ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ವಿಶ್ಲೇಷಣೆಯಲ್ಲಿ ಮಹಾಭಾರತದ ಕರ್ಣ

ಶ್ರೀ ವೇದವ್ಯಾಸರು ರಚಿಸಿದ ಸಂಸ್ಕೃತ ಮಹಾಕಾವ್ಯವಾದ ಮಹಾಭಾರತ ೧ ಲಕ್ಷ ಶ್ಲೋಕಗಳ ಬೃಹತ್ ಕಾವ್ಯ. ಶ್ರೀ ವೇದವ್ಯಾಸರು ಮಹಾಭಾರತದ ಒಂದು ಪ್ರಮುಖ ಪಾತ್ರವೇ ಆಗಿದ್ದರು. ದೃತರಾಷ್ಟ್ರ, ಪಾಂಡು ಮತ್ತು ವಿಧುರರ ಜನನಕ್ಕೆ ಕಾರಣರಾಗಿ ಕುರುವಂಶವನ್ನು ಉದ್ಧರಿಸಿದವರು. ಕೌರವರು ಹಾಗೂ ಪಂಡವರ ನಡುವೆ ನಡೆದ ಕುರುಕ್ಷೇತ್ರ ಮಹಾಯುದ್ಧವನ್ನು ಕಣ್ಣಾರೆ ಕಂಡಿದ್ದವರು. ಇಂತಹ ವೇದವ್ಯಾಸರು ರಚಿಸಿದ ಮಹಾಭಾರತದಲ್ಲಿನ ಸತ್ಯ ಘಟನೆಗಳು, ನಿಜ ಪಾತ್ರಗಳು ಬೇರೇ ಬೇರೇ ಭಾಷೆಗಳಲ್ಲಿ ರಚಿಸಲ್ಪಟ್ಟ ಮಹಾಭಾರತದಲ್ಲಿ ಮೂಲ ಮಹಾಭಾರತಕ್ಕೆ ವಿರುದ್ಧವಾಗಿ ಬಹಳಷ್ಟು ಬದಲಾವಣೆಗಳನ್ನು ಪಡೆದು ಕೊಂಡಿವೆ. ಕನ್ನಡದಲ್ಲಿ ಹೀಗೆ ಮಹಾಭಾರತವನ್ನು ಆಧರಿಸಿ ರಚಿತವಾದ ಕಾವ್ಯಗಳಲ್ಲಿ ‘ಪಂಪ ಭಾರತ’ ಮತ್ತು ‘ಕುಮಾರವ್ಯಾಸ ಭಾರತ’ ಪ್ರಮುಖವಾದವುಗಳು.

ಸಂಸ್ಕೃತ, ಕನ್ನಡ ವಿದ್ವಾಂಸರೂ ಹಾಗೂ ಪ್ರಸಿದ್ಧ ಪ್ರವಚನಕಾರರೂ ಆದ ಪ್ರೊ. ಕೆ.ಎಸ್ ನಾರಾಯಣಾಚಾರ್ಯರು ವಿಶ್ಲೇಷಿಸಿದಂತೆ ವೇದವ್ಯಾಸರ ದೃಷ್ಟಿಯಲ್ಲಿನ ಮಹಾಭಾರತದ ಕರ್ಣನ ಪಾತ್ರವನ್ನು ಈಗ ವಿವೇಚಿಸೋಣ. ನಮಗೆಲ್ಲ ತಿಳಿದಿರುವಂತೆ ನಾವು ಓದಿದ ಪಂಪ ಭಾರತವಿರಲಿ ಅಥವಾ ಕುಮಾರವ್ಯಾಸ ಭಾರತವೇ ಇರಲಿ ಎರಡರಲ್ಲೂ ಕರ್ಣನ ಪಾತ್ರವನ್ನು ಬಹಳ ವೈಭವೀಕರಿಸಿರುವುದನ್ನು ನಾವು ಕಾಣುತ್ತೇವೆ. ಪಂಪ, ಕುಮಾರವ್ಯಾಸರು ಕರ್ಣನನ್ನು ದಾನಶೂರ, ವೀರ ಎಂದು ಹೊಗಳಿದ್ದಾರೆ. ಅವನ ತಾಯಿ ಕುಂತಿ ಮಾಡಿದ ತಪ್ಪಿಗಾಗಿ ಜಿವನ ಪೂರ್ತಿ ಅವನು ಪರಿತಪಿಸುವಂತಾಯಿತು. ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿ ತನ್ನನ್ನು ಉದ್ಧರಿಸಿದ ದುರ್ಯೋಧನನಿಗಾಗಿ ಕೊನೆಯವರೆಗೂ ಅವನ ಪಕ್ಷವನ್ನು ಬಿಡದೆ ಒಳ್ಳೆಯ ಮಿತ್ರನಾಗಿದ್ದ. ಕೊನೆಗೆ ರಣರಂಗದಲ್ಲಿ ಅವನ ರಥದ ಚಕ್ರ ಕೆಸರಿನಲ್ಲಿ ಹೂತು ಕೊಂಡಾಗ ಅಧರ್ಮ ರೀತಿಯಲ್ಲಿ ಕೃಷ್ಣ ಅರ್ಜುನ ಮೂಲಕ ಅವನನ್ನು ಕೊಲ್ಲಿಸಿದ. ಹೀಗೆ ಕರ್ಣ ಮಹಾಭಾರತದ ಒಬ್ಬ ದುರಂತ ನಾಯಕನಾದ ಎಂಬುದು ನಮಗೆಲ್ಲಾ ಚಿಕ್ಕಂದಿನಿಂದ ಹೇಳಿರುವ ಕಥೆಗಳ ಸಾರಾಂಶ.

ಆದರೆ ನಿಜವಾಗಿ ಕರ್ಣ ನಾವಂದುಕೊಂಡಂತೆ ಒಳ್ಳೆಯವನೇ? ನಾರಾಯಣಾಚಾರ್ಯರು ವೇದವ್ಯಾಸರ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ಇದೆಲ್ಲ ಶುದ್ಧ ಸುಳ್ಳು. ನಮ್ಮ ಕವಿಗಳು ಕರ್ಣನ ಪಾತ್ರವನ್ನು ಮೂಲ ಮಹಾಭರತದಲ್ಲಿದ್ದಂತೆ ತೊರಿಸದೆ ಬಹಳ ಉತ್ಪ್ರೇಕ್ಷೆಮಾಡಿದ್ದಾರೆ ಎಂದು ತಮ್ಮ ಮಹಾಭಾರತ ಪಾತ್ರ ಪ್ರಪಂಚ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಮೂಲ ಮಹಾಭಾರತ ಸಂಸ್ಕೃತದಲ್ಲಿರುವುದರಿಂದ ಅದನ್ನು ಸಂಸ್ಕೃತ ಬಲ್ಲವರು ಮಾತ್ರ ಓದಿ ಅರ್ಥಮಾಡಿಕೊಳ್ಳಬಹುದು. ಆದರೆ ಸಂಸ್ಕೃತ ತಿಳಿಯದವರು ಕನ್ನಡದಲ್ಲಿ ರಚಿತವಾದ ಮಹಾಭಾರತವನ್ನು ಓದಿ ಅದರಲ್ಲಿರುವುದೇ ಸರಿಯೆಂದು ತಿಳಿದಿರುತ್ತೇವೆ. ಆದರೆ ನಿಜವಾಗಿ ಮಹಾಭಾರತಕಾಲದಲ್ಲಿ ಏನು ನಡೆಯಿತು ಎಂಬುದನ್ನು ಸರಿಯಾಗಿ ಹೇಳಬಲ್ಲವರು ಅದನ್ನು ಕಣ್ಣಾರೆ ಕಂಡ ವೇದವ್ಯಾಸರಿಗೆ ಮಾತ್ರ ಸಾಧ್ಯ ಎಂಬುದು ನಾರಾಯಣಾಚಾರ್ಯರ ನಿಲುವ.

ಕರ್ಣನ ಜನ್ಮ ವೃತ್ತಾಂತವನ್ನು ತೆಗೆದು ಕೊಳ್ಳೋಣ. ಕುಂತಿ ಇನ್ನೂ ಬುದ್ಧಿ ಬೆಳೆದಿರದ ಬಾಲ್ಯದಲ್ಲಿ, ದೂರ್ವಾಸರು ಕೊಟ್ಟ ಮಂತ್ರವೊಂದನ್ನು ಪರೀಕ್ಷಿಸಲು ಸೂರ್ಯಮಂತ್ರವನ್ನು ಜಪಿಸುತ್ತಾಳೆ. ಆಗ ಸೂರ್ಯದೇವ ಪ್ರತ್ಯಕ್ಷನಾಗುತ್ತಾನೆ. ಇದನ್ನು ನೋಡಿ ಕುಂತಿ ಹೆದರಿ, ಗೊತ್ತಿಲ್ಲದೆ ಮಂತ್ರವನ್ನು ಜಪಿಸಿದೆ, ನಾನಿನ್ನೂ ಕನ್ಯೆ, ನನಗೆ ಈಗಲೇ ಮಗು ಬೇಡ ಎಂದು ಬಿನ್ನವಿಸಿಕೊಳ್ಳುತ್ತಾಳೆ. ಆದರೆ ಸೂರ್ಯ ಭಗವಾನ್ ತಾನು ಬಂದಮೇಲೆ ಹಾಗೇ ಹಿಂದುರುಗಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಅವಳಿಗೆ ಬಲವಂತವಾಗಿ ಪುತ್ರನನ್ನು ಕರುಣಿಸುತ್ತಾನೆ. ಇನ್ನು ಕನ್ಯೆಯಾಗಿದ್ದ ಕುಂತಿ ಮದುವೆಗೆ ಮುಂಚೆಯೇ ಮಗುವಿನ ತಾಯಿ ಆದಳೆಂಬ ಲೋಕಾಪವಾದಕ್ಕೆ ಹೆದರಿ ಮಗುವನ್ನು ಅತಿರಥನೆಂಬ ಸೂತನೊಬ್ಬನಿಗೆ ಗುಟ್ಟಾಗಿ ಸಾಕಲು ಒಪ್ಪಿಸಿ ಮಗುವನ್ನು ಸುರಕ್ಷಿತವಾಗಿ ಗಂಗೆಯಲ್ಲಿ ತೇಲಿಬಿಟ್ಟು ಅತಿರಥನ ಬಳಿಗೆ ಕಳುಹಿಸುತ್ತಾಳೆ. ಎಲ್ಲರೂ ತಿಳಿದುಕೊಂಡಂತೆ ಕುಂತಿಯು ಕಠಿಣ ಹೃದಯದಿಂದ ಮಗು ಸಾಯಲಿ ಎಂದು ಗಂಗೆಯಲ್ಲಿ ಬಿಡುವುದಿಲ್ಲ.

ಅತಿರಥನಲ್ಲಿ ಬೆಳೆದ ಕರ್ಣ ಮುಂದೆ ತನ್ನ ದೇಹದಲ್ಲಿ ಹರಿಯುತ್ತಿದ್ದ ಕ್ಷತ್ರಿಯ ರಕ್ತದ ಸ್ವಭಾವಕ್ಕೆ ಅನುಗುಣವಾಗಿ ದನುರ್ವಿಧ್ಯೆಯನ್ನು ಕಲಿಯಬೇಕೆಂದು ದ್ರೋಣನ ಬಳಿಗೆ ಹೋಗುತ್ತಾನೆ. ಆದರೆ ಕ್ಷತ್ರಿಯರಿಗೆ ಮಾತ್ರ ತಾನು ಶಸ್ತ್ರಾಸ್ತ್ರಗಳನ್ನು ಕಲಿಸುವುದಾಗಿ ಹೇಳಿ ಕರ್ಣನಿಗೆ ದನುರ್ವಿಧ್ಯೆ ಹೇಳಿಕೊಡುಲು ಸಾಧ್ಯವಿಲ್ಲ ಎನ್ನುತ್ತಾನೆ. ಆದರೆ ಕರ್ಣನಿಗೆ ಹೇಗಾದರೂ ಮಾಡಿ ದನುರ್ವಿದ್ಯೆ ಕಲಿಯಲೇ ಬೇಕೆಂಬ ಆಸೆ. ಆಗ ಸಕಲ ಶಸ್ತ್ರಾಸ್ತ್ರಗಳನ್ನು ತಿಳಿದುಕೊಂಡಿರುವ ಕ್ಷತ್ರಿಯ ವಿರೋಧಿಯಾಗಿದ್ದ ಪರಶುರಾಮರಲ್ಲಿಗೆ ಹೋಗಿ ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಅವರಿಂದ ಸಕಲ ಶಸ್ತ್ರಾಸ್ತ್ರಗಳನ್ನು ಕಲಿತು ಕೊಳ್ಳುತ್ತಾನೆ. ಆದರೆ ಅವನು ಬ್ರಾಹ್ಮಣನಲ್ಲವೆಂದು ಪರಶುರಾಮರಿಗೆ ತಿಳಿದು ಆಪತ್ಕಾಲದಲ್ಲಿ ಕರ್ಣನಿಗೆ ಪ್ರಮುಖ ಅಸ್ತ್ರಗಳ ಮಂತ್ರಗಳು ಮರೆತುಹೋಗುವಂತೆ ಶಾಪನೀಡುತ್ತಾರೆ. ಹೀಗೆ ಶಾಪಗ್ರಸ್ತನಾದ ಕರ್ಣನು ಹಸ್ತಿನಾಪುರಕ್ಕೆ ಹಿಂದುರುಗಿ ದುರ್ಯೋದನನ ಸ್ನೇಹವನ್ನು ಸಂಪಾದಿಸುತ್ತಾನೆ. ಅರ್ಜುನನಂತೆ ಬಾಣಪ್ರಯೋಗದಲ್ಲಿ ವೀರನಾದ ಕರ್ಣನು ತನ್ನ ಕಡೆಯಿರಲಿ ಎಂದು ಅವನಿಗೆ ಅಂಗರಾಜ್ಯಾಭಿಷೇಕ ಮಾಡಿಸುತ್ತಾನೆ ಹೊರತು ನಿಜವಾದ ಸ್ನೇಹದಿಂದಲ್ಲ. ನಾರಾಯಣಾಚಾರ್ಯರು ಹೇಳುತ್ತಾರೆ ಕುರುರಾಜ್ಯಕ್ಕೆ ದೃತರಾಷ್ಟ್ರನಿಗಾಗಲಿ, ದುರ್ಯೋಧನನಿಗಾಗಲಿ ಪಟ್ಟಾಭಿಷೇಕವಾಗಿರುವುದಿಲ್ಲ. ಇಂತಹ ದುರ್ಯೋಧನ ಕರ್ಣನಿಗೆ ಅಂಗರಾಜ್ಯವನ್ನು ಕೊಡುವುದು ಯಾವ ನ್ಯಾಯ. ಅಲ್ಲಿದ್ದ ಹಿರಿಯರಾದ ಭೀಷ್ಮರು, ದೃತರಾಷ್ಟ್ರ ಯಾರೂ ಇದನ್ನು ಪ್ರತಿಭಟಿಸಲಿಲ್ಲ. ಇದು ಪಾಂಡವರಿಗೆ ಮಾಡಿದ ಮೋಸವಲ್ಲವೇ?

ಸರಿ ಮುಂದೆ ದ್ಯೂತದಲ್ಲಿ ರಾಜ್ಯವನ್ನು, ಸೋದರರನ್ನು ಸೋತ ಧರ್ಮರಾಜ ಕೊನೆಗೆ ದ್ರೌಪದಿಯನ್ನು ಪಣವಾಗಿ ಇಡುತ್ತಾನೆ. ದ್ರೌಪದಿಯನ್ನು ದ್ಯೂತದಲ್ಲಿ ಸೋತಮೇಲೆ ದ್ರೌಪದಿಯನ್ನು ಸಭೆಗೆ ಕರೆಸಿ ಅವಮಾನ ಮಾಡಬೇಕೆಂದು ಕರ್ಣನೇ ದುರ್ಯೋದನನಿಗೆ ಹೇಳಿಕೊಡುತ್ತಾನೆ. ಈ ವಿಷಯವನ್ನು ಪಂಪನಾಗಲೀ, ಕುಮಾರವ್ಯಾಸರಾಗಲೀ ತಮ್ಮ ಮಹಾಭಾರತದಲ್ಲಿ ಎತ್ತಿತೋರಿಸುವುದಿಲ್ಲ. ಆದರೆ ಮೂಲ ಮಹಾಭಾರತದಲ್ಲಿ ವೇದವ್ಯಾಸರು ಕರ್ಣನ ನಿಜವಾದ ಗುಣವನ್ನು ತೆರೆದಿಟ್ಟಿದ್ದಾರೆ. ರಜಸ್ವಲೆಯಾದ ದ್ರೌಪದಿಯನ್ನು ದುಶ್ಯಾಸನ ಅವಳ ಮುಡಿ ಹಿಡಿದು ಸಭೆಗೆ ಎಳೆತಂದು ಅವಮಾನ ಮಾಡುತ್ತಿದ್ದಾಗ ಮಹಾವೀರನಾದ ಕರ್ಣ ದುರ್ಯೋದನನೊಂದಿಗೆ ಸೇರಿ ತಮಾಷೆ ನೋಡುತ್ತಕೇಕೆ ಹಾಕುತ್ತಿರುತ್ತಾನೆ. ಮೋಸದ ದ್ಯೂತವನ್ನು ಸೋತ ಧರ್ಮರಾಜ ಮತ್ತು ಬೀಮಾರ್ಜುನರು ತಮ್ಮ ಮುಂದೆಯೇ ತಮ್ಮ ಪತ್ನಿಗಾಗುತ್ತಿರುವ ಅವಮಾನವನ್ನು ನೋಡಿಕೊಂದು ತಲೆತಗ್ಗಿಸಿರುತ್ತಾರೆ. ಭೀಷ್ಮ,ದ್ರೋಣ, ಕೃಪರಂಥ ಹಿರಿಯರೆಲ್ಲಾ ಇಂತಹ ಹೇಯ ಕೃತ್ಯವನ್ನು ನೋಡಿಯೂ ಏನೂ ಮಾಡಲಾಗದೆ ತಲೆತಗ್ಗಿಸಿರುತ್ತಾರೆ. ಆಗ ಪತಿವ್ರತೆಯಾದ ದ್ರೌಪದಿಯ ಸಹಾಯಕ್ಕೆ ಬರುವುದು ಕೃಷ್ಣನೊಬ್ಬನೇ.

ಮುಂದೆ ಪಾಂಡವರು ವನವಾಸದಲ್ಲಿ ಕಷ್ಟ ಅನುಭವಿಸುತ್ತಿದ್ದಾಗ ಅವರಿಗೆ ಇನ್ನೂ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ದುರ್ಯೋದನ ಕರ್ಣರು ಅರಮನೆಯ ವೇಶ್ಯೆಯರ ಸಂಗಡ ಬಂದು ಪಾಂಡವರು ವಾಸಿಸುತ್ತಿದ್ದ ಆಶ್ರಮದ ಮುಂದೆ ಸ್ವಚ್ಚಂದವಾಗಿ ವಿಹರಿಸುತ್ತಾರೆ. ಆಗ ಹತ್ತಿರದಲ್ಲೇ ಬೀಡು ಬಿಟ್ಟಿದ್ದ ಗಂಧರ್ವಸೇನೆ ಬಂದು ಕರ್ಣ-ದುರ್ಯೋದನರನ್ನು ಯುದ್ಧದಲ್ಲಿ ಸೋಲಿಸಿ ಕಟ್ಟಿಹಾಕಿ ಸ್ವರ್ಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಆಗ ದುರ್ಯೊದನ, ಕರ್ಣರ ಹೆಂಡತಿಯರು ಧರ್ಮರಾಯನಲ್ಲಿಗೆ ಬಂದು ತಮ್ಮ ಗಂಡಂದಿರನ್ನು ರಕ್ಷಿಸಬೇಕೆಂದು ಗೋಗರೆಯುತ್ತಾರೆ. ಧರ್ಮಾರಾಜನು ಅವರನ್ನು ಬಿಡಿಸಿಕೊಂಡು ಬರಲು ಬೀಮಾರ್ಜುನರನ್ನು ಕಳುಹಿಸುತ್ತಾನೆ. ಅವರು ಗಂಧರ್ವರಿಂದ ಕರ್ಣ ದುರ್ಯೋಧನರನ್ನು ಬಿಡಿಸಿಕೊಂಡು ಬರುತ್ತಾರೆ. ಆದರೆ ಗಂಧರ್ವರು ಅವರನ್ನು ಕಟ್ಟಿ ಹಾಕಿದ್ದ ಬಂಧನವನ್ನು ಬಿಡಿಸಲು
ಪತಿವ್ರತೆಗೆ ಮಾತ್ರ ಸಾಧ್ಯ ಎಂದು ಹೇಳಿರುತ್ತಾರೆ. ದುರ್ಯೋಧನನ ಪತ್ನಿ ಭಾನುಮತಿಯಾಗಲಿ, ಕರ್ಣನ ಪತ್ನಿಗಾಗಲಿ ಆ ಬಂಧವನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ಪತಿವ್ರತೆಯಾದ ಪಂಚಪಾಂಡವರ ಪತ್ನಿ ದ್ರೌಪದಿ ತನ್ನ ಕಾಲಿನಿಂದ ಮುಟ್ಟಿದಾಗ ಗಂಧರ್ವರು ಕಟ್ಟಿದ್ದ ಬಂಧನ ಕಳಚಿಕೊಳ್ಳುತ್ತದೆ. ಹೀಗೆ ಬಿಡುಗಡೆಗೊಂಡ ನಂತರ ಮೊದಲಿಗೆ ಊರಿಗೆ ಓಟ ಕಿತ್ತವನೇ ಕರ್ಣ. ಇಂತಹ ಕರ್ಣನು ನಿಜವಾಗಿ ವೀರನೇ? ಎಂದು ನಾರಾಯಣಾಚಾರ್ಯರು ಕೇಳುತ್ತಾರೆ.

ಕರ್ಣನು ಸಂಧ್ಯಾವಂದನೆ ಮಾಡುತ್ತಿರುವಾಗ ಇಂದ್ರನು ಅವನ ಬಳಿಗೆ ಬ್ರಾಹ್ಮಣನ ವೇಷದಲ್ಲಿ ಬಂದು ದಾನ ಕೇಳುತ್ತಾನೆ. ಆಗ ಸೂರ್ಯದೇವನು ತನ್ನ ಪುತ್ರ ಕರ್ಣನಿಗೆ ಇಂದ್ರನು ಬಂದ ಕಾರಣವನ್ನು ಹೇಳಿ ತನ್ನ ಕವಚ-ಕುಂಡಲಗಳನ್ನು ದಾನ ಪಡೆಯಲು ಇಂದ್ರ ಬಂದಿದ್ದಾನೆ ಎಂದು ತಿಳಿಸುತ್ತಾನೆ. ದಾನ ಕೊಡುವಾಗ ಇಂದ್ರನ ಬಳಿ ಇರುವ ಶಕ್ತ್ಯಾಯುಧವನ್ನು ಕೇಳಿ ಪಡೆ ಎಂದು ಕರ್ಣನಿಗೆ ಸಲಹೆ ನೀಡುತ್ತಾನೆ. ಅದರಂತೆ ಬ್ರಾಹ್ಮಣ ವೇಷದಲ್ಲಿ ಬಂದಿದ್ದ ಇಂದ್ರನಿಗೆ ಅವನ ಕೋರಿಕೆಯಂತೆ ತನ್ನ ಕವಚವನ್ನೂ, ಕರ್ಣ ಕುಂಡಲಗಳನ್ನು ಕತ್ತರಿಸಿ ಕೊಟ್ಟು ಶಕ್ತ್ಯಾಯುಧವನ್ನು ಇಂದ್ರನಿಂದ ಪಡೆಯುತ್ತಾನೆ. ಹೀಗೆ ಒಂದು ವಸ್ತುವನ್ನು ಕೊಟ್ಟು ಇನ್ನೊಂದನ್ನು ಪಡೆಯುವುದು ದಾನವೇ ಎಂದು ನಾರಾಯಣಾಚಾರ್ಯರು ಪ್ರಶ್ನಿಸುತ್ತಾರೆ. ಕರ್ಣನೊಬ್ಬ ದಾನಶೂರ ಎಂಬುದೆಲ್ಲ ಕಟ್ಟು ಕಥೆ. ಅವನಿಗೆ ಬಿಟ್ಟಿಯಾಗಿ ಬಂದ ಅಂಗರಾಜ್ಯದ ಧನವನ್ನು ಕೇಳಿದವರಿಗೆ ದಾನಕೊಡುವುದು ಪರಧನವನ್ನು ಬೇರೆಯವರಿಗೆ ಧಾನ ಕೊಟ್ಟಂತೆ ಅಷ್ಟೇ ಎಂದು ಹೇಳುತ್ತಾರೆ.
ಇಂದ್ರನು ಕೊಟ್ಟ ಶಕ್ತ್ಯಾಯುಧವನ್ನು ಯುದ್ಧದಲ್ಲಿ ಅರ್ಜುನನ ಮೇಲೆ ಪ್ರಯೋಗಿಸ ಬೇಕೆಂದಿದ್ದವನು ಅದನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿ ಕಳೆದುಕೊಂಡು ಮೂರ್ಖತನ ತೋರುತ್ತಾನೆ ಕರ್ಣ.

ಕುರುಕ್ಷೇತ್ರ ಯುದ್ಧದಲ್ಲಿ ಬೀಷ್ಮ ಸೇನಾಪತಿಯಾಗಿರುವವರೆಗೆ ತಾನು ಯುದ್ಧಮಾಡುವುದಿಲ್ಲವೆಂದು ಯುದ್ಧದಿಂದ ಹಿಂದೆ ಸರಿದ ಕರ್ಣನು ಒಟ್ಟು ಹದಿನೆಂಟು ದಿವಸದ ಯುದ್ಧದಲ್ಲಿ ಹತ್ತು ದಿವಸ ಯುದ್ಧಮಾಡಲೇ ಇಲ್ಲ. ಭೀಷ್ಮನ ನಿವೃತ್ತಿಯಾಗಿ, ದ್ರೊಣಾಚಾರ್ಯರು ಸೇನಾಧಿಪತಿಯಾದಾಗ ಕರ್ಣನು ಯುದ್ಧದಲ್ಲಿ ತೊಡಗಿಕೊಂಡನು. ದ್ರೋಣಾಚಾರ್ಯರು ಕೃಷ್ಣಾರ್ಜುನರು ಇಲ್ಲದಿರುವ ಸಮಯ ನೋಡಿಕೊಂಡು ಚಕ್ರವ್ಯೂಹ ರಚಿಸಿದಾಗ ಪಾಂಡವರ ಕಡೆ ಅದನ್ನು ಬೇಧಿಸಲು ಶಕ್ತನಾದವನು ಅರ್ಜುನನ ಪುತ್ರನಾದ ಅಭಿಮನ್ಯುವೊಬ್ಬನೇ. ಚಕ್ರವ್ಯೂಹದ ಒಳಗೆ ನುಗ್ಗಲು ಮಾತ್ರ ತಿಳಿದಿದ್ದ ಅಭಿಮನ್ಯು ಚಕ್ರವ್ಯೂಹದೊಳಗೆ ನುಗ್ಗಿ ವೀರಾವೇಷದಿಂದ ಹೋರಾಡಿದನು. ಕೌರವರ ಕಡೆಯವರು ವೀರ ಅಭಿಮನ್ಯುವನ್ನು ಎದುರಿಸಲಾಗದೆ ತತ್ತರಿಸುತ್ತಿರುವಾಗ ಎದುರಿನಿಂದ ಅಭಿಮನ್ಯುವನ್ನು ಎದುರಿಸಲಾಗದ ಕರ್ಣನು ಮೋಸದಿಂದ ಅಭಿಮನ್ಯುವಿನ ಹಿಂದೆ ಹೋಗಿ ಅವನ ಕವಚವನ್ನು ಕತ್ತರಿಸಿದನು. ನಂತರ ಒಬ್ಬೊಬರಾಗಿ ಅಭಿಮನ್ಯೌವನ್ನು ಸುತ್ತುವರಿದು ಅವನನ್ನು ಮೋಸದಿಂದ ಕೊಂದರು. ತನ್ನ ಕೈಗಳನ್ನು ಕಳೆದುಕೊಂಡು ಮುನ್ನುಗಿ ತನ್ನ ಉಸಿರಿರುವವರೆಗೆ ಯುದ್ಧಮಾಡಿದ ಅಭಿಮನ್ಯು ವೀರನೇ? ಅಥವಾ ಮೋಸದಿಂದ ಅಭಿಮನ್ಯುವಿನ ಕವಚವನ್ನು ಕತ್ತರಿಸಿ, ಅವನನ್ನು ಕೊಲ್ಲಿಸಿದ ಕರ್ಣ ವೀರನೇ? ಎಂದು ನಾರಾಯಣಾಚಾರ್ಯರು ಕೇಳುತ್ತಾರೆ.

ಕೊನೆಗೆ ಕರ್ಣನ ಸೇನಾದಿಪತ್ಯದಲ್ಲಿ ಕರ್ಣನಿಗೆ ಸಾರಥಿಯಾಗಿ ಶಲ್ಯನು ಬಂದಾಗ ಶಲ್ಯನಿಗೂ ಕರ್ಣನಿಗೂ ವಾಗ್ವಾದ ನಡೆಯುತ್ತೆ. ಶಲ್ಯನು ತಾನು ಹೇಳಿದಂತೆ ಕೇಳದಿದ್ದರೆ ರಥಬಿಟ್ಟು ಹೋಗುವೆನೆಂದು ಹೇಳಿದ್ದನು.
ಕರ್ಣನಿಗೂ ಅರ್ಜುನನಿಗೂ ಯುದ್ಧ ನಡೆದಿರುವಾಗ ಕರ್ಣನ ಬತ್ತಳಿಕೆಯಲ್ಲಿ ಸರ್ಪಾಸ್ತ್ರವೊಂದು ಅರ್ಜುನನ ಮೇಲೆ ಸೇಡುತೀರಿಸಿಕೊಳ್ಳಲು ಕಾದಿತ್ತು. ಆ ಸರ್ಪಾಸ್ತ್ರವನ್ನು ತೆಗೆದುಕೊಂಡ ಕರ್ಣನು ಅರ್ಜುನನ ತಲೆಗೆ
ಗುರಿಯಿಟ್ಟನು. ಅದನ್ನು ನೋಡಿದ ಶಲ್ಯನು ತಲೆಗೆ ಗುರಿಯಿಡಬೇಡ ಎದೆಗೆ ಗುರಿಯಿಡು ಎಂದು ಹೇಳಿದರೂ ಕೇಳದೆ ತಲೆಗೆ ಗುರಿ ಇಟ್ಟು ಹೊಡೆದನು. ಆಗ ಕೃಷ್ಣನು ರಥದ ಕುದುರೆಗಳನ್ನು ಬಗ್ಗಿಸಲು ರಥವು ಕೆಳಗೆ ಹೋಗಿ ಆ ಬಾಣವು ಅರ್ಜುನನ ಕಿರೀಟವನ್ನು ಹಾರಿಸಿಕೊಂಡು ಹೋಯಿತು. ಆ ಸರ್ಪಾಸ್ತ್ರ ಮತ್ತೆ ಕರ್ಣನ ಬಳಿಗೆ ಬಂದು ಮತ್ತೊಮ್ಮೆ ಅರ್ಜುನನ ಎದೆಗೆ ಗುರಿಯಿಟ್ಟು ಬಿಡು ಎಂದಿತು. ಆದರೆ ಕರ್ಣನು ತೊಟ್ಟ ಬಾಣವನ್ನು ಮತ್ತೆ ತೊಡಲಾರೆ ಎಂದು ಪ್ರತಿಜ್ಞೆ ಮಾಡಿರುವುದರಿಂದ ಅದು ಸಾಧ್ಯವಿಲ್ಲ ಎಂದನು. ತನ್ನ ಮಾತನ್ನು ಕರ್ಣ ಕೇಳಲಿಲ್ಲ ಎಂದು ಶಲ್ಯನು ರಥ ಬಿಟ್ಟು ಹೊರಟು ಹೋದನು.

ಕರ್ಣನು ತಾನೇ ರಥವನ್ನು ನಡೆಸಿಕೊಂಡು ಯುದ್ಧ ಮುಂದುವರಿಸಿದಾಗ, ಅವನ ರಥದ ಚಕ್ರ ರಕ್ತದ ಮಡುವಿನಲ್ಲಿ ಸಿಕ್ಕಿಕೊಂಡಿತು. ಸಿಕ್ಕಿಕೊಂಡಿರುವ ರಥದ ಚಕ್ರವನ್ನು ಮೇಲಕೆತ್ತಲು ಕರ್ಣನು ಪ್ರಯತ್ನಿಸುತ್ತಿದ್ದಾಗ ಕೃಷ್ಣನು ಅರ್ಜುನನಿಗೆ ಇದೇ ಸರಿಯಾದ ಸಮಯ, ಕರ್ಣನನ್ನು ಮುಗಿಸು ಎಂದನು. ಆಗ ಕರ್ಣನು ಇದು ಧರ್ಮವಲ್ಲ. ಆಯುಧವನ್ನು ಕೆಳಗಿಟ್ಟಿರುವಾಗ ಯುದ್ಧಮಾಡುವುದು ಅಧರ್ಮ ಎಂದನು. ಇದನ್ನು ಕೇಳಿ ಕೃಷ್ಣನು ಕೊನೆಗೂ ಕರ್ಣನ ಬಾಯಲ್ಲಿ ಧರ್ಮ ಎಂಬ ಮಾತು ಬಂತಲ್ಲ ಎಂದು ನಕ್ಕನು. ರಜಸ್ವಲೆಯಾದ ದ್ರೌಪದಿಯನ್ನು ಸಭೆಯಲ್ಲಿ ಎಲ್ಲರಮುಂದೆ ಅವಮಾನಿಸುತ್ತಿದ್ದಾಗ ನಿನಗೆ ಧರ್ಮ ತಿಳಿಯಲಿಲ್ಲವೇ, ವೀರ ಅಭಿಮನ್ಯುವಿನ ಕವಚವನ್ನು ಹಿಂದಿನಿಂದ ಕತ್ತರಿಸಿದಾಗ ನಿನ್ನ ಧರ್ಮ ಎಲ್ಲಿ ಹೋಗಿತ್ತು ಎಂದು ಕೃಷ್ಣನು ಕರ್ಣನ್ನು ಛೇಡಿಸಿದನು. ಪಾಂಡವರ ವಿರುದ್ಧ ಅಧರ್ಮದಿಂದ ಹಗೆ ಸಾಧಿಸಿದ ಕರ್ಣನಿಗೆ ತನ್ನ ಪ್ರಾಣ ಹೋಗುವ ಸಮಯದಲ್ಲಿ ಧರ್ಮದ ನೆನೆಪಾಗಿದ್ದು ವಿಪರ್ಯಾಸ ಎಂದು ನಾರಾಯಣಾಚಾರ್ಯರು ಕರ್ಣನ ಪಾತ್ರವನ್ನು ವೇದವ್ಯಾಸರ ಮೂಲ ಮಹಾಭಾರತದಲ್ಲಿದ್ದಂತೆ ನಮಗೆ ವಿವರಿಸಿದ್ದಾರೆ.

ಕರ್ಣನ ಪಾತ್ರವಲ್ಲದೇ ಭೀಷ್ಮ, ದ್ರೋಣ, ಧೃತರಾಷ್ಟ್ರ, ದ್ರೌಪದಿ, ಭೀಮ, ಕೃಷ್ಣರ ಪಾತ್ರಗಳನ್ನು ತಮ್ಮ ಮಹಾಭಾರತ ಪಾತ್ರ ಪ್ರಪಂಚ ಪುಸ್ತಕದಲ್ಲಿ ಮತ್ತು ಪ್ರವಚನಗಳಲ್ಲಿ ನಮ್ಮ ಮುಂದೆ ತೆರೆದಿಡುತ್ತಾರೆ.
ಆದ್ದರಿಂದ ಮೂಲಮಹಾಭಾರತದಲ್ಲಿರುವಂತೆ ನಾವು ಮಹಾಭಾರತದ ಘಟನೆಗಳನ್ನು, ಪಾತ್ರಗಳನ್ನು ಅರಿತುಕೊಂಡು ಅದರಂತೆ ಆ ಪಾತ್ರಗಳಲ್ಲಿನ ತಪ್ಪುಗಳನ್ನು ನಮ್ಮ ಜೀವನದಲ್ಲಿ ಮಾಡದೆ ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕೆಂದು ಹೇಳಿದ್ದಾರೆ.

Comments

  1. Every body is changing the stories according to their views and their favours. But the face is Karna is great warrior and many things are not acceptable as per vedavyasa Bharata about Karna as Prof. Narayanachar mentioned. may be he is not liked karna. Karna is the reborn of Sugreeva as per both Vedavyasabharata and kumaravyasabharata. In tretayuga Sugreeva was made Vali to death with the help of Srirama. same thing is in reversal in Dwaparayuga. i.e., Vali is reborn as Arjuna and Surgreeva was reborn as Karna. and Vishnu will born as Srikrishna and support to Arjuna.

    ReplyDelete
    Replies
    1. ಹೌದು ಸರ್ ನಿಮ್ಮ ಮಾತುಗಳು ಸಂಪೂರ್ಣ ಸತ್ಯ.....

      Delete

Post a Comment

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು