ಕನ್ನಡಿಗರ ಹೃದಯದಲ್ಲಿ, ಅವರ ಅಭಿಮಾನದಲ್ಲಿ ಡಾ||ರಾಜ್ ಜೀವಂತವಾಗಿದ್ದಾರೆ

೨೦೦೬ ಏಪ್ರಿಲ್ ೨೪ರಂದು ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಮಂಥನಕ್ಕಾಗಿ ಅವರ ಬಗ್ಗೆ ಬರೆಯಬೇಕೆಂದು ಮನದಲ್ಲೇ ಯೋಚಿಸಿದ್ದೆ. ಈ ನಿಟ್ಟಿನಲ್ಲಿ ಇನ್ನೇನು ಬರವಣಿಗೆ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಕನ್ನಡಿಗರೆಲ್ಲರ ಅಭಿಮಾನದ ಅಣ್ಣ ಡಾ||ರಾಜ್ ವಿಧಿವಶರಾದರೆಂಬ ಸುದ್ಧಿ ಕಚೇರಿಯಲ್ಲಿದ್ದಾಗ ಸಿಡಿಲಿನಂತೆ ಬಂದೆರಗಿತು. ಕಚೇರಿಯಲ್ಲಿ ಒಂದು ಕ್ಷಣವೂ ಕುಳಿತುಕೊಳ್ಳಲಾಗಲಿಲ್ಲ. ಚಡಪಡಿಸುತ್ತ ಎದ್ದು ಅಣ್ಣಾವ್ರ ಮನೆ ಕಡೆ ಹೊರಟೇ ಬಿಟ್ಟೆ. ಅಣ್ಣಾವ್ರ ಮನೆಯ ಬಳಿ ಆಗಲೇ ಜನಸಾಗರ ಎಲ್ಲ ದಿಕ್ಕುಗಳಿಂದಲೂ ಹರಿದು ಬರತೊಡಗಿತ್ತು. ಆಗತಾನೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಡಾ||ರಾಜ್‌ರ ಪಾರ್ಥೀವ ಶರೀರ ಮನೆಗೆ ತಲುಪಿತ್ತು. ಅಭಿಮಾನಿ ದೇವರುಗಳು ಅಣ್ಣಾವರ ಮನೆಯ ಕಾಂಪೌಂಡ ಮೇಲೆ, ಮಹಡಿ ಮೇಲೆ ಜಮಾಯಿಸಿ ಬಿಟ್ಟಿದ್ದರು. ಒಳಗೆ ಹೋಗಲಾಗಲಿಲ್ಲ. ಸಂಜೆ ಅರಮನೆ ಮೈದಾನದಲ್ಲಿ ರಾಜಣ್ಣನವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡುತ್ತಾರೆಂದು ತಿಳಿದು ವಾಪಸ್ ಮನೆಗೆ ಹೊರಟೆ.

ಕಾರಿನಲ್ಲಿ ಎಫ಼್.ಎಂ. ರೈನ್‌ಬೋದಲ್ಲಿ ಅಣ್ಣಾವ್ರು ಹಾಡಿದ್ದ ಭಕ್ತಿಗೀತೆಗಳನ್ನು ಕೇಳುತ್ತ ಮನೆಕಡೆ ಹೊರಟ ನನಗೆ ಅಷ್ಟು ಹೊತ್ತು ಹೃದಯದಲ್ಲಿ ಮಡುಗಟ್ಟಿದ್ದ ದು:ಖ ಕಟ್ಟೆಯೊಡೆದು ಕಣ್ಣೀರಾಗಿ ಹರಿದೇಬಿಟ್ಟಿತು. ಅಣ್ಣಾವ್ರ ಆ ಅಮೋಘ ದ್ವನಿಯನ್ನು ಕೇಳಿ ತಡೆದುಕೊಳ್ಳಲಾಗದೆ ತೃಪ್ತಿಯಾಗುವಷ್ಟು ಅತ್ತುಬಿಟ್ಟೆ.
ನನ್ನ ಜೀವನದಲ್ಲಿ ಯಾರಾದರೂ ಸತ್ತಾಗ ಅತ್ತಿದ್ದು ಎರಡೇ ಬಾರಿ, ಎಂಟು ವರ್ಷದ ಹಿಂದೆ ನನ್ನ ತಂದೆಯವರು ವಿಧಿವಶರಾದಾಗ ಮತ್ತು ಈಗ ನಮ್ಮೆಲ್ಲರ ಅಭಿಮಾನದ ಅಣ್ಣ ಡಾ||ರಾಜ್ ಅವರು ಅಗಲಿದಾಗ.

