ಅಕ್ಕರೆಯ ದಾವಣಗೆರೆಯ ಬಗ್ಗೆ ಒಂದಿಷ್ಟು ಗರಿಗರಿ ಮಾತು

ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಬಾಯಲ್ಲಿ ನೀರೂರಿಸುವ ಗರಿಗರಿಯಾದ ಬೆಣ್ಣೆ ದೋಸೆ, ಮಸಾಲೆ ಮಂಡಕ್ಕಿ ಮತ್ತು ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ. ಇದಷ್ಟೇ ಅಲ್ಲ ದಾವಣಗೆರೆ ಮಧ್ಯಕರ್ನಾಟಕದ ಒಂದು ಪ್ರಮುಖ ಶೈಕ್ಷಣಿಕ ಹಾಗೂ ವಾಣಿಜ್ಯ ನಗರಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಿಗುವ ದಾವಣಗೆರೆ, ಬೆಂಗಳೂರಿನಿಂದ ಸುಮರು ೨೬೦ ಕಿ.ಮಿ ದೂರವಿದೆ. ಮೊದಲಿಗೆ ಇದು ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. ದಿವಂಗತ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ದಾವಣಗೆರೆಗೆ ಜಿಲ್ಲಾ ಕೇಂದ್ರವಾಗುವ ಸೌಭಾಗ್ಯ ಒದಗಿಬಂತು. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು, ಹರಿಹರ, ದಾವಣಗೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ಮತ್ತು ಬಳ್ಳಾರಿಯ ಹರಪ್ಪನಹಳ್ಳಿ ತಾಲ್ಲೂಕುಗಳನ್ನೊಳಗೊಂಡಂತೆ ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬಂತು.

ದೇವನಗರಿಯ ಅಪಭ್ರಂಶವೇ ದಾವಣಗೆರೆ ಎಂದು ಸ್ಥಳೀಯ ಇತಿಹಾಸದಿಂದ ತಿಳಿಯುತ್ತದೆ. ಇದು ಉತ್ತರ ಕರ್ನಾಟಕದವರಿಗೆ ದಾವಣಗೇರಿಯಾಗಿದೆ. ದಾವಣಗೆರೆಯು ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳ ಎರಡು ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಶೈಲಿಗಳು ಮೇಳೈಸಿ ದಾವಣೆಗೆರೆಗೆ ಒಂದು ವಿಶಿಷ್ಟ ಸ್ಥಾನ ನೀಡಿವೆ. ಇಲ್ಲಿ ಉಡುಪಿ ಹೋಟೆಲ್ಲುಗಳ ಜೊತೆ ವೀರಶೈವ ಖಾನಾವಳಿಗನ್ನೂ ಕಾಣಬಹುದು. ದಕ್ಷಿಣದ ರಾಗಿಮುದ್ದೆ ಊಟವನ್ನೂ ಸವಿಯಬಹುದು, ಉತ್ತರದ ಜೋಳದ ರೊಟ್ಟಿ ಊಟವನ್ನೂ ಆಸ್ವಾದಿಸಬಹುದು! ದಕ್ಷಿಣ ಕರ್ನಾಟಕದ ಭಾಷಾ ಶೈಲಿಯೊಡನೆ ಉತ್ತರ ಕರ್ನಾಟಕದ ಭಾಷಾ ಶೈಲಿಯೂ ಸಮ್ಮಿಳಿತಗೊಂಡು ದಾವಣಗೆರೆಯ ಜನರಾಡುವ ಕನ್ನಡ ವಿಶಿಷ್ಟವಾಗಿದೆ.

ಮೊದಲೇ ತಿಳಿಸಿದಂತೆ ದಾವಣಗೆರೆ ಶೈಕ್ಷಣಿಕವಾಗಿ ಕರ್ನಾಟಕದಲ್ಲೇ ಅತ್ಯಂತ ಹೆಸರುವಾಸಿಯಾದ ನಗರ. ಇಲ್ಲಿ ಎರಡು ಇಂಜಿನಿಯರಿಂಗ್ ಕಾಲೇಜುಗಳು, ಒಂದು ಮೆಡಿಕಲ್ ಮತ್ತು ಡೆಂಟಲ್ ಕಾಲೇಜು, ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ ಕಾಲೇಜುಗಳು ಇವೆ. ನಗರದ ಬೆಳವಣಿಗೆಯಲ್ಲಿ ಈ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಬಹಳಷ್ಟಿದೆ. ಎಲ್ಲಿ ನೋಡಿದರೂ ಇಲ್ಲಿ ವಿದ್ಯಾರ್ಥಿಗಳು(ವಿದ್ಯಾರ್ಥಿನಿಯರೂ!) ಕಾಣ ಸಿಗುತ್ತಾರೆ. ವಿದ್ಯಾರ್ಥಿನಿಲಯಗಳಂತೂ ಇಲ್ಲಿ ಅನೇಕ ಇವೆ. ಕಾಲೇಜುಗಳಿಗೆ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳಲ್ಲದೇ, ವಿವಿಧ ಸಮುದಾಯದವರ ವಿದ್ಯಾರ್ಥಿನಿಲಯಗಳೂ ಇವೆ.

ಹಿಂದೆ ದಾವಣಗೆರೆ ಪ್ರಸಿದ್ಧ ಕಾಟನ್ ಮಿಲ್‌ಗಳಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಜನಪ್ರಿಯವಾಗಿತ್ತು. ಆದರೆ ದಾವಣಗೆರೆಯಲ್ಲಿದ್ದ ಬಹಳಷ್ಟು ಕಾಟನ್ ಮಿಲ್‌ಗಳು ಈಗ ಮುಚ್ಚಿವೆ. ಒಂದು ಕಾಲದಲ್ಲಿ ಇಲ್ಲಿನ ಕಾಟನ್ ಮಿಲ್ ಕಾರ್ಮಿಕರ ಸಂಘಟನೆಯ ಪ್ರಭಾವದಿಂದ ಕಮ್ಯೂನಿಷ್ಟ ಪಕ್ಷ ಇಲ್ಲಿ ಪ್ರಬಲವಾಗಿತ್ತು. ಆದರೆ ಈಗ ಇಲ್ಲಿನ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸಮಬಲವಾಗಿವೆ.

ದಾವಣಗೆರೆಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಮಂಡಕ್ಕಿ(ಕಡ್ಲೆಪುರಿ) ಭಟ್ಟಿಗಳಿವೆ. ಇಲ್ಲಿ ತಯಾರಾಗುವ ಮಂಡಕ್ಕಿ ಉತ್ತಮಗುಣಮಟ್ಟದ್ದಾಗಿ ಕರ್ನಾಟಕದೆಲ್ಲಡೆ ಸರಬರಾಜಾಗುತ್ತದೆ. ದಾವಣಗೆರೆ ಮಂದಿಗೆ ಬಹಳ ಇಷ್ಟವಾದ ತಿಂಡಿ ಕಾರಾ ಮಂಡಕ್ಕಿ, ಜೊತೆಗೆ ನೆಂಚಿಕೊಳ್ಳಲು ಮೆಣಸಿನಕಾಯಿ ಬಜ್ಜಿ. ಮಂಡಕ್ಕಿಯಲ್ಲೂ ಮಸಾಲೆ ಮಂಡಕ್ಕಿ, ನರ್ಗೀಸ್(ಹೆಚ್ಚು ಮಸಾಲೆ ಇರುತ್ತದೆ. ಆದರೆ ಇದಕ್ಕೆ ನರ್ಗೀಸ್ ಎಂದೇಕೆ ಹೆಸರು ಬಂತೆಂದು ತಿಳಿಯಲಿಲ್ಲ) ಮಂಡಕ್ಕಿ ಎಂದು ವಿವಿಧ ಬಗೆ ಇವೆ. ದಾವಣಗೆರೆಯ ಮಸಾಲ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ ತಿಂದವರಿಗೆ ಗೊತ್ತು ಅದರ ರುಚಿ. ನಾನು ಇಲ್ಲಿ ಓದುತ್ತಿದ್ದಾಗ ಇಲ್ಲಿನ ಪ್ರಸಿದ್ಧ ಜಯದೇವ ವೃತ್ತದಲ್ಲಿ ಮಸಾಲೆ ಮಂಡಕ್ಕಿ ಮಾಡುವ ಒಂದು ಅಂಗಡಿ ಇತ್ತು. ಅದು ಎಷ್ಟು ಪ್ರಸಿದ್ಧವಾಗಿತ್ತೆಂದರೆ ಸಂಜೆಯಾಗುತ್ತಿದ್ದಂತೆ ಈ ಅಂಗಡಿಯ ಮುಂದೆ ಜನಜಂಗುಳಿ ನೆರೆದಿರುತ್ತಿತ್ತು. ಈ ಅಂಗಡಿ ನಾನಿದ್ದ ವಿದ್ಯಾರ್ಥಿನಿಲಯದಿಂದ ಕೆಲವು ಹೆಜ್ಜೆಗಳ ದೂರ ಅಷ್ಟೇ. ಅದ್ದರಿಂದ ನಾನು ಈ ಅಂಗಡಿಯ ಖಾಯಂ ಗಿರಾಕಿಯಾಗಿದ್ದೆ. ಪ್ರತಿದಿನ ಸಂಜೆ ತಪ್ಪದೇ ಇಲ್ಲಿನ ಮಸಾಲೆ ಮಂಡಕ್ಕಿಯ ಜೊತೆಗೆ ಎರಡು ಮೆಣಸಿನಕಾಯಿ ಬಜ್ಜಿ ತಿನ್ನದಿದ್ದರೆ ನನಗೆ ಸಮಾಧಾನವಿರುತ್ತಿರಲಿಲ್ಲ.

ಇನ್ನು ದಾವಣಗೆರೆ ಬಗ್ಗೆ ಬರೆಯುವಾಗ ಇಲ್ಲಿನ ಮತ್ತೊಂದು ಪ್ರಸಿದ್ಧ ಭಕ್ಷ್ಯವಾದ ಬೆಣ್ಣೆ ದೋಸೆ ಬಗ್ಗೆ ಬರೆಯದಿರಲು ಸಾಧ್ಯವೇ ಇಲ್ಲ. ಮೈಸೂರಿಗೆ ಹೇಗೆ ಮೈಸೂರು ಪಾಕ್ ವಿಶೇಷವೋ, ದಾರವಾಡಕ್ಕೆ ಪೇಡ ಹೇಗೆ ವಿಶೇಷವೋ ಹಾಗೇ ದಾವಣಗೆರೆ ಬೆಣ್ಣೆ ದೋಸೆ ಎಂದೇ ಖ್ಯಾತಿಪಡೆದಿರುವ ಈ ವಿಶಿಷ್ಟ ದೋಸೆ ದಾವಣಗೆರೆಗೆ ವಿಶೇಷವಾಗಿದೆ. ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಎಂದೇ ಕರೆಯಲಾಗುವ ಹೋಟೆಲ್‌ಗಳಲ್ಲಿ ಮಾತ್ರ ಈ ವಿಶಿಷ್ಟ ದೋಸೆಗಳನ್ನು ಸವಿಯಬಹುದು. ಈ ಹೋಟೆಲ್‌ಗಳಲ್ಲಿ ಬೆಣ್ಣೆದೋಸೆ ಬಿಟ್ಟರೆ ಬೇರಾವ ತಿಂಡಿಯೂ ಸಿಗುವುದಿಲ್ಲ. ಬೆಣ್ಣೆದೋಸೆ ಹೋಟೆಲ್‌ನಲ್ಲಿ ವಿವಿಧ ದೋಸೆಗಳನ್ನು ತಯಾರಿಸುತ್ತಾರೆ. ಸೆಟ್‌ದೋಸೆ ತರಹದ ಮೃದುವಾದ ಮೂರು ದೋಸೆಗಳಿಗೆ ಖಾಲಿ ದೋಸೆ ಎಂದು ಕರೆಯುತ್ತಾರೆ. ಸ್ವಲ್ಪ ದಪ್ಪಗೆ ಗರಿಗರಿಯಾಗಿ ದೊಸೆಯನ್ನು ಸುತ್ತದೆ, ಮೇಲೇ ಚಟ್ನಿಪುಡಿ ಹರಡಿರುವ ತೆರೆದಿರುವ ದೋಸೆಗೆ ಓಪನ್‌ದೋಸೆ ಎಂದೂ ಹೆಸರು. ಈ ಓಪನ್ ದೋಸೆಯ ರುಚಿ ತಿಂದವರೇ ಬಲ್ಲರು!
ಒಂದು ಪ್ಲೇಟ್ ಖಾಲಿದೋಸೆ ತಿಂದು ನಂತರ ಒಂದು ಗರಿಗರಿ ಬೆಣ್ಣೆದೋಸೆ ತಿನ್ನುವುದು ದಾವಣಗೆರೆ
ಜನರಲ್ಲಿ ಸಾಮಾನ್ಯವಾಗಿ ರೂಡಿಯಲ್ಲಿದೆ.

ಮೊದಮೊದಲು ದಾವಣಗೆರೆ, ಹರಿಹರ ಬಿಟ್ಟರೆ ಬೇರೆಲ್ಲೂ ಇಂತಹ ಹೋಟೆಲ್‌ಗಳು ಇರಲಿಲ್ಲ. ಆದ್ದರಿಂದ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಹಿಂತಿರುಗಬೇಕಾದಗ ಇನ್ನು ಮುಂದೆ ಬೆಣ್ಣೆದೋಸೆ ತಿನ್ನಲು ಸಾದ್ಯವಿಲ್ಲವಲ್ಲ ಎಂಬ ಕೊರಗಿನಿಂದಲೇ ದಾವಣಗೆರೆಗೆ ವಿದಾಯ ಹೇಳಬೇಕಾಯಿತು. ಆದರೆ ದಾವಣಗೆರೆ ಬೆಣ್ಣೆದೋಸೆ ಪ್ರಿಯರ ಸುಯೋಗವೊ ಏನೋ ಈಗ ಬೆಂಗಳೂರಿನಲ್ಲಿ ಒಂದೆರಡು ಸ್ಥಳಗಳಲ್ಲಿ ದಾವಣಗೆರೆ ಬೆಣ್ಣೆದೋಸೆ ಹೋಟೆಲ್‌ಗಳು ಶುರುವಾಗಿವೆ. ಅದರಲ್ಲೂ ನೆಟ್‌ಕಲ್ಲಪ್ಪ ವೃತ್ತದ ಬಳಿಯಿರುವ ಬೆಣ್ಣೆದೊಸೆ ಹೋಟೆಲ್‌ನಲ್ಲಿ ದಾವಣಗೆರೆಯಲ್ಲಿರುವ ಬೆಣ್ಣೆದೋಸೆ ಹೋಟೆಲ್ಲಿನಷ್ಟೇ ಉತ್ತಮ ಗುಣಮಟ್ಟದ ಗರಿಗರಿಯಾದ ಬೆಣ್ಣೆದೋಸೆಗಳನ್ನು ತಯಾರಿಸುತ್ತಾರೆ. ಜೊತೆಗೆ ಮಸಾಲೆ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ ಕೂಡ ಇಲ್ಲಿ ಸಿಗುತ್ತದೆ. ಈಗ ನಾನು ಈ ಹೊಟೆಲ್‌ನ ಖಾಯಂ ಗಿರಾಕಿ ಎಂದು ಬೇರೇ ಹೇಳಬೇಕಿಲ್ಲ!

ದಾವಣಗೆರೆ ಅಪ್ಪಟ್ಟ ಕನ್ನಡಿಗರಿರುವ ಗಂಡುಮೆಟ್ಟಿನ ಪ್ರದೇಶ. ಆದ್ದರಿಂದ ದಾವಣಗೆರೆ ಕನ್ನಡ ಚಿತ್ರರಂಗದ ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಕನ್ನಡ ಚಿತ್ರವೂ ಇಲ್ಲಿನ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತವೆ. ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ, ಊರುಗಳಿಂದ ಕನ್ನಡ ಚಿತ್ರಗಳನ್ನು ನೋಡಲು ಕನ್ನಡಿಗರು ಹೆಚ್ಚಾಗಿ ಬರುತ್ತಾರೆ.
ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಗಳು, ಕಾರ್ಯಕ್ರiಗಳನ್ನು ಆಯೋಜಿಸಲು ಕನ್ನಡ ಚಿತ್ರರಂಗಕ್ಕೆ ದಾವಣಗೆರೆ ಅಚ್ಚುಮೆಚ್ಚಿನ ನಗರವಾಗಿದೆ. ಆದರೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ದಾವಣಗೆರೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕಾಗಿ ಪರರಾಜ್ಯಗಳಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಬರುತ್ತಿರುವುದರಿಂದ ಇಲ್ಲೀಯೂ ಪರಭಾಷಿಕರ ಹಾಗು ಪರಭಾಷಾ ಚಿತ್ರಗಳ ಹಾವಳಿ ಜಾಸ್ತಿಯಾಗಿದೆ.

ದಾವಣಗೆರೆಯ ಅವಳಿನಗರವಾಗಿರುವ ಹರಿಹರದ ಬಗ್ಗೆ ಒಂದಿಷ್ಟು ಮಾತು ಹೇಳಲೇಬೇಕಿದೆ. ದಾವಣಗೆರೆಯಿಂದ ೧೫ ಕಿ.ಮಿ ದೂರವಿರುವ ಹರಿಹರ ಹೆಸರೇ ಹೇಳುವಂತೆ ಹರಿ-ಹರನ ದೇವಸ್ಥಾನದಿಂದ ಪ್ರಸಿದ್ಧವಾಗಿದೆ. ತುಂಗಭದ್ರಾ ನದಿಯ ದಡದಲ್ಲಿರುವ ಹರಿಹರೇಶ್ವರ ದೇವಸ್ಥಾನವು ಹೊಯ್ಸಳರ ಶೈಲಿಯ ಬಹಳ ಸುಂದರವಾದ ದೇವಸ್ಥಾನ. ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು, ಹೊಸಪೇಟೆ-ಶಿವಮೊಗ್ಗಗಳನ್ನು ಬೆಸೆಯುವ ಪ್ರಮುಖ ರಾಜ್ಯಹೆದ್ದಾರಿ ಇಲ್ಲಿ ಕೂಡೂವುದರಿಂದ ಹರಿಹರ ರಾಜ್ಯದ ಒಂದು ಪ್ರಮುಖ ರಸ್ತೆಕೂಡಾಗಿದೆ(ಜಂಕ್ಷನ್). ದಾವಣಗೆರೆಗೆ ಭೇಟಿಕೊಟ್ಟವರು ಹತ್ತಿರದಲ್ಲೇ ಇರುವ ಹರಿಹರದ ದೇವಸ್ಥಾನದಲ್ಲಿ ಹರಿಹರೇಶ್ವರನ ದರ್ಶನ ಪಡೆದು ವಿಶಾಲವಾದ ತುಂಗಭದ್ರಾ ನದಿಯನ್ನು ನೋಡಿ ಬರಬಹುದು. ಹರಿಹರದ ತುಂಗಭದ್ರಾ ನದಿ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಗಡಿಯಾಗಿದೆ. ಹರಿಹರ ಪ್ರತಿಷ್ಠಿತ ಬಿರ್ಲಾ ಪಾಲಿಫ಼ೈಬರ್ ಕಾರ್ಖಾನೆ ಮತ್ತು ಮೈಸೂರು ಕಿರ್ಲೋಸ್ಕರ ಕಾರ್ಖಾನೆಗಳಿಗೆ ಪ್ರಸಿದ್ಧ. ಆದರೆ ಮೈಸೂರ್ ಕಿರ್ಲೋಸ್ಕರ ಕಾರ್ಖಾನೆ ಕೆಲವು ವರ್ಷಗಳಿಂದ ಮುಚ್ಚಿರುವುದು ಅಲ್ಲಿನ ಕಾರ್ಮಿಕರಿಗಿದ್ದ ಜೀವನೋಪಾಯಕ್ಕೆ ಬಹಳ ತೊಂದರೆಯಾಗಿದೆ.

ದಾವಣಗೆರೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳವೆಂದರೆ ಚನ್ನಗಿರಿ ಬಳಿಯ ಶಾಂತಿಸಾಗರ(ಸೂಳೆಕೆರೆ). ಇದು ಕರ್ನಾಟಕದಲ್ಲೇ ಅತಿದೊಡ್ಡ ಕೆರೆ ಎಂದು ಹೆಸರು ಪಡೆದಿದೆ. ಸಂತೆಬೆನ್ನೂರಿನ ಸುಂದರ ವಾಸ್ತುಶಿಲ್ಪದ ಪುಷ್ಕರಣಿ ಇಲ್ಲಿನ ಮತ್ತೊಂದು ಪ್ರೇಕ್ಷಣೀಯ ಸ್ಥಳ.

ದಾವಣಗೆರೆ ಮಧ್ಯಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ದೊಡ್ಡ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಇರುವುದಾದರೂ ಇಲ್ಲಿನ ರಸ್ತೆಗಳ ಸ್ಥಿತಿ ಕರ್ನಾಟಕದ ಬೇರೆ ನಗರಗಳಂತೆ ಹದಗೆಟ್ಟಿದೆ. ದಾವಣಗೆರೆ ಬೆಂಗಳೂರು - ಹುಬ್ಬಳಿ ನಡುವಿನ ಪ್ರಮುಖ ರೈಲು ನಿಲ್ದಾಣಗಳಲ್ಲೊಂದಾಗಿದೆ. ಇಲ್ಲಿನ ಜನರ ಮಾತು ಸ್ವಲ್ಪ ಒರಟಾದರೂ ಬಹಳ ಹೃದಯವಂತರೂ, ಸೌಜನ್ಯಶೀಲರೂ ಆಗಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ತಿನ್ನಲು ಖಾರಾ ಮಂಡಕ್ಕಿ, ಜೊತೆಗೆ ಚಹಾ ಅಥವಾ ಕಾಫ಼ಿ ನೀಡಿ ಉಪಚರಿಸುವುದು ಇಲ್ಲಿನ ಸಂಪ್ರದಾಯ.

ದಾವಣಗೆರೆಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ಹೇಳಲು ಕಾರಣ, ಇಲ್ಲಿನ ಯು.ಬಿ.ಡಿ.ಟಿ ಕಾಲೇಜಿನಲ್ಲೇ ನನ್ನ ಇಂಜಿನಿಯರಿಂಗ್ ವ್ಯಾಸಂಗ ನಡೆದಿದ್ದು. ದಾವಣಗೆರೆಯಲ್ಲಿ ಕೆಲವು ವರುಷ ಇದ್ದು ಜೀವನದ ಮಹತ್ವದ ಶಿಕ್ಷಣ ಪಡೆದು, ಇಲ್ಲಿನ ಬ್ರಹ್ಮಚೈತನ್ಯ ವಿದ್ಯಾರ್ಥಿನಿಲಯದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಗೆಳೆಯರೊಂದಿಗಿನ ಒಡನಾಟದ ಅನುಭವ ಹೊಂದಿ, ಇಲ್ಲಿನ ವಿಶಿಷ್ಟ ಬೆಣ್ಣೆದೋಸೆ, ಮಸಾಲೆ ಮಂಡಕ್ಕಿ ಚಪ್ಪರಿಸಿದ ನನಗೆ ದಾವಣೆಗೆರೆಯೊಂದಿಗಿನ ನಂಟು ಒಂದು ಸವಿನೆನಪಾಗಿ ಇದೆ. ಜೊತೆಗೆ
ದಾವಣಗೆರೆಯಲ್ಲಿ ರೇಡಿಯೋದಲ್ಲಿ ತಪ್ಪದೇ ಕೇಳುತ್ತಿದ್ದ ಆಕಾಶವಾಣಿ ಭದ್ರಾವತಿಯಿಂದ ಪ್ರತಿ ಭಾನುವಾರ ರಾತ್ರಿ ಪ್ರಸಾರವಾಗುತ್ತಿದ್ದ ಹಳೆಯ ಕನ್ನಡ ಚಿತ್ರಗೀತೆಗಳ ಸವಿನೆನಪು ಕಾರ್ಯಕ್ರಮದ ಮಧುರ ಗೀತೆಗೆಗಳು ಮನಸ್ಸಿನ್ನಲ್ಲಿ ಇನ್ನೂ ಗುಂಯ್‌ಗುಡುತ್ತಿವೆ.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು