ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು - ಒಂದು ವಿಶ್ಲೇಷಣೆ

ಕನ್ನಡಿಗರು ಅದರಲ್ಲೂ ಬೆಂಗಳೂರು, ಮೈಸೂರು ಕಡೆಯವರು ಬಲು ಸೋಮಾರಿಗಳು. ಮನೆ ಕಟ್ಟುವ ಕೂಲಿ ಕೆಲಸ, ಕಾರ್ಪೆಂಟರ್, ಪ್ಲಂಬಿಂಗ್, ತರಕಾರಿ ಮಾರುವ ಕೆಲಸ, ಮನೆಗೆಲಸ ಮತ್ತು ನಗರಪಾಲಿಕೆಯ ಪೌರಕಾಮಿಕರ ಕೆಲಸ ಮುಂತಾದ ಯಾವುದೇ ಶ್ರಮದ ಕೆಲಸಗಳಿಗೆ ಅವರು ಮುಂದೆ ಬರುವುದಿಲ್ಲ ಎಂದು ಕನ್ನಡಿಗರೇ ಗೊಣಗುವುದನ್ನು ನಾವು ಬಹಳ ಸಲ ಕೇಳಿದ್ದೇವೆ. ತಮಿಳರು, ತೆಲುಗರು, ಮಲಯಾಳಿಗಳು, ಮತ್ತು ಈಗೀಗ ಉತ್ತರಭಾರತೀಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ಇಂತಹ ಕೆಲಸಗಳಿಗೆ ಕನ್ನಡಿಗರನ್ನು ಹುಡುಕಿದರೂ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಯಾಕೆ ಹೀಗೆ? ನಮ್ಮ ಕನ್ನಡಿಗರು ಈ ಕೆಲಸಗಳಿಗೆ ಒಗ್ಗುವುದಿಲ್ಲವೇ? ನಿಜವಾಗಿಯೂ ಸೋಮಾರಿಗಳೇ? ಇದರ ಬಗ್ಗೆ ನಾನು ಬಹಳಷ್ಟು ವಿಚಾರಮಾಡಿದ್ದೇನೆ. ಬಹಳ ಜನರು ಗಮನಹರಿಸದ ಬಹುಮುಖ್ಯ ಸಂಗತಿ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ಈ ಲೇಖನ ಬರೆಯಲು ಶುರುಮಾಡಿದೆ.






(ಚಿತ್ರ ೧.)























ವಿವಿಧ ರಾಜ್ಯಗಳ ಜನಗಣತಿಯ ಅಂಕಿ‌ಅಂಶಗಳು

ಮೇಲ್ಕಂಡ ಚಿತ್ರ ೧ ರಲ್ಲಿನ ಭಾರತದ ವಿವಿಧ ರಾಜ್ಯಗಳ ನಕ್ಷೆಗಳನ್ನು ಮತ್ತು ಮೇಲಿನ ಜನಗಣತಿಯ ಅಂಕಿ‌ಅಂಶಗಳನ್ನು ಗಮನಿಸಿದರೆ ಕೆಲವು ಸತ್ಯ ಸಂಗತಿಗಳು ನಮಗೆ ಗೋಚರಿಸುತ್ತವೆ. ವಿಸ್ತಾರದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಚಿಕ್ಕದಾಗಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಜನದಟ್ಟನೆ ನಮ್ಮ ರಾಜ್ಯಕ್ಕಿಂತ ಬಹಳ ಹೆಚ್ಚಿದೆ. ಆಂದ್ರಪ್ರದೇಶ, ಮಹಾರಾಷ್ಟ್ರ , ಉತ್ತರಪ್ರದೇಶ ರಾಜ್ಯಗಳಲ್ಲಿನ ಜನಸಂಖ್ಯೆ ನಮ್ಮ ರಾಜ್ಯಕ್ಕಿಂತ ಅತಿ ಹೆಚ್ಚಾಗಿದೆ. ೧೯೯೧ರ ಜನಗಣತಿಯ ಪ್ರಕಾರ ಆಯಾರಾಜ್ಯಗಳಲ್ಲಿ ಅಲ್ಲಿನ ರಾಜ್ಯದ ಅಧಿಕೃತ ಭಾಷೆ ಮಾತನಾಡುವವರ ಸಂಖ್ಯೆ ಶೇಖಡಾ ೭೦ ರಿಂದ ೯೦ರವರೆಗೆ ಇದೆ. ಆದರೆ ನಮ್ಮ
ರಾಜ್ಯದಲ್ಲಿ ಇದು ಶೇಖಡ ೬೬ ಮಾತ್ರ. ಕರ್ನಾಟಕದ ಒಂದು ವಿಶೇಷ ಸನ್ನಿವೇಶವನ್ನು ನಾವಿಲ್ಲಿ ನೆನೆಯಬೇಕು. ಕನ್ನಡಿಗರಷ್ಟೇ ತುಳು, ಕೊಡವ, ಕೊಂಕಣಿ ಭಾಷಿಕರು ಕರ್ನಾಟಕದವರು. ಕನ್ನಡ ಮಾತೃಭಾಷೆಯವರ ಜೊತೆ ತುಳುವರು, ಕೊಡವರು ಮತ್ತು ಕೊಂಕಣಿಗರನ್ನು ಕನ್ನಡಿಗರು ಎಂದು ತಿಳಿದರೂ, ಕನ್ನಡಿಗರ ಒಟ್ಟು ಸಂಖ್ಯೆ ಶೇಖಡ ೭೦ ದಾಟುವುದಿಲ್ಲ ಎನ್ನುವುದನ್ನು ನಾವು ಮರೆಯಬಾರದು.
೧೧೯೧ರಿಂದ - ೨೦೦೧ರ ನಡುವೆ ಕರ್ನಾಟಕದ ಜನಸಂಖ್ಯೆಯಲ್ಲಿನ ವೃದ್ಧಿ ಕೇರಳ, ತಮಿಳುನಾಡು,
ಆಂದ್ರಕ್ಕಿಂತ ಹೆಚ್ಚಿದೆ. ಇದಕ್ಕೆ ಆ ರಾಜ್ಯಗಳ ಜನ ಕರ್ನಾಟಕಕ್ಕೆ ಹೆಚ್ಚಾಗಿ ವಲಸೆ ಬಂದಿರುವುದೇ ಕಾರಣ ಹೊರತು, ಕನ್ನಡಿಗರ ಜನಸಂಖ್ಯೆಯಲ್ಲಿನ ಹೆಚ್ಚಳ ಕಾರಣವಲ್ಲ.

ಅದೆಲ್ಲಾ ಸರಿ ಕನ್ನಡಿಗರ ಸಂಖ್ಯೆಗೂ ಕನ್ನಡದ ಸಮಸ್ಯೆಗಳಿಗೂ ಏನು ಸಂಬಂಧ ಎಂದು ನೀವು ಕೇಳಬಹುದು? ಖಂಡಿತ ಸಂಬಂಧ ಇದೆ. ನಮಗೆಲ್ಲಾ ತಿಳಿದಿರುವಂತೆ, ಕನ್ನಡಿಗರು ವಿಶಾಲ ಮನೋಭಾವದವರು, ಸೌಜನ್ಯಶೀಲರು, ಶಾಂತಿಪ್ರಿಯರು. ಜೊತೆಗೆ ಪರಭಾಷಾ ವ್ಯಾಮೋಹ ಕನ್ನಡಿಗರಲ್ಲಿ ಬೇರೆಯವರಿಗಿಂತ ಹೆಚ್ಚಿದೆ ಎನ್ನುವುದು ಸುಳ್ಳಲ್ಲ. ಪರಭಾಷಿಕರಿಗೆ ಸಹಾಯವಾಗಲೆಂದೋ, ದಾಕ್ಷಿಣ್ಯದಿಂದಲೋ ಅವರೊಂದಿಗೆ ಅವರ ಭಾಷೆಯಲ್ಲೇ ನಿರರ್ಗಳವಾಗಿ ಮಾತನಾಡುವ ಕನ್ನಡಿಗರ ಸ್ವಭಾವ, ಕನ್ನಡ ಭಾಷೆಗೆ ಮುಳುವಾಗಿದೆ.
ಈ ರೀತಿ ಪರಭಾಷಿಕರನ್ನು ಮುಕ್ತಮನಸ್ಸಿನಿಂದ ಸ್ವಾಗತಿಸುವ ಕನ್ನಡಿಗರ ಗುಣವನ್ನು ಪರರಾಜ್ಯದವರು
ಗಮನಿಸಿ ಕನ್ನಡಿಗರ ಮೇಲೇ ಸವಾರಿಮಾಡಲು ಶುರು ಮಾಡಿದರು.

ಕನ್ನಡನಾಡು ಔದ್ಯೋಗಿಕವಾಗಿ ದೇಶದಲ್ಲೇ ಹೆಸರು ಮಾಡಿದೆ. ಪ್ರತಿಷ್ಠಿತ ಸರ್ವಜನಿಕ ಉದ್ದಿಮೆಗಳಾದ ಹೆಚ್.ಎಂ.ಟಿ, ಐ.ಟಿ.ಐ, ಬಿ.ಇ.ಎಲ್, ಹೆಚ್.ಎ.ಎಲ್, ಇಸ್ರೋ, ಬಿ.ಹೆಚ್.ಇ.ಎಲ್, ಬಿ.ಇ.ಎಮ್.ಎಲ್ ಮುಂತಾದವು ಬೆಂಗಳೂರಿನಲ್ಲಿ ಬಹಳ ಹಿಂದೆಯೇ ಸ್ಥಾಪಿಸಲ್ಪಟ್ಟಿವೆ. ಈ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಅರಸಿ ನೆರೆರಾಜ್ಯದವರು ಬಹು ಹಿಂದೆಯೇ ಬೆಂಗಳೂರಿಗೆ ವಲಸೆ ಬಂದು ನೆಲೆಸಿದರು. ಪರರಾಜ್ಯದವರಿಗೆ ಇಲ್ಲಿನ ಹಿತಕರವಾದ ಹವೆ, ಕೈತುಂಬ ಸಂಬಳ ಕೊಡುವ ಉದ್ಯೋಗಾವಕಾಶ, ಕನ್ನಡ ಕಲಿಯದೆ ಬದುಕಬಹುದಾದ ಅನುಕೂಲಕರ ಸನ್ನಿವೇಶ ಎಲ್ಲಾ ಸೇರಿ ಬೆಂಗಳೂರು ವಲಸಿಗರಿಗೆ ಸ್ವರ್ಗವಾಯಿತು. ಇತ್ತೀಚಿಗೆ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದ ನೆರೆರಾಜ್ಯದವರಲ್ಲದೇ ಉತ್ತರ ಭಾರತದಿಂದಲೂ ಇಲ್ಲಿಗೆ ವಲಸೆ ಬರುವವರು ಹೆಚ್ಚಾದರು. ಈ ರೀತಿಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ವ್ಯಾಪಾರ-ವಾಣಿಜ್ಯ ವ್ಯವಹಾರಗಳೂ ಹೆಚ್ಚಾದವು. ಪರರಾಜ್ಯದ
ವ್ಯಾಪಾರಿಗಳ ವಲಸೆಯೂ ಹೆಚ್ಚಾಯಿತು. ಒಂದರ ಮೇಲೊಂದು ಬಹುಮಹಡಿ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಮಳಿಗೆಗಳು ತಲೆ ಎತ್ತಿದವು. ಈ ಕಟ್ಟಡಗಳ ಕೆಲಸಗಳ ಕಾಮಗಾರಿಗಳಿಗೂ ಪರರಾಜ್ಯದವರು ಬಂದರು. ಮೇಲೆ ತಿಳಿಸಿದಂತೆ ನಮ್ಮ ರಾಜ್ಯದಲ್ಲಿನ ಜನದಟ್ಟನೆ ಬಹಳ ಕಡಿಮೆ. ಆದರಿಂದ ಇಲ್ಲಿ ಒಂದು ರೀತಿಯ ನಿರ್ವಾತ ಸೃಷ್ಟಿಯಾಗಿತ್ತು. ಇದಕ್ಕೆ ವಿರುದ್ಧವಾಗಿ ನೆರೆರಾಜ್ಯಗಳಲ್ಲಿನ ಜನಸಂಖ್ಯಾ ದಟ್ಟನೆ, ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳ ಕೊರತೆ, ಬಡತನ ಇತ್ಯಾದಿ ಕಾರಣಗಳಿಂದ, ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ಪರರಾಜ್ಯದವರಿಗೆ ಸೊಂಪಾದ ಮೇವು ಸಿಗುವ ತಾಣವಾಗಿ ಕಂಡು ಬಂದು ಹಸಿದ ಹಸುಗಳ ಹಿಂಡು ಸೊಂಪಾಗಿ ಬೆಳೆದಿರುವ ಹುಲ್ಲಿರುವ ಪ್ರದೇಶಕ್ಕೆ ನುಗ್ಗುವಂತೆ ಬೆಂಗಳೂರಿಗೆ ನುಗ್ಗಿದರು.
ಹೊಟ್ಟೆಪಾಡಿಗಾಗಿ ಪರರಾಜ್ಯದವರು ಕಡಿಮೆ ಕೂಲಿಗೂ, ಸಂಬಳಕ್ಕೂ ಒಪ್ಪಿ ಕನ್ನಡಿಗರ ಕೆಲಸಕ್ಕೆ ಸಂಚಕಾರ ತಂದಿದ್ದಾರೆ. ಬೆಂಗಳೂರಿಗೆ ತಮಿಳರು, ತೆಲುಗರು, ಮಲಯಾಳಿಗ ಜೊತೆ ಈಗ ಬಂಗಾಳಿಗಳೂ, ಉತ್ತರ ಪ್ರದೇಶದವರೂ, ಬಿಹಾರಿಗಳೂ, ಗುಜರಾತ್, ರಾಜಾಸ್ಥಾನದ ಮಾರವಾಡಿಗಳು, ಜೈನರು ನುಗ್ಗುತ್ತಿದ್ದಾರೆ.

ಬೆಂಗಳೂರು ನಗರ ಮತ್ತು ಕೆ.ಜಿ.ಎಫ಼್ ನಲ್ಲಿ ತಮಿಳರ ಸಂಖ್ಯೆ ಹೆಚ್ಚಿದೆ. ಚಿಕ್ಕಮಗಳೂರಿನ ಕಾಫ಼ಿತೋಟಗಳಲ್ಲಿನ ಕೆಲಸವೂ ತಮಿಳರ ಪಾಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ, ತುಮಕೂರಿನ ಗಡಿ ಪ್ರದೇಶಗಳಲ್ಲಿ ತೆಲುಗರ ಪ್ರಾಬಲ್ಯವಿದೆ. ರಾಜ್ಯದ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿನ ತುಂಗಭದ್ರಾ ನೀರಾವರಿ ಪ್ರದೇಶದ ಜಮೀನುಗಳನ್ನು ಆಂದ್ರದಿಂದ ವಲಸೆ ಬಂದ ತೆಲುಗರು ಖರೀದಿಸಿ ಕನ್ನಡಿಗರೇ ಅವರ ಹೊಲದಲ್ಲಿ ಈಗ ಕೂಲಿಗಾಗಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.

ಇನ್ನು ಕೊಡಗಿನ ಕಾಫಿತೋಟಗಳನ್ನು, ಕಿತ್ತಳೆ ತೋಟಗಳನ್ನು ಮಲಯಾಳಿಗಳು ಖರೀದಿಸಿದ್ದಾರೆ. ಕೊಡಗಿನಲ್ಲಿನ ವ್ಯಾಪಾರವೂ ಕೇರಳಿಗರ ಕೈಸೇರಿದೆ. ಅಲ್ಲಿ ಕೊಡವರೇ ಈಗ ಅಲ್ಪಸಂಖ್ಯಾತರಾಗುತ್ತಿದ್ದಾರೆ.

ಬೆಳಗಾವಿಗೆ ಮಹಾರಾಷ್ಟ್ರದಿಂದ ಮರಾಠಿಗರ ವಲಸೆ ಹೆಚ್ಚಾಗಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕು ಪಂಚಾಯಿತಿ, ಬೆಳಗಾವಿ ನಗರಪಾಲಿಕೆ ಮರಾಠಿಗರ ವಶವಾಗಿವೆ. ಬೆಳಗಾವಿ ಮತ್ತು ಖಾನಾಪುರ
ತಾಲ್ಲೂಕಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಇದರಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಅವರ ಕೂಗು ಇನ್ನೂ ಜೋರಾಗಿದೆ.

ಕನ್ನಡಿಗರು ಖಂಡಿತ ಸೋಮಾರಿಗಳಲ್ಲ. ಬೇಡಿಕೆಗೆ ತಕ್ಕಷ್ಟು ಕನ್ನಡ ಕೈಗಳು ಇಲ್ಲ ಅಷ್ಟೆ. ಎಲ್ಲಿ ಹಳ್ಳವಿರುತ್ತೋ ಅಲ್ಲಿಗೆ ನೀರು ಹರಿಯುವುದಲ್ಲವೇ? ಒತ್ತಡ ಕಡಿಮೆಯಿರುವಲ್ಲಿಗೆ ಗಾಳಿ ನುಗ್ಗುತ್ತದೆಯಲ್ಲವೇ? ಹಾಗೆ ಪರಭಾಷಿಕರ ವಲಸೆ ಕರ್ನಾಟಕಕ್ಕೆ ಹೆಚ್ಚಾಗಿದೆ. ಈ ರೀತಿಯ ಪರಭಾಷಿಕರ ವಲಸೆಯಿಂದ ಕರ್ನಾಟಕದಲ್ಲಿ ಕನ್ನಡಿಗರ ಶೇಖಡವಾರು ಸಂಖ್ಯೆ ಮತ್ತಷ್ಟು ಇಳಿಮುಖವಾಗುತ್ತಿದೆ. ಇದರಿಂದ ಕನ್ನಡದ ಸಂಸ್ಕೃತಿಯ ಮೇಲೆ ಹೊಡೆತ ಬಿದ್ದಿದೆ. ಕನ್ನಡಿಗರಿಗೆ ತಮ್ಮ ನಾಡಿನಲ್ಲೇ ಕೆಲಸ ಸಿಗವುದು ದುಸ್ತರವಾಗಿದೆ. ತಮ್ಮ ನಾಡಿನಲ್ಲೇ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕು ಸಾಗಿಸಬೇಕಾಗಿದೆ. ಕನ್ನಡನಾಡಿಗೆ ಪರರಾಜ್ಯದವರ ವಲಸೆ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಈಗಾಗಲೆ ಮಾಹಿತಿ ತಂತ್ರಜ್ಞಾನದವರ ಕಣ್ಣು ಮೈಸೂರು, ಮಂಗಳೂರಿನ ಮೇಲೆ ಬಿದ್ದಿದೆ. ನಾಳೆ ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳು ಬೆಂಗಳೂರಿನ ದಾರಿ ಹಿಡಿಯಬಹುದು. ಆದ್ದರಿಂದ ಕನ್ನಡಿಗರು ಎಚ್ಚರಗೊಳ್ಳಬೇಕಾದ ಕಾಲಬಂದಿದೆ.

ಕರ್ನಾಟಕಕ್ಕೆ ಪರರಾಜ್ಯದವರ ವಲಸೆಯನ್ನು ತಡೆಗಟ್ಟಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗುವಂತೆ ಮಾಡುವಲ್ಲಿ ನಾವು ಪ್ರಯತ್ನಪಡಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಕನ್ನಡಿಗನೂ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕಾಗಿದೆ. ಇದಕ್ಕೆಲ್ಲಾ ಒಂದೇ ದಾರಿ. ಕನ್ನಡದ ದಂಪತಿಗಳು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತು ಕನ್ನಡಿಗರ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಕನ್ನಡಿಗರು ಇದನ್ನು ಲಘುವಾಗಿ ತೆಗೆದು ಕೊಳ್ಳದೆ ವಾಸ್ತವ ಸ್ಥಿತಿಯನ್ನು ಮನಗಾಣುತ್ತಾರೆಂದು ನಂಬಿದ್ದೇನೆ.
ಬರೀ ಕನ್ನಡದ ಮಕ್ಕಳನ್ನು ಹೆತ್ತರಷ್ಟೇ ಸಾಲದು, ಅವರಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನೂ ತಂದೆ-ತಾಯಂದಿರು ಮಾಡಿದರೆ ಮಾತ್ರ ಅವರ ಪ್ರಯತ್ನ ಸಾರ್ಥಕವಾಗುತ್ತದೆ.
ಆಗಮಾತ್ರ ಕನ್ನಡಕ್ಕೆ ನಿಜವಾದ ಬಲ ಬರುತ್ತದೆ. ಏನಂತೀರಿ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು sampiges@hotmail.com ಬರೆದು ತಿಳಿಸಿ.

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ವಿಶ್ಲೇಷಣೆಯಲ್ಲಿ ಮಹಾಭಾರತದ ಕರ್ಣ