ಭಾವಸಂಗಮ: ಕನ್ನಡ ಭಾವಗೀತೆಗಳ ಜನಪ್ರಿಯ ಸಂಗ್ರಹ

ತನುವು ನಿನ್ನದು.. ಮನವು ನಿನ್ನದು.. ಎನ್ನ ಜೀವನ ಧನವು ನಿನ್ನದು..ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು..’ ರಾಷ್ಟ್ರಕವಿ ಕುವೆಂಪು ಅವರ ಈ ಕಾವ್ಯಸುಧೆಯನ್ನು ಓದಿದರೇ ರೋಮಾಂಚನವಾಗುತ್ತೆ, ಇನ್ನು ಇದಕ್ಕೆ ಮೈಸೂರು ಅನಂತಸ್ವಾಮಿಯವರ ಸಂಗೀತವೂ ಮೇಳೈಸಿದರೆ ಅದರ ಸೊಗಸೇ ಬೇರೆ !
ಹೌದು ಕವಿಯೊಬ್ಬ ತನ್ನಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡವುತ್ತಾನೆ. ಆದರೆ ಈ ಕಾವ್ಯ ತಲುಪುವುದು ಓದುವುದರಲ್ಲಿ ಆಸಕ್ತಿಯಿರುವ ಕೆಲವೇ ಕೆಲವು ಮಂದಿಗೆ ಮಾತ್ರ. ಇದೇ ಕಾವ್ಯಕ್ಕೆ ಸುಮಧುರವಾದ ಸಂಗೀತ ಸಂಯೋಜಿಸಿ ಸುಶ್ರಾವ್ಯವಾದ ಕಂಠದಲ್ಲಿ ಹಾಡಿಸಿದರೆ ಅದರ ಗಮ್ಮತ್ತೇ ಬೇರೆ.
ಈ ರೀತಿ ಸಂಗೀತ ಸಂಯೋಜಿಸಿದ ಭಾವಗೀತೆಗಳು ಹೆಚ್ಚು ಜನರನ್ನು ತಲುಪಿ ಅವರ ಮನತಣಿಸುತ್ತದೆ. ಕಾವ್ಯವನ್ನು ಓದುವುದಕ್ಕಿಂತ ಅದನ್ನು ಸಂಗೀತದೊಂದಿಗೆ ಕೇಳಿದಾಗ, ಆ ಕಾವ್ಯದಲ್ಲಿರುವ ಭಾವನೆಗಳು ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತವೆ.

ಕನ್ನಡದಲ್ಲಿ ಈ ತರಹದ ಕಾವ್ಯ ಮತ್ತು ಸಂಗೀತದ ಮಿಲನ ವಿಶಿಷ್ಟವಾದ ‘ಸುಗಮ ಸಂಗೀತ’ ಪ್ರಕಾರವನ್ನೇ ಸೃಷ್ಟಿಸಿದೆ. ಭಾರತದ ಭಾಷೆಗಳಲ್ಲೇ ಉರ್ದು ಭಾಷೆಯ ಗಜಲ್‌ಗಳನ್ನು ಹೊರತುಪಡಿಸಿದರೆ, ಕನ್ನಡದ ಸುಗಮ ಸಂಗೀತ ಪ್ರಕಾರ ಅನನ್ಯವಾಗಿದೆ. ಕನ್ನಡದ ‘ಸುಗಮ ಸಂಗೀತ’ ಪ್ರಕಾರ ಬಹಳ ಸುಮಧುರವಾಗಿ, ವಿಶಿಷ್ಟವಾಗಿದೆ ಎಂದು ಪ್ರಖ್ಯಾತ ಹಿನ್ನೆಲೆ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯಂ ಅವರೇ ತಮ್ಮ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯವಾಗಿದೆ. ಕಳೆದ ವರ್ಷ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಕನ್ನಡವೇ ಸತ್ಯ’ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಕನ್ನಡಿಗರು ಸೇರಿದ್ದರೆಂಬುದೇ, ಈ ‘ಸುಗಮ ಸಂಗೀತ’ ಪ್ರಕಾರ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ.

ಕನ್ನಡದಲ್ಲಿ ಮೊಟ್ಟಮೊದಲಿಗೆ ಪ್ರಖ್ಯಾತ ಕವಿಗಳ ಕವನಗಳಿಗೆ ಸಂಗೀತ ಸಂಯೋಜಿಸಿ, ಹಾಡುವ ಪರಂಪರೆ ಬೆಳೆಸಿದ ಕೀರ್ತಿ ದಿವಂಗತ ಪಿ.ಕಾಳಿಂಗರಾಯರಿಗೆ ಸಲ್ಲುತ್ತದೆ. ಅವರ ನಂತರ ಕನ್ನಡ ಕವಿಗಳ ಗೀತೆಗಳಿಗೆ ಉತ್ಕೃಷ್ಟ ಸಂಗೀತ ನೀಡಿದವರು ದಿವಂಗತ ಮೈಸೂರು ಅನಂತಸ್ವಾಮಿಯವರು. ಅವರ ಭಾವಸಂಗಮ ದ್ವನಿಸುರುಳಿ, ಕನ್ನಡ ಭಾವಗೀತೆಗಳ ಪ್ರಕಾರದಲ್ಲೇ ಅತ್ಯಂತ ಜನಪ್ರಿಯ ದ್ವನಿಯಸುರುಳಿಯಾಗಿದೆ.
ಈ ದ್ವನಿಸುರುಳಿಯ ಹತ್ತೂ ಕವನಗಳು ಭಾವಪೂರ್ಣವಾಗಿವೆ. ಅದರಲ್ಲಿ ನನ್ನ ಮೆಚ್ಚಿನ ಏಳು ಕವನಗಳ ಬಗ್ಗೆ ಒಂದಿಷ್ಟು ಮಾತು. ಬನ್ನಿ ಭಾವಸಂಗಮದ ಭಾವಲೋಕದಲ್ಲಿ ತೇಲೋಣ.

ಭಾವಸಂಗಮ ದ್ವನಿಸುರುಳಿಯ ಮೊದಲ ಗೀತೆ ಕುವೆಂಪು ಅವರ ಕವನ

ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ, ಋಣವು ಮಾತ್ರವೆ ನನ್ನದು||

ನೀನು ಹೊಳೆದರೆ ನಾನು ಹೊಳೆವೆನು, ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು, ನನ್ನ ಮರಣದ ಮರಣವು||

ನನ್ನ ಮನದಲ್ಲಿ ನೀನೆ ಯುಕ್ತಿ, ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾಮೋಹಶಕ್ತಿಯು, ನನ್ನ ಜೀವನ ಮುಕ್ತಿಯು||

ಈ ಗೀತೆಯನ್ನು ಕುವೆಂಪು ಅವರು ಬಹುಶ: ಸರ್ವಶಕ್ತನಾದ ಪರಮಾತ್ಮನ ಬಗ್ಗೆ ಬರೆದಿರಬೇಕೆಂದು ನನ್ನ ಅನಿಸಿಕೆ. ಇದರಲ್ಲಿ ಕುವೆಂಪು ಅವರು ತನ್ನದೇನು ಇಲ್ಲಾ, ಎಲ್ಲಾ ಭಗವಂತನದು, ಆ ಶಕ್ತಿಯಿಲ್ಲದಿದ್ದರೆ ತಾನಿಲ್ಲ, ಅದೇ ತನಗೆ ಮುಕ್ತಿ ಎಂದು ತಮ್ಮನ್ನು ತಾವೇ ಆ ಸಚ್ಚಿದಾನಂದ ಶಕ್ತಿಗೆ ಅತ್ಯಂತ ಭಕ್ತಿಭಾವಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಈ ಗೀತೆಯನ್ನು ಕೇಳುತ್ತಾ ನಾವೂ ಕೂಡ ಆ ಶಕ್ತಿಗೆ ತಲೆಬಾಗಿರುತ್ತೇವೆ. ಅಷ್ಟು ಮನಮಿಡಿಯುವಂತೆ ಅನಂತಸ್ವಾಮಿಯವರು ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಭಾವಸಂಗಮದ ಎರಡನೇ ಗೀತೆ ಕೆ.ಎಸ್. ನರಸಿಂಹಸ್ವಾಮಿಯವರ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ ||

ಈ ಕವನ ಹೆಂಡತಿಯನ್ನು ಪ್ರೀತಿಸುವ ಎಲ್ಲಾ ಗಂಡಂದಿರಿಗೂ ಅಚ್ಚುಮೆಚ್ಚಿನದಾಗಿರುತ್ತದೆ ಎಂದು ಭಾವಿಸಿದ್ದೇನೆ. ನನಗೆ ಕೂಡ ಈ ಗೀತೆ ಬಹಳ ಇಷ್ಟ! ಈ ಹಾಡಿನ ತಾಳಕ್ಕೆ ಎಲ್ಲರೂ ಕುಣಿಯುವಂತೆ ಸಂಗೀತ ಸಂಯೋಜಿಸಿದ್ದಾರೆ ಅನಂತಸ್ವಾಮಿಯವರು. ‘ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೊಬ್ಬ ಬಡಪಾಯಿ’ ಎಂದು ನರಸಿಂಹಸ್ವಾಮಿಯವರ ಕವನದ ಸಾಲನ್ನು ತಿರುಚುವ “ಪಾಪ ಪಾಂಡು” ತರಹದ ಗಂಡಂದಿರೂ ಇರುತ್ತಾರೆ!

ಈ ದ್ವನಿಸುರುಳಿಯಲ್ಲಿನ ಎರಡು ಕವನಗಳು ಅದರ ವೈರುಧ್ಯದಿಂದ ನನಗೆ ಬಹಳ ಇಷ್ಟವಾಗಿದೆ. ಒಂದು ಕುವೆಂಪು ಅವರ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಕವನ ಮತ್ತೊಂದು ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಬಾ ಸವಿತಾ’ ಕವನ. ಈ ಎರಡು ಕವನಗಳು ಒಂದಕ್ಕೊಂದು ವೈರುಧ್ಯದಿಂದ ಕೂಡಿವೆ ಎಂದೆನಿಸಿದರೂ, ಅವುಗಳಲ್ಲಿನ ಭಾವ ಅನನ್ಯವಾಗಿದೆ. ಮಾಸ್ತಿಯವರು

ಓಂ ತತ್ಸವಿತುರ್ವರೇಣ್ಯವೆಂಬವು, ಅಂಥಲ್ಲದೆ ಬೇರಿಹದನು ನಂಬೆವು
ಪಂಥವ ಬೆಳಗಿಸಿ ನಿರುಪಿಸಿ ಕಾಂಬೆವು, ಶಾಂತ ಸುಂದರ ಶಿವದಾ ಸವಿತಾ ||

ಎಂದು ನಮ್ಮ ಧಾರ್ಮಿಕ ತತ್ವವನ್ನು ನಿರೂಪಿಸಿದ್ದರೆ, ಕುವೆಂಪು ಅವರು

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ||

ಎಂದು ಅಧ್ಯಾತ್ಮದ ಮತ್ತೊಂದು ರೂಪವನ್ನು ಎತ್ತಿ ಹಿಡಿದ್ದಿದ್ದಾರೆ.

ಭಾವಸಂಗಮದ ಕವನಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಜಿ.ಎಸ್. ಶಿವರುದ್ರಪ್ಪನವರ ‘ಎದೆತುಂಬಿ ಹಾಡಿದೆನು’ ಕವನ. ಇದು ನನಗೂ ಅಚ್ಚುಮೆಚ್ಚು.

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ..
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ ||

ಎಂದು ಕವಿಯು ಒಂದು ಹಾಡುಹಕ್ಕಿಯ ಭಾವನೆಗಳನ್ನು ಕಾಲ್ಪಾನಿಕವಾದರೂ ಮನಮುಟ್ಟುವಂತೆ ತಿಳಿಸಿದ್ದಾರೆ. ನಾವು ಯಾವುದೇ ಪ್ರಚಾರದ ಆಸೆ ಇಲ್ಲದೆ ನಮ್ಮ ಕೆಲಸವನ್ನು ಮಾಡಿಕೊಂಡು ಹೋಗಬೇಕೆಂಬ ನೀತಿ ಇದರಲ್ಲಿ ಅಡಗಿದೆ. ಅಷ್ಟೇ ಮಧುರವಾಗಿ ಹಾಡಿದ್ದಾರೆ ಹಾಡುಹಕ್ಕಿ ಅನಂತಸ್ವಾಮಿಯವರು.

ಇನ್ನು ಕನ್ನಡ ಕಾವ್ಯಲೋಕದಲ್ಲಿ ಅತ್ಯಂತ ವಿಶಿಷ್ಟವಾದ ಛಾಪು ಮೂಡಿಸಿದ ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು’ ಕವನ ಅತ್ಯಂತ ಭಾವಪೂರ್ಣವಾಗಿದೆ. ಇದರಲ್ಲಿ ಅವರು

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ||

ಎಂದು ನಮ್ಮಲ್ಲಿರುವ ವಸ್ತುವನ್ನ, ಸುಖವನ್ನ ಕಡೆಗಣಿಸಿ ಎಲ್ಲೋ ದೂರದಲ್ಲಿ ಇನ್ನೂ ಹೆಚ್ಚು ಸುಖ ಸಿಗಬಹುದೆಂದು ಹುಡುಕುವ, ಮನುಷ್ಯನ ಸ್ವಭಾವವನ್ನು ಮನೋಜ್ಞವಾಗಿ ತಿಳಿಸಿದ್ದಾರೆ. ಈ ಗೀತೆಗೆ ಅಷ್ಟೇ ಮಧುರವಾಗಿ ರಾಗ ಸಂಯೋಜಿಸಿದ್ದಾರೆ ಅನಂತಸ್ವಾಮಿಯವರು. ಇದೇ ಗೀತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ನಿರ್ದೇಶನದ ‘ಅಮೆರಿಕ ಅಮೆರಿಕ’ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

ಭಾವಸಂಗಮದಲ್ಲಿನ ಕೆ.ಎಸ್.ನರಸಿಂಹಸ್ವಾಮಿಯವರ

ಅತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ.. ಜೋ.. ಜೋ.. ಜೋ.. ||

ಎಂಬ ಕವನ ಈ ದ್ವನಿಸುರುಳಿಯ ಕೊನೆಯಲ್ಲಿ ಎಲ್ಲಾ ಚಿಂತೆಗಳನ್ನು ಮರೆಸಿ ಕೇಳುಗರನ್ನು ಸವಿಯಾದ ನಿದಿರೆಗೆ ಕರೆದೊಯ್ಯುತ್ತದೆ. ಆ ರೀತಿ ಜೋಗುಳದ ಸಂಗೀತವನ್ನು ಅಳವಡಿಸಿದ್ದಾರೆ ಅನಂತಸ್ವಾಮಿಯವರು.

ಹೇಳಿ ಭಾವಸಂಗಮ ನಿಮ್ಮನ್ನೂ ಭಾವಲೋಕದಲ್ಲಿ ತೇಲಿಸಿದೆಯೇ?

Comments

Popular posts from this blog

ಶಿವಬಸವ - ಬಸವೇಶ್ವರ ವಚನಗಳು

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

“ಭಕ್ತ ಕುಂಬಾರ”ದ ಹುಣಸೂರರು