ಸಂಜೆ ಡಾ||ರಾಜ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿರುವ ಸುದ್ಧಿ ದೂರದರ್ಶನದಲ್ಲಿ ತಿಳಿಯಿತು. ಆದರೆ ಅಣ್ಣಾವ್ರ ದರ್ಶನಕ್ಕೆ ನೂಕುನುಗ್ಗಲು, ಪೋಲಿಸರ ಲಾಠಿಪ್ರಹಾರ ನಡೆಯುತ್ತಿರುವ ಸುದ್ಧಿ ಟಿ.ವಿಯಲ್ಲಿ ನೋಡಿ ಹೇಗಪ್ಪ ಹೋಗೋದು ಅನ್ನೋ ಚಿಂತೆ ಶುರುವಾಯಿತು. ಮನೆಯಲ್ಲಿ ಆ ಗಲಾಟೆಯಲ್ಲಿ ಹೋಗುವುದು ಬೇಡವೆಂಬ ಒತ್ತಾಯ. ಆದರೆ ಅಣ್ಣಾವ್ರ ಅಂತಿಮ ದರ್ಶನವನ್ನು ಹೇಗಾದರೂ ಮಾಡಲೇ ಬೇಕೆಂಬ ಚಡಪಡಿಕೆ ಕಡಿಮೆಯಾಗಲಿಲ್ಲ. ಸರಿ ಏನಾದರಾಗಲಿ ಎಂದು ಕೊಂಡು ರಾತ್ರಿ ಹತ್ತುವರೆ ಘಂಟೆಗೆ ನನ್ನ ಸ್ನೇಹಿತ ಭರತ್‌ನೊಂದಿಗೆ ರಾಜ್ ಅವರ ಪಾರ್ಥೀವ ಶರೀರವಿಟ್ಟಿದ್ದ ಕಂಠೀರವ ಕ್ರೀಡಾಂಗಣದ ಕಡೆ ಹೊರಟೇಬಿಟ್ಟೆ. ದಾರಿಯಲ್ಲಿ ಎಲ್ಲಿನೋಡಿದರೂ ಗಾಜಿನಚೂರುಗಳು, ಕಂಠೀರವ ಕ್ರೀಡಾಂಗಣದ ಬಳಿ ಏಳೆಂಟು ಬಸ್ಸುಗಳು ಅಭಿಮಾನಿಗಳ ಕಲ್ಲೇಟಿನಿಂದ ಜಖಂಗೊಂಡು ನಿಂತಿದ್ದವು. ಒಂದು ಬಸ್ಸು ಇನ್ನೂ ಹೊತ್ತಿ‌ಉರಿಯುತ್ತಿತ್ತು. ಆದರೂ ದೈರ್ಯಮಾಡಿ ಕಂಠೀರವ ಕ್ರೀಡಾಂಗಣದೊಳಗೆ ಅಭಿಮಾನಿಗಳ ನೂಕುನುಗ್ಗಲಿನಲ್ಲೇ ತೂರಿಕೊಂಡು ಅಣ್ಣಾವ್ರ ಅಂತಿಮ ದರ್ಶನ ಪಡೆದಾಗ ಮನದುಂಬಿಬಂದಿತ್ತು. ಅಲ್ಲಿ ಅಣ್ಣಾವ್ರು ಪ್ರಶಾಂತವಾದ ಮುಖಭಾವದೊಂದಿಗೆ ಚಿರನಿದ್ರೆ ಮಾಡುತ್ತಿದ್ದರು. ನನ್ನ ಮೆಚ್ಚಿನ ಅಣ್ಣ, ನನ್ನಲ್ಲಿ ಕನ್ನಡ ಅಭಿಮಾನ ಮೂಡಿಸಿದ ಅಣ್ಣನಿಗೆ ಅಂತಿಮ ಗೌರವ ಸಲ್ಲಿಸಿದ್ದೇನೆಂಬ ತೃಪ್ತಿಯೊಂದಿಗೆ ಮನೆಗೆ ಮರಳಿದೆ.

ಡಾ||ರಾಜ್ ದೈಹಿಕವಾಗಿ ಈಗ ನಮ್ಮೊಡನಿಲ್ಲ. ಆದರೆ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ, ಕೋಟ್ಯಾಂತರ ಕನ್ನಡಿಗರ ಅಭಿಮಾನದಲ್ಲಿ ಇನ್ನೂ ಜೀವಂತವಾಗಿದ್ದಾರೆ! ಅಣ್ಣಾವ್ರ ಬಗ್ಗೆ ಏನು ಬರೆಯಬೇಕು ಎಂದು ಗೊತ್ತಾಗುತಿಲ್ಲ. ಅವರ ಬಗ್ಗೆ ಈಗಾಗಲೆ ಎಲ್ಲಾ ಪತ್ರಿಕೆಗಳಲ್ಲಿ ಎಷ್ಟೊಂದು ಬರೆದಿದ್ದಾರೆ. ಅವರ ಬಗ್ಗೆ ಎಷ್ಟು ಬರೆದರೂ ಸಾಕಾಗೊಲ್ಲ. ಆದರೂ ಈ ಸಂದರ್ಭದಲ್ಲಿ ಅವರಿಗಾಗಿ ನುಡಿನಮನ ಸಲ್ಲಿಸಲು ಮನಸ್ಸು ಹಾತೊರೆಯುತ್ತಿದೆ.

ಬಾಲ್ಯದಲ್ಲಿ ನಾನು ಮಲ್ಲೇಶ್ವರದ ಗೀತಾಂಜಲಿ, ಸಂಪಿಗೆ ಹಾಗೂ ಜಯನಗರದ ಸ್ವಾಗತ್, ಪುಟ್ಟಣ್ಣ, ನಂದಾ ಚಿತ್ರಮಂದಿರಗಳಲ್ಲಿ ಅಣ್ಣಾವ್ರ ಚಿತ್ರಗಳನ್ನೂ ನೋಡಿ ಬೆಳೆದವನು. ಶಾಲೆಗೆ ರಜೆಬಂದಾಗ ಮಲ್ಲೇಶ್ವರದಲ್ಲಿದ್ದ ಅಜ್ಜಿಯ ಮನೆಯಲ್ಲೇ ಒಂದು ತಿಂಗಳು ಠಿಕಾಣಿ. ಆಗ ಅಲ್ಲಿನ ಗೀತಾಂಜಲಿ ಹಾಗೂ ಸಂಪಿಗೆ ಚಿತ್ರಮಂದಿರಗಳಲ್ಲಿ ಡಾ||ರಾಜ್ ಅವರ ಚಿತ್ರಗಳನ್ನು ಮನೆಮಂದಿಯೆಲ್ಲಾ ತಪ್ಪದೇ ನೋಡುತ್ತಿದ್ದೆವು. ಆಗ ಮನೆಯಲ್ಲಿ ಟಿ.ವಿ. ಇರಲಿಲ್ಲ. ಥಿಯೇಟರ್‌ನಲ್ಲಿ ಸಿನಿಮಾನೋಡುವುದೇ ನಮಗೆಲ್ಲ ಒಂದು ಮನರಂಜನೆ. ಅದರಲ್ಲೂ ಇನ್ನೂ ನನಗೆ ಮನದಲ್ಲಿ ಹಚ್ಚಹಸಿರಾಗಿರುವುದು ಅಣ್ಣಾವ್ರು ನಟಿಸಿದ್ದ ಮಯೂರ ಚಿತ್ರವನ್ನು ಗೀತಾಂಜಲಿ ಚಿತ್ರಮಂದಿರದಲ್ಲಿ ನೋಡಿದ ನೆನೆಪು. “ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲಾ ಹಾಯಾಗಿ...” ಹಾಡನ್ನು ಅಣ್ಣಾವ್ರು ಮಯೂರನಾಗಿ ಕತ್ತಿಹಿಡಿದು ಕೊಂಡು ಠೀವಿಯಿಂದ ಹಾಡುತ್ತಿರುವ ದೃಶ್ಯ ಇನ್ನೂ ರೋಮಾಂಚನಗೊಳಿಸುತ್ತದೆ. ಇದರ ಜೊತೆಗೆ ಅಂದಿನ ಸೂಪರ್‌ಹಿಟ್ಟ್ ಚಿತ್ರಗಳಾದ ಶಂಕರ್-ಗುರು, ನಾ ನಿನ್ನ ಮರೆಯಲಾರೆ, ಹುಲಿಯ ಹಾಲಿನ ಮೇವು ನೋಡುತ್ತಾ ಬಾಲ್ಯದಲ್ಲೇ ಅಣ್ಣಾವ್ರ ಅಭಿಮಾನಿಯಾಗಿ ಬೆಳೆದೆ. ನಿಜ ಹೇಳಬೇಕೆಂದರೆ ಆಗಿನ್ನೂ ಕನ್ನಡ ಅಭಿಮಾನವೆಂದರೇನೆಂದು ತಿಳಿದಿರಲಿಲ್ಲ. ಕನ್ನಡ ಸಾಹಿತ್ಯವನ್ನು ಓದುವ ಬುದ್ಧಿ ಇನ್ನೂ ಬೆಳೆದಿರಲಿಲ್ಲ. ಆದರೆ ಹೀಗೆ ಅಣ್ಣಾವ್ರ ಚಿತ್ರವನ್ನು ನೋಡುತ್ತಾ ಬೆಳೆದಂತೆಲ್ಲಾ, ಅವರ ಕನ್ನಡ ಅಭಿಮಾನದ ಹಾಡುಗಳನ್ನು ಕೇಳಿದಂತೆಲ್ಲಾ ಕನ್ನಡದ ಅಭಿಮಾನ ಹೃದಯದಲ್ಲಿ ಮೂಡತೊಡಗಿತ್ತು! ಅಚಲವಾಗಿ ನೆಲೆಯೂರತೊಡಗಿತ್ತು!

ಡಾ|| ರಾಜ್ ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟರೆ ಕನ್ನಡಿಗರಿಗೆ ಏನು ಕೊಟ್ಟಿದ್ದಾರೆ ಎಂದು ಕೆಲವರು ಕೇಳುತ್ತಾರೆ. ಅವರಿಗೆಲ್ಲಾ ನಾನು ಹೇಳೋದು ಒಂದೇ. ಡಾ||ರಾಜ್ ಅವರು ತಮ್ಮ ಅದ್ಭುತವಾದ ನಟನೆಯಿಂದ, ಕನ್ನಡ ಅಭಿಮಾನ ತುಂಬಿದ ಗೀತೆಗಳನ್ನು ಅಭಿಮಾನದಿಂದ ಹಾಡುವ ಮೂಲಕ, ನನ್ನಂತೆ ಲಕ್ಷಾಂತರ ಕನ್ನಡಿಗರ ಮನದಲ್ಲಿ ಕನ್ನಡ ಅಭಿಮಾನದ ಬೀಜವನ್ನು ಬಿತ್ತಿದ್ದಾರೆ. ಇದೇ ಅವರ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯದ ಗಂಧವೂ ಇಲ್ಲದ ಕೋಟ್ಯಾಂತರ ಕನ್ನಡಿಗರಲ್ಲಿ ತಮ್ಮ ನಟನೆ ಹಾಗೂ ಗೀತಗಾಯನದಿಂದ ಕನ್ನಡ ಪ್ರೇಮವನ್ನು ತುಂಬಿರುವ ಡಾ||ರಾಜ್‌ರವರ ಕನ್ನಡದ ಕೊಡುಗೆ ಅನನ್ಯ.
ಡಾ||ರಾಜ್ ಒಬ್ಬ ವ್ಯಕ್ತಿಯಾಗಿರಲಿಲ್ಲ ಕನ್ನಡಿಗರ ಮನದಲ್ಲಿ ದೊಡ್ಡ ಶಕ್ತಿಯಾಗಿದ್ದರು, ಮುಂದೆಯೂ ಆಗಿರುತ್ತಾರೆ.

ಇನ್ನು ರಾಜ್‌ರ ನಟನೆಯ ಬಗ್ಗೆ ಹೇಳಬೇಕೆಂದರೆ ಅವರು ಎಂತಹ ಪಾತ್ರದಲ್ಲೂ ಸರಾಗವಾಗಿ, ಪರಕಾಯ ಪ್ರವೇಶ ಮಾಡಿದಂತೆ ಸಹಜವಾಗಿ ನಟಿಸುತ್ತಿದ್ದರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಅದ್ಭುತವಾಗಿ ನಟಿಸಿದ್ದಾರೆ. ರಾಜ್ ಅವರ ನಟನೆಯ ಭಕ್ತಕುಂಬಾರ ಚಿತ್ರದಲ್ಲಿನ ಭಕ್ತ ಗೋರ ಪಾತ್ರ, ಬಬ್ರುವಾಹನದ ಅರ್ಜುನ-ಬಬ್ರುವಾಹನರ ಪಾತ್ರಗಳು, ಕವಿರತ್ನ ಕಾಳಿದಾಸ ಚಿತ್ರದ ಕಾಳಿದಾಸನ ಪಾತ್ರ ಮತ್ತು ಹಾಲುಜೇನು ಚಿತ್ರದ ಪಾತ್ರ ನನಗೆ ಅತ್ಯಂತ ಮೆಚ್ಚುಗೆಯಾದವುಗಳಾಗಿವೆ. ಭಕ್ತ ಕುಂಬಾರದಲ್ಲಿ ಭಕ್ತ ಗೊರನಾಗಿ ಅವರ ಅಭಿನಯ ಭಕ್ತಿಯ ಶಿಖರವನ್ನು ಮುಟ್ಟಿತ್ತು. ಬಬ್ರುವಾಹನ ಚಿತ್ರದಲ್ಲಿ ಅರ್ಜುನ-ಬಬ್ರುವಾಹನರಾಗಿ ದ್ವಿಪಾತ್ರದಲ್ಲಿ ನಟಿಸಿದ ರಾಜ್ ಅವರು ತಂದೆಯಾಗಿ ಮತ್ತು ಮಗನಾಗಿ ದ್ವನಿಯಲ್ಲಿ ವಿಭಿನ್ನ ಏರಿಳಿತಗಳನ್ನು, ಭಾವಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಪ್ರಾರಂಭದಲ್ಲಿ ಕುರುಬನಾಗಿ ಹಾಸ್ಯಸನ್ನಿವೇಶಗಳಲ್ಲಿ ಮತ್ತು ನಂತರ ಕಾಳಿಕಾದೇವಿಯ ಅನುಗ್ರಹದಿಂದ ವಿದ್ವಾಂಸನಾಗಿ, ಕಾಳಿದಾಸನಾಗಿ ವಿದ್ವತ್‌ಪೂರ್ಣವಾಗಿ ನಟಿಸಿದ್ದಾರೆ. ಹಾಲುಜೇನು ಚಿತ್ರದಲ್ಲಿ ತನ್ನ ಪ್ರೀತಿಯ ಮಡದಿ ಕ್ಯಾನ್ಸರ್‌ನಿಂದಾಗಿ ಹೆಚ್ಚುದಿನ ಬದುಕುವುದಿಲ್ಲ ಎಂದು ತಿಳಿದು, ಹೆಂಡತಿಗೆ ಪ್ರೀತಿಯನ್ನು ಧಾರೆಯೆರುವ ಪತಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಡಾ||ರಾಜ್ ಏನಾದರೂ ಪಾಶ್ಚಾತ್ಯ ದೇಶದಲ್ಲಿ ಹುಟ್ಟಿ ಹಾಲಿವುಡ್ ನಟನಾಗಿದ್ದಿದ್ದರೆ ಅವರಿಗೆ ಖಂಡಿತವಾಗಿಯೂ ಆಸ್ಕರ್ ಪ್ರಶಸ್ತಿ ಸಿಕ್ಕುತ್ತಿತು! ಒಂದು ಬಾರಿಯಲ್ಲ ಹಲವಾರು ಬಾರಿ! ಇದು ಉತ್ಪ್ರೇಕ್ಷೆಯ ಮಾತಲ್ಲ.

ಡಾ||ರಾಜ್ ಅವರು ನಟನೆಯ ಜೊತೆಗೆ ಗಾಯಕರಾಗಿ ಕೂಡ ಭಾರತ ಚಿತ್ರರಂಗದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಅವರ ಕಂಚಿನ ಕಂಠದ ಸಂಭಾಷಣೆ ಹಾಗೂ ಅವರ ಮಧುರ ಗಾಯನ ಇಂದಿಗೂ ರೋಮಾಂಚನ ಉಂಟುಮಾಡುತ್ತದೆ. ಡಾ||ರಾಜ್ ಹಾಡಿದ “ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ...” ಮತ್ತು “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ” ಗೀತೆಗಳು ಕನ್ನಡಿಗರಲ್ಲಿ ಇಂದಿಗೂ ಕನ್ನಡ ಅಭಿಮಾನವನ್ನು ಬಡಿದೆಬ್ಬಿಸುತ್ತದೆ. “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ” ಗೀತೆಯ ಸಾಹಿತ್ಯವನ್ನು ಡಾ||ರಾಜ್ ಅವರ ವ್ಯಕ್ತಿತ್ವವನ್ನು ನೋಡಿಯೇ ಬರೆಯಲು ಪ್ರೇರಣೆಯಾಯಿತು ಎಂದು ಈ ಗೀತೆಯನ್ನು ಬರೆದಿರುವ ಪ್ರತಿಭಾವಂತ ಚಿತ್ರಸಾಹಿತಿ ಹಂಸಲೇಖ ಅವರೇ ಹೇಳಿದ್ದಾರೆ.

ಚಿತ್ರಗೀತೆಗಳಲ್ಲದೆ ಡಾ||ರಾಜ್ ಅವರು ಹಾಡಿರುವ ಭಕ್ತಿಗೀತೆಗಳೂ, ಭಾವಗೀತೆಗಳೂ ಅಷ್ಟೇ ಜನಪ್ರಿಯವಾಗಿವೆ. ಮಂತ್ರಾಲಯದ ಗುರುರಾಯರ ಹಾಗೂ ತಮ್ಮ ಕುಲದೈವ ಆಂಜನೇಯ ಸ್ವಾಮಿಯ ಮೇಲೇ ಹಾಡಿರುವ ಭಕ್ತಿಗೀತೆಗಳು ಬಹಳ ಜನಪ್ರಿಯ. ಇನ್ನು ಭಾವಗೀತೆಗಳಲ್ಲಿ ಸಿ.ಅಶ್ವಥ್ ಅವರು ಸಂಗೀತ ಸಂಯೋಜಿಸಿದ “ಕನ್ನಡವೇ ಸತ್ಯ” ದ್ವನಿಸುರುಳಿ, ಡಾ||ರಾಜ್ ಹಾಡಿರುವ ಭಾವಗೀತೆಗಳಲ್ಲಿ ಅತ್ಯಂತ ಸೊಗಸಾಗಿದೆ. ಇದರಲ್ಲಿ ಅವರು ಹಾಡಿರುವ ಕುವೆಂಪು ಅವರ “ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು”, ಗೋಪಾಲ್‌ಕೃಷ್ಣ ಅಡಿಗರ “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ...” ಹಾಗೂ ಸಿದ್ಧಯ ಪುರಾಣಿಕರ “ಹೊತ್ತಿತೋ ಹೊತ್ತಿತು ಕನ್ನಡದ ದೀಪ” ಗೀತೆಗಳು ಅತ್ಯಂತ ರೋಮಾಂಚನ ಮೂಡಿಸುತ್ತದೆ.

ಹೀಗೆ ಡಾ||ರಾಜ್ ತಮ್ಮ ನಟನಾ ಕೌಶಲ್ಯದಿಂದ, ಸುಮಧುರ ಗಾಯನದಿಂದ, ಹಾಗೂ ಸರಳ-ಸಜ್ಜನಿಕೆಯ ವ್ಯಕ್ತಿತ್ವದಿಂದ ಕನ್ನಡಿಗರ ಮನದಲ್ಲಿ ಅಭಿಮಾನದ ವ್ಯಕ್ತಿಯಾಗಿ, ಶಕ್ತಿಯಾಗಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಅವರ ಅಂತಿಮ ಯಾತ್ರೆಯಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳೇ ಇದಕ್ಕೆ ಸಾಕ್ಷಿ. ಇಂತಹ ಅಭಿಮಾನದ ವ್ಯಕ್ತಿ ಕನ್ನಡಕ್ಕೆ ಡಾ||ರಾಜ್ ಒಬ್ಬರೇ ಎಂದರೆ ಅತಿಶಯೋಕ್ತಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಹೇಗೋ ಹಾಗೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಡಾ||ರಾಜ್ ಕನ್ನಡಿಗರ ಮನದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದ್ದಿದ್ದಾರೆ.

ಡಾ||ರಾಜ್ ದೈಹಿಕವಾಗಿ ಇಂದು ನಮ್ಮೊಡನಿಲ್ಲದಿದ್ದರೂ, ಕನ್ನಡ ಅಭಿಮಾನದ ಜ್ಯೋತಿಯಾಗಿ ಅವರು ಕನ್ನಡಿಗರ ಹೃದಯದಲ್ಲಿ ಬೆಳಗುತ್ತಿದ್ದಾರೆ. ಅವರು ಕನ್ನಡಿಗರಲ್ಲಿ ಹಚ್ಚಿದ ಕನ್ನಡ ಅಭಿಮಾನದ ಜ್ಯೋತಿಯನ್ನು ಆರಿಸದೆ ಅದನ್ನು ಇನ್ನೂ ಪ್ರಖರವಾಗಿ ಬೆಳಗಿಸಿ “ಕನ್ನಡ, ಕನ್ನಡಿಗ, ಕರ್ನಾಟಕವನ್ನು” ಉಳಿಸಿ ಬೆಳೆಸ ಬೇಕಾಗಿರುವುದು ಕನ್ನಡಿಗರೆಲ್ಲರ ಕರ್ತವ್ಯವಾಗಿದೆ. ಇದೇ ಡಾ||ರಾಜ್ ಅವರಿಗೆ ನಾವು ನಿಜವಾಗಿ ಸಲ್ಲಿಸಬೇಕಾಗಿರುವ ಶ್ರದ್ಧಾಂಜಲಿ. ಬನ್ನಿ ಅಭಿಮಾನದ ಅಣ್ಣ ಡಾ||ರಾಜ್‌ಗೆ ಶ್ರದ್ಧಾಂಜಲಿ ಅರ್ಪಿಸೋಣ.

Comments

  1. ತುಂಬಾ ಚೆನ್ನಾಗಿ ಬರೆದಿದ್ದೀರ ಸಂಪಿಗೆಯವರೇ!! ನಾವು ಅಂದು ಕಂಠೀರವ ಕ್ರೀಡಾಂಗಣಕ್ಕೆ ಹೋಗಿದ್ದು ಇಂದಿಗೂ ಕೂಡ ಕಣ್ಣಿಗೆ ಕಟ್ಟಿದ ಹಾಗಿದೆ...

    ReplyDelete
  2. ಸಂಪಿಗೆ ಶ್ರೀನಿವಾಸ್ ರವರಿಗೆ ಧನ್ಯವಾದಗಳು. ನಿಮ್ಮ ಬರಹ ಅತ್ಯದ್ಬುತ. ನಮ್ಮ ರಾಜ್ ಬಗ್ಗೆ ಬಹು ಸುಂದರವಾಗಿ ಬರೆದಿದ್ದೀರಿ. ನಾನೂ ರಾಜಣ್ಞ ರಿಂದ ಪ್ರೇರಿತನಾಗಿ ಕನ್ನಡಾಬಿಮಾನಿಯಾದೆ. ನಾನೂ ಚಿಕ್ಕಂದಿನಿಂದ ಅವರ ಚಿತ್ರಗಳನ್ನು ನೊಡಿಕೊಂಡು ಬೆಳೆದವನು ನಿಮ್ಮ ಹಾಗೆ. 🙏

    ReplyDelete

Post a Comment

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು