೆಯೆತ್ತಿವೆ. ಸಂಗೀತ ಪ್ರಿಯರಿಗಾಗಿ ‘ಕ್ಯಾಲಿಪ್ಸೋ’ ಸಿಡಿ, ಕ್ಯಾಸೆಟ್‌ಗಳನ್ನು ಮಾರುವ ಅಂಗಡಿಯಿದೆ. ಸಮಾಧಾನದ ಸಂಗತಿಯೆಂದರೆ ಇಲ್ಲಿ ಕನ್ನಡ ಚಿತ್ರಗಳ ಸಿಡಿ, ಕ್ಯಾಸೆಟ್ಟುಗಳು ದೊರೆಯುತ್ತವೆ.

ಇನ್ನು ಜಯನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ೪ನೇ ವಿಭಾಗದ ಬಗ್ಗೆ ತಿಳಿಯೋಣ. ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಿದ್ಧ ವಾಣಿಜ್ಯ ಸಂಕೀರ್ಣ ಇಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಹಿರಿಯರು ನೆನೆಸಿಕೊಳ್ಳುವ ಹಾಗೇ ಈಗ ಇರುವ ವಾಣಿಜ್ಯ ಸಂಕೀರ್ಣದ ಜಾಗ ೭೦ರ ದಶಕಕ್ಕೂ ಹಿಂದೆ ಆಟದ ಮೈದಾನವಾಗಿತ್ತಂತೆ. ನಂತರ ಇಲ್ಲಿ ಪಾಲಿಕೆಯು ಬೆಂಗಳೂರಿನಲ್ಲೇ ವಿಶಿಷ್ಟವಾದ ಒಂದು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದರು. ಈ ಸ್ಥಳದಲ್ಲಿ ತರಕಾರಿ ಮಾರುಕಟ್ಟೆಯ ಜೊತೆಗೆ, ಜನತಾಬಝಾರ್, ಮತ್ತು
ಎಲ್ಲ ತರಹದ ಅತ್ಯಾಧುನಿಕ ವ್ಯಾಪಾರಿ ಮಳಿಗೆಗಳು ನೆಲೆಯೂರಿವೆ. ವ್ಯಾಪಾರದ ಜೊತೆ ಮನರಂಜನೆಗೂ ಅವಕಾಶ ಕಲ್ಪಿಸುವುದಕ್ಕಾಗಿ ಪಾಲಿಕೆ ಇಲ್ಲಿ ಒಂದು ಚಿತ್ರಮಂದಿರ ನಿರ್ಮಿಸಿತು. ಮೊದಲಿಗೆ ಈ ಚಿತ್ರಮಂದಿರದ ಹೆಸರು ‘ಪೂನಂ’ ಎಂದಿತ್ತು. ನಂತರ ಅದಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಗೌರವಾರ್ಥ ‘ಕಣಗಾಲ್ ಪುಟ್ಟಣ್ಣ’ ಚಿತ್ರಮಂದಿರ ಎಂದು ಮರುನಾಮಕರಣ ಮಾಡಲಾಯಿತು. ಕೆಲವು ವರ್ಷಗಳ ಹಿಂದೆ ಚಿತ್ರಮಂದಿರವನ್ನು ಮುಚ್ಚುವವರೆಗೆ ಇಲ್ಲಿ ಕನ್ನಡ ಚಿತ್ರಪ್ರದರ್ಶನ ಯಶಸ್ವಿಯಾಗಿ ನಡೆದಿತ್ತು. ಪುಟ್ಟಣ್ಣನವರ ಶಿಷ್ಯರಾದ “ಎಡಕಲ್ಲು ಗುಡ್ಡದ ಮೇಲೆ” ಖ್ಯಾತಿಯ ಚಂದ್ರಶೇಖರ್ ಅವರ ‘ಪೂರ್ವಾಪರ’ ಚಿತ್ರ ಇಲ್ಲಿ ಪ್ರದರ್ಶನಗೊಂಡ ಕೊನೆಯ ಚಿತ್ರವಾಯಿತು.

ಈ ಚಿತ್ರಮಂದಿರವನ್ನು ನವೀಕರಣಗೊಳಿಸಿ ಪುನ: ಇಲ್ಲಿ ಕನ್ನಡ ಚಿತ್ರಪ್ರದರ್ಶನ ನಡೆಸುವಂತೆ ಕನ್ನಡ ಚಿತ್ರಾಭಿಮಾನಿಗಳು ಹಾಗೂ ಪುಟ್ಟಣ್ಣನವರ ಶಿಷ್ಯರಾದ ವಿಷ್ಣುವರ್ಧನ ಮತ್ತು ಅಂಬರೀಷ್ ಬಹಳ ಪ್ರಯತ್ನಪಟ್ಟರೂ ಪಾಲಿಕೆ ಇದನ್ನು ನಿರ್ಲಕ್ಷಿಸಿದೆ. ಆದರೆ ಇತ್ತೀಚೆಗೆ ಪಾಲಿಕೆ ಇದರ ಬಗ್ಗೆ ಕ್ರಮಕೈಗೊಳ್ಳುವ ಸೂಚನೆ ನೀಡಿರುವುದು ಇಲ್ಲಿನ ಕನ್ನಡ ಚಿತ್ರಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕನ್ನಡದ ಕಣ್ಮಣಿ ದಿವಂಗತ ಡಾ||ರಾಜಣ್ಣನವರ ಅಭಿನಯದ ಕೊನೆಯ ಚಿತ್ರವಾದ ಶಬ್ದವೇಧಿಯ “ಜನರಿಂದ ನಾನು ಮೇಲೆ ಬಂದೆ... ಜನರನ್ನೇ ನನ್ನ ದೇವರೆಂದೆ...” ಹಾಡು ಜಯನಗರ ವಾಣಿಜ್ಯ ಸಂಕೀರ್ಣದ ಪುಟ್ಟಣ್ಣ ಚಿತ್ರಮಂದಿರದ ಎದುರಿನಲ್ಲೇ ಚಿತ್ರಿತವಾಗಿರುವುದು ವಿಶೇಷ.

ಜಯನಗರದ ೪ನೇ ವಿಭಾಗದಲ್ಲಿ ವಾಣಿಜ್ಯ ಸಂಕೀರ್ಣದ ಎದುರಿನಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣವಿದೆ. ಇಲ್ಲಿಂದ ನಗರದ ಬಹುತೇಕ ಎಲ್ಲಾ ಪ್ರದೇಶಗಳಿಗೆ ಬಸ್ ಸಂಪರ್ಕವಿದೆ. ಬಸ್ ನಿಲ್ದಾಣದ ಹಿಂಬದಿಯಲ್ಲೇ ಮುಸ್ಲಿಮರ ಪ್ರಾರ್ಥನಾ ಸ್ಥಳವಾದ ಈದ್ಗಾ ಮೈದಾನವಿದೆ. ಜಯನಗರ ೪ನೇ ವಿಭಾಗದ ಪೋಲಿಸ್ ಠಾಣೆ ಬಳಿ ಶ್ರೀ ವಿನಾಯಕ ದೇವಸ್ಥಾನ ಮತ್ತು ಜೈನಮಂದಿರವಿದೆ. ಇಲ್ಲಿಂದ ಸ್ವಲ್ಪ ದಕ್ಷಿಣಕ್ಕೆ ಸುಂದರ ಬಾವಿ ಉದ್ಯಾನವನವಿದೆ. ಬಿ.ಹೆಚ್.ಎಸ್ ಸಂಸ್ಥೆಯ ಪದವಿ ಕಾಲೇಜು, ವಿಜಯ ಪದವಿಪೂರ್ವ ಕಾಲೇಜು, ಬಿ.ಇ.ಎಸ್ ಮಹಾವಿದ್ಯಾಲಯ ಇಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು. ಪವಿತ್ರ ರೆಸ್ಟೊರಂಟ್, ಶ್ರೀಸಾಗರ್, ಹಾಟ್‌ಚಿಪ್ಸ್, ಕೂಲ್‌ಜಾಯಿಂಟ್, ಹೋಮ್‌ಮೀಲ್ಸ್, ಆರ್ಯಭವನ್ ಇಲ್ಲಿನ ಜನಪ್ರಿಯ ಆಹಾರ ತಾಣಗಳಾಗಿವೆ. ಸಪ್ನ ಬುಕ್ ಹೌಸ್, ಪ್ರಿಸಮ್, ಬುಕ್ ಪ್ಯಾರಡೈಸ್ ಇಲ್ಲಿನ ಪ್ರಸಿದ್ಧ ಪುಸ್ತಕದಂಗಡಿಗಳು. ಈ ಭಾಗದ ಜನರಿಗೆ ಎಲ್ಲಾ ತರಹದ ವಸ್ತುಗಳನ್ನು ಖರೀದಿಸಲು ಇಲ್ಲಿಯೇ ಅವಕಾಶವಿರುವುದರಿಂದ ಮೆಜೆಸ್ಟಿಕ್ ಪ್ರದೇಶ, ಕಮರ್ಶಿಯಲ್ ರಸ್ತೆ, ಬ್ರಿಗೇಡ್ ರಸ್ತೆಗಳ ಕಡೆ ಶಾಪಿಂಗ್‌ಗಾಗಿ ಹೋಗುವ ಪ್ರಮೇಯವೇ ಇಲ್ಲವೆನ್ನಬಹುದು. ದಿನವೂ ಇಲ್ಲಿ ಜನಸಾಗರ ತುಂಬಿ ತುಳುಕುತ್ತಿರುತ್ತದೆ. ವಾರದ ಕೊನೆಯಲ್ಲಂತೂ ಇಲ್ಲಿ ಹಬ್ಬದ ವಾತಾವರಣವಿರುತ್ತದೆ. ಇಳಿವಯಸ್ಸಿನ ಸ್ನೇಹಿತರು, ಯುವ ಪ್ರೇಮಿಗಳು, ಮಕ್ಕಳ ಸಮೇತ ದಂಪತಿಗಳು ಇಲ್ಲಿನ ವಾಣಿಜ್ಯ ಸಂಕೀರ್ಣದ ಕಟ್ಟೆಯ ಮೇಲೆ ಕುಳಿತು ಬಿಸಿಬಿಸಿ ಕಡ್ಲೇಕಾಯಿ, ಮುಸುಕಿನಜೋಳ, ಐಸ್‌ಕ್ರೀಮ್ ಸೇವಿಸುತ್ತ ಹರಟೆಹೊಡೆಯುತ್ತಿರುತ್ತಾರೆ. ರಾತ್ರಿಯಲ್ಲಿ ಅಂಗಡಿಗಳ ನಾಮಫಲಕಗಳ, ಜಾಹೀರಾತು ಫಲಕಗಳ ಜಗಮಗಿಸುವ ದೀಪದ ಬೆಳಕಿನಲ್ಲಿ ಈ ಪ್ರದೇಶ ಮಾಯಾಲೋಕದಂತೆ ಕಂಡು ಬರುತ್ತದೆ. ಎಲ್ಲಾ ಆಹಾರ ತಾಣಗಳ ಮುಂದೆಯೂ ಇರುವೆಗಳಂತೆ ಜನ ಮುತ್ತಿರುತ್ತಾರೆ! ವಾಹನಗಳ ಪಾರ್ಕಿಂಗ್ ಮಾಡುವುದೇ ಇಲ್ಲಿನ ದೊಡ್ಡ ಸಮಸ್ಯೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬೆಂಗಳೂರು ದಕ್ಷಿಣದ ಮಂದಿಗೆ ಬಿಡುವಿನ ಸಮಯ ಕಳೆಯಲು ಮತ್ತು ಶಾಪಿಂಗ್ ಮಾಡಲು ಜಯನಗರ ೪ನೇ ವಿಭಾಗದ ವಾಣಿಜ್ಯ ಸಂಕೀರ್ಣ ಅತ್ಯಂತ ಹತ್ತಿರದ ಮತ್ತು ಮೆಚ್ಚಿನ ತಾಣವಾಗಿದೆ.

ಈಗ ಜಯನಗರದ ೪ನೇ ‘ಟಿ’ ವಿಭಾಗಕ್ಕೆ ಹೋಗೋಣ. ಈ ಭಾಗ ಜಯನಗರದ ನಾಲ್ಕನೇ ವಿಭಾಗ ಮತ್ತು
ಜಯನಗರದ ೯ನೇ ವಿಭಾಗದ ಮಧ್ಯೆ ಹರಡಿಕೊಂಡಿದೆ. ಈ ಪ್ರದೇಶ ಜಯನಗರದ ೪ನೇ ವಿಭಾಗದಂತೆ
ಗಿಜಿಗುಟ್ಟುವ ಪ್ರದೇಶವಲ್ಲ. ಇಲ್ಲಿ ಪ್ರಶಾಂತ ವಾತಾವರಣವಿದೆ. ಜಯನಗರದ ಸಾರ್ವಜನಿಕ ಆಸ್ಪತ್ರೆ ಇಲ್ಲಿದೆ. ಪಕ್ಕದಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಜಯನಗರ ವಿಭಾಗದ ಬಸ್ ಡಿಪೂ ಕೂಡ ಇದೆ. ಸುದರ್ಶನ ವಿದ್ಯಾ ಮಂದಿರ, ಎಸ್.ಎಸ್.ಎಂ.ಆರ್.ವಿ ಮಹಾವಿದ್ಯಾಲಯ, ಕಾರ್ಮಲ್ ಕಾನ್ವೆಂಟ್ ಮುಂತಾದ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಈ ವಿಭಾಗದ ಉದ್ಯಾನವನ ಒಂದರ ಎದುರಿಗೆ ಖ್ಯಾತ ಚಿತ್ರನಟ ಡಾ||ವಿಷ್ಣುವರ್ಧನ್ ಅವರ ಮನೆಯಿದೆ. ಈ ವಿಭಾಗಕ್ಕೆ ಹೊಂದಿಕೊಂಡಂತೆ ತಿಲಕ್‌ನಗರವಿದೆ. ಇಲ್ಲಿ ಸ್ವಾಗತ್ ಚಿತ್ರಮಂದಿರವಿತ್ತು. ಮೊದಮೊದಲು ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಈ ಚಿತ್ರಮಂದಿರದಲ್ಲಿ ನಂತರ ಹಿಂದಿ ಚಿತ್ರಗಳದ್ದೇ ಕಾರುಬಾರಾಗಿತ್ತು. ಈಗ ಇದು ನೆಲಸಮವಾಗಿ ಇಲ್ಲೊಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಸಾಗರ್ ಅಪೋಲೋ ಆಸ್ಪತ್ರೆ ಜಯನಗರದ ತಿಲಕ್‌ನಗರ ಪ್ರದೇಶದಲ್ಲೇ ಸ್ಥಾಪಿತವಾಗಿದೆ.

ಜಯನಗರದ ೫ನೇ ವಿಭಾಗಕ್ಕೆ ಬರೋಣ. ಶ್ರೀ ರಾಘವೇಂದ್ರ ಮಠ, ಗಣಪನ ಸನ್ನಿದಿಯ ಜೊತೆ ದೊಡ್ಡ ನವಗ್ರಹ ವಿಗ್ರಹಗಳ ದೇವಸ್ಥಾನ, ಶ್ರೀ ಪೇಜಾವರ ಮಠಾದೀಶರ ಶ್ರೀಕೃಷ್ಣ ಸೇವಾಕ್ಷೇತ್ರ ಆಸ್ಪತ್ರೆ, ಶಾಂತಿ ಪಾಲಿಕ್ಲಿನಿಕ್, ಒಂದು ಸುಂದರ ಉದ್ಯಾನವನ, ಆಟದ ಮೈದಾನ ಮತ್ತು ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರಾದ ದಿವಂಗತ ಪು.ತಿ.ನ ಅವರ ಮನೆ ಈ ಭಾಗದಲ್ಲಿದೆ.

ಜಯನಗರದ ೬, ೭, ೮ ನೇ ವಿಭಾಗಳು ಒಂದೇ ಸಾಲಿನಲ್ಲಿ ಬರುವುದು ವಿಶೇಷ. ಉತ್ತರದಲ್ಲಿ ಯಡಿಯೂರು ಕೆರೆಯಿಂದ ಶುರುವಾಗಿ ದಕ್ಷಿಣದಲ್ಲಿ ಬನಶಂಕರಿ ದೇವಸ್ಥಾನದವರೆಗೆ ಈ ವಿಭಾಗಗಳು ಹರಡಿಕೊಂಡಿವೆ. ಪಶ್ಚಿಮಕ್ಕೆ ಕನಕಪುರ ರಸ್ತೆ, ಪೂರ್ವಕ್ಕೆ ಸುಂದರ ಉದ್ಯಾನಗಳಿಂದ ಕೂಡಿದ ಮುಖ್ಯರಸ್ತೆ ಇದೆ. ಸೌತ್‌ಎಂಡ್ ಸರ್ಕಲ್ ಎಂದೇ ಪ್ರಸಿದ್ಧವಾಗಿರುವ ತಿ.ನಂ.ಶ್ರೀ ವೃತ್ತದಿಂದ ಶುರುವಾಗುವ ಈ ರಸ್ತೆ ಸುಮಾರು ಎರಡು ಕಿಲೋಮೀಟರಗಿಂತ ಹೆಚ್ಚು ಉದ್ದವಿದೆ. ರಸ್ತೆಯ ಎರಡೂ ಬದಿಗಳಲ್ಲಿ ಆಕಾಶದೆತ್ತರಕ್ಕೆ ಚಾಚಿರುವ ಮರಗಳು, ಲಕ್ಷ್ಮಣ್‌ರಾವ್ ಉದ್ಯಾನವನ, ಗುಲಾಬಿ ತೋಟಗಳಿವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವುದೇ ಒಂದು ಹಿತಕರವಾದ ಅನುಭವ. ಎಂಥ ಬಿರುಬಿಸಿಲಿನಲ್ಲೂ ಈ ರಸ್ತೆಯಲ್ಲಿ ಮರಗಳ ತಂಪು! ಜಯನಗರ ೬ನೇ ವಿಭಾಗದಲ್ಲಿ ಯಡಿಯೂರ್ ಕೆರೆ ಬಳಿ ಅನಿಲ್‌ಕುಂಬ್ಳೆ ಮನೆಯಿದೆ. ೭ನೇ ವಿಭಾಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಜಯನಗರ ಶಾಖೆ ಇದೆ. ಪ್ರಸಿದ್ಧ ಹೆಚ್.ಎನ್.ಕಲಾಕ್ಷೇತ್ರವಿರುವುದು ಇಲ್ಲಿಯೇ. ಪ್ರತಿವರ್ಷ ಡಿಸೆಂಬರ ೨೫ರಂದು ಇಲ್ಲಿ ಜನಪ್ರಿಯವಾದ ಹಾಸ್ಯಮೇಳ ಆಯೋಜಿಸುತ್ತಾರೆ. ಅನೇಕ ಹವ್ಯಾಸಿ ನಾಟಕಗಳ ಪ್ರದರ್ಶನಗಳೂ ಇಲ್ಲಿ ನಡೆಯುತ್ತವೆ.

ಕೊನೆಯದಾಗಿ ಜಯನಗರ ೯ನೇ ವಿಭಾಗಕ್ಕೆ ಬರೋಣ. ಇದು ೮ನೇ ವಿಭಾಗದ ಹತ್ತಿರವಿದೆ ಎಂದು ನೀವೆಂದುಕೊಂಡರೆ ಅದು ತಪ್ಪು. ಜಯನಗರ ಒಂಬತ್ತನೇ ವಿಭಾಗ ಜಯನಗರ ೪ನೇ ‘ಟಿ’ ವಿಭಾಗ ಹಾಗೂ ಜೆ.ಪಿ. ನಗರದ ಮಧ್ಯೆ ಹರಡಿಕೊಂಡಿದೆ. ಇಲ್ಲಿನ ಪ್ರಮುಖ ಸ್ಥಳ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ. ಈ ದೇವಸ್ಥಾನದ ನಿರ್ವಹಣೆ ಇದೇ ಹೆಸರಿನ ಟ್ರಸ್ಟ ವತಿಯಿಂದ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಸುಂದರವಾದ ಉದ್ಯಾನ, ಕೃತಕ ಜಲಪಾತದಿಂದ ಕೂಡಿರುವ ಈ ದೇವಸ್ಥಾನ ಬೆಂಗಳೂರಿನ ಒಂದು ಸುಂದರ ತಾಣವಾಗಿದೆ. ಗುಡ್ಡದ ಮೇಲೆ ಆಂಜನೇಯ ಸ್ವಾಮಿ, ಪಚ್ಚೆ ಲಿಂಗ ಹಾಗು ಶ್ರೀಸೀತಾಲಕ್ಷ್ಮಣಹನುಮತ್ಸಮೇತ ಶ್ರೀರಾಮಚಂದ್ರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿವರ್ಷ ಡಿಸೆಂಬರ ತಿಂಗಳಿನಲ್ಲಿ ಹತ್ತು ದಿನ ಶ್ರೀ ಹನುಮ ಜಯಂತಿ ಉತ್ಸವದ ಆಚರಣೆಯು ಇಲ್ಲಿ ವೈಭವದಿಂದ ನಡೆಯುತ್ತದೆ. ಈ ಸಮಯದಲ್ಲಿ ನಗರದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಸ್ವರ್ಣಕವಚದಾರಿಯಾದ ಆಂಜನೇಯನ ಮೂರ್ತಿಯನ್ನು ದರ್ಶನ ಮಾಡಲು ಬರುತ್ತರೆ. ಇದಲ್ಲದೇ ಇಲ್ಲಿನ ಕುಚಲಾಂಭ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರತಿನಿತ್ಯ ಪ್ರವಚನಗಳು, ಯೋಗಾಭ್ಯಾಸ ತರಗತಿಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಜಯನಗರ ೯ನೇ ವಿಭಾಗದ ಬಸ್‌ನಿಲ್ದಾಣದ ಬಳಿ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ, ಹೂವು-ಹಣ್ಣು ಮಾರುವ ಗಾಡಿಗಳು ಸಾಲಾಗಿ ನಿಂತಿರುತ್ತವೆ. ಇದು ಈ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ. ವುಡ್ಡೀಸ್ ರೆಸ್ಟೋರಂಟ್, ಪೈ ಕಂಫ಼ರ್ಟ್ಸ್ ಈ ಭಾಗದಲ್ಲಿನ ಪ್ರಮುಖ ಆಹಾರತಾಣಗಳಾಗಿವೆ. ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಂತೆ ಜಯನಗರ ೯ನೇ ಪೂರ್ವ ವಿಭಾಗವಿದೆ. ಇಲ್ಲಿ ಪ್ರಸಿದ್ಧ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿತವಾಗಿದೆ. ಇಲ್ಲಿನ ಪೂರ್ವಾಂತ್ಯ ರಸ್ತೆಯಲ್ಲಿ ನೀರಾವರಿ ತಜ್ಞ ನಂಜೇಗೌಡರ ಮನೆಯಿದೆ. ಇದೇ ರಸ್ತೆಯಲ್ಲಿ ಶ್ರೀರಾಮಮಂದಿರವೊಂದಿದೆ. ಈ ಮಂದಿರದಲ್ಲಿ ಅಮೃತಶಿಲೆಯ ಸುಂದರವಾದ ಸೀತಾಲಕ್ಷ್ಮಣಹನುಮತ್ಸಮೇತ ಶ್ರೀರಾಮಚಂದ್ರಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಶ್ರೀ ಗಣೇಶನ ಗುಡಿಯೂ ಇದೆ. ಬನ್ನೇರುಘಟ್ಟ ರಸ್ತೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿರುವ ಜಯನಗರ ಹಾಗೂ ಕುವೆಂಪು ನಗರವನ್ನು ಕೂಡಿಸುವ ಜಯದೇವ ವೃತ್ತದ ಮೇಲ್ಸೇತುವೆ ಕಾಮಗಾರಿ ಕೊನೆಯ ಹಂತಕ್ಕೆ ಬಂದಿರುವುದರಿಂದ ಈ ಭಾಗದ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ.

ಜಯನಗರ ಬಡಾವಣೆ ಬೆಂಗಳೂರು ನಗರದ ದಕ್ಷಿಣದ ಅತ್ಯಂತ ವಿಶಾಲ ಹಾಗೂ ವ್ಯವಸ್ಥಿತ ಬಡಾವಣೆಯಲ್ಲೊಂದಾಗಿದೆ. ಕನ್ನಡದ ಪ್ರಖ್ಯಾತ ಸಾಹಿತಿಗಳಾದ ಎಲ್.ಎಸ್. ಶೇಷಗಿರಿರಾಯರು, ಗೊ.ರು.ಚೆನ್ನಬಸಪ್ಪನವರು ಇದೇ ಬಡಾವಣೆಯಲ್ಲಿ ನೆಲೆಸಿದ್ದಾರೆ. ಹಿಂದೆ ಅಚ್ಚಕನ್ನಡ ಪ್ರದೇಶವಾಗಿದ್ದ ಜಯನಗರ ಈಗ ಪರಭಾಷಿಕರ ನೆಚ್ಚಿನ ತಾಣವಾಗುತ್ತಿದೆ. ಕನ್ನಡದ ದ್ವನಿ ಕ್ಷೀಣಿಸುತ್ತಿದೆ. ಇಲ್ಲಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಬಂದು ನೆಲಸಿದರೆ ಬೆಂಗಳೂರು ದಕ್ಷಿಣದಲ್ಲಿ ಕನ್ನಡಿಗರ ದ್ವನಿ ಇನ್ನೂ ಜೋರಾಗಿ ಮೊಳಗಿ, ಕನ್ನಡ ಡಿಂಡಿಮ ಭಾರಿಸಬಹುದು. ಇಲ್ಲದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಕೋರಮಂಗಲದಂತೆ ಇಲ್ಲಿಯೂ ಕನ್ನಡಿಗರನ್ನು ಹುಡುಕಬೇಕಾಗಬಹುದು.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು