“ಭಕ್ತ ಕುಂಬಾರ”ದ ಹುಣಸೂರರು
ಕನ್ನಡ ಚಿತ್ರಗಳ ಇತಿಹಾಸದಲ್ಲಿ ಭಕ್ತಿಭಾವ ಪ್ರಧಾನ ಚಿತ್ರಗಳ ಕುರಿತು ಹಿನ್ನೋಟ ಬೀರಿದರೆ ನಮ್ಮ ನೆನಪಿಗೆ ಬರುವುದು ಭಕ್ತ ಕನಕದಾಸ , ಭಕ್ತ ಕುಂಬಾರ , ಸಂತ ತುಕಾರಾಂ , ಭಕ್ತ ಜ್ಞಾನದೇವ , ಭಕ್ತ ಸಿರಿಯಾಳ , ಪುರಂದರದಾಸರು(ನವಕೋಟಿನಾರಾಯಣ) , ಮಂತ್ರಾಲಯ ಮಹಾತ್ಮೆ ಮುಂತಾದ ಚಿತ್ರಗಳು. ಭಕ್ತ ಕನಕದಾಸ , ಭಕ್ತ ಕುಂಬಾರ , ಪುರಂದರದಾಸರ ಪಾತ್ರದಲ್ಲಿ ಕನ್ನಡದ ಮೇರು ನಟ ಡಾ. ರಾಜ್ ಅಮೋಘವಾಗಿ ನಟ್ಟಿಸಿದ್ದಾರೆ ಎನ್ನುವ ಬದಲು ಡಾ.ರಾಜ್ ಆ ಪಾತ್ರಗಳಲ್ಲೇ ಒಂದಾಗಿದ್ದಾರೆ ಎನ್ನಬಹುದು. ಅಷ್ಟು ತನ್ಮಯತೆಯಿಂದ ಭಕ್ತಿರಸವನ್ನು ತಮ್ಮ ಅಭಿನಯದಲ್ಲಿ ಹೊಮ್ಮಿಸಿದ್ದಾರೆ. ನಮಗೆ ಇಂದಿಗೂ ಶ್ರೀ ಕನಕದಾಸರನ್ನಾಗಲಿ , ಭಕ್ತ ಕುಂಬಾರನನ್ನಾಗಲೀ ಅಥವಾ ಪುರಂದರದಾಸರನ್ನಾಗಲೀ ನೆನೆಸಿಕೊಂಡರೆ ಡಾ. ರಾಜ್ ಅವರೇ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತಾರೆ. ಅದರಲ್ಲೂ ಭಕ್ತ ಕುಂಬಾರದಲ್ಲಿನ ಪುರಂದರ ವಿಠಲನ ಭಕ್ತನಾದ ಗೋರನ ಪಾತ್ರದ ಅಭಿನಯ ಎಲ್ಲಾ ಭಕ್ತಿ ಪಾತ್ರಗಳನ್ನೂ ಮೀರಿಸುತ್ತದೆ ಎಂದರೆ ತಪ್ಪಾಗಲಾರದು. ಡಾ.ರಾಜ್ ಮೂಲಕ ಕನ್ನಡಿಗರಿಗೆ ಭಕ್ತಿರಸ ಉಣಿಸಿದ ಕೀರ್ತಿ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ದಿವಂಗತ ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲಬೇಕು. ಹುಣಸೂರು ಕೃಷ್ಣಮೂರ್ತಿಯವರು ಒಳ್ಳೆಯ ನಿರ್ದೇಶಕರಾಗಿದ್ದರಲ್ಲದೇ , ಶ್ರೇಷ್ಠ ಸಾಹಿತಿಯೂ ಆಗಿದ್ದರು. ಅವರು ನಿರ್ದೇಶಿಸಿದ ಚಿತ್ರಗಳು ಬಹುಪಾಲು ಪೌರಾಣಿಕ , ಐತಿಹಾಸಿಕ ಮತ್ತು ಭಕ್ತಿ ಪ್ರಧಾನ ಚಿತ್ರ